ಕವಿತೆಯಿಂದ ರಾಷ್ಟ್ರೀಯ ಗೀತೆಯಾಗುವವರೆಗೆ: ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಗೀತೆಯ 150 ವರ್ಷಗಳ ಇತಿಹಾಸ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ ವಂದೇ ಮಾತರಂ ಕೇವಲ ಒಂದು ಗೀತೆಯಲ್ಲ, ಕೋಟ್ಯಂತರ ಭಾರತೀಯರ ಭಾವನಾತ್ಮಕ ಶಕ್ತಿ. ಒಂದು ಕವಿತೆಯಾಗಿ ಹುಟ್ಟಿ, ದೇಶದ ರಾಷ್ಟ್ರೀಯ ಗೀತೆಯಾಗಿ ಬೆಳೆದುಬಂದ ಈ ಅಪರೂಪದ ಗೀತೆಯ ಕಾಲಗಣನೆ ಮತ್ತು ಇತ್ತೀಚಿನ ಕಾನೂನು ಬದಲಾವಣೆಗಳ ವಿವರ ಇಲ್ಲಿದೆ.
A picture of the rehearsal for the 80th Independence Day celebrations held at the Red Fort in Delhi on August 13, 2026.
2026ರ ಆಗಸ್ಟ್ 13ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆಯ ತಾಲಿಮೀನ ಚಿತ್ರ Online Desk
Updated on

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕಿಚ್ಚನ್ನು ಮನೆಮನೆಗೆ ತಲುಪಿಸಿದ "ವಂದೇ ಮಾತರಂ" ಗೀತೆ ಕೇವಲ ಒಂದು ರಚನೆಯಲ್ಲ, ಕೋಟ್ಯಂತರ ಭಾರತೀಯರ ಭಾವನಾತ್ಮಕ ಧ್ವನಿ. ಹಾಗಾಗಿಯೇ, ಇತಿಹಾಸದಲ್ಲಿಯೇ ವಂದೇ ಮಾತರಂ ಗೀತೆಗೆ ವಿಶಿಷ್ಟ ಸ್ಥಾನವಿದೆ. ಸಾಹಿತ್ಯ ಚಕ್ರವರ್ತಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಬರೆದು, ನಂತರ ತಮ್ಮ ಆನಂದಮಠ ಕಾದಂಬರಿಯಲ್ಲಿ ಸೇರಿಸಿದ ಈ ಗೀತೆ ಸಾಹಿತ್ಯ ಲೋಕದಿಂದ ಸ್ವಾತಂತ್ರ್ಯ ಚಳವಳಿಗೆ ಕಾಲಿಟ್ಟು ಅಂತಿಮವಾಗಿ ಭಾರತದ ರಾಷ್ಟ್ರೀಯ ಗೀತೆಯಾಯಿತು. ಇದರ ಇತಿಹಾಸವು ಹಲವಾರು ವಿಭಿನ್ನ ಹಂತಗಳನ್ನು ಒಳಗೊಂಡಿದೆ. ಇನ್ನು, 80ನೇ ಸ್ವಾತಂತ್ರ್ಯ ದಿನದಂದು, ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪು ಕೋಟೆಯ ಮೇಲೆ ಸಂಪೂರ್ಣವಾಗಿ ಮೊಳಗಿ ಹೊಸ ಇತಿಹಾಸ ಸೃಷ್ಟಿಸಿದೆ. ಅದರಲ್ಲೂ, ಈ ವರ್ಷ ವಂದೇ ಮಾತರಂ ಹಾಡಿಗೆ 150 ವರ್ಷಗಳು ತುಂಬುತ್ತಿರುವುದರಿಂದ ಈ ಘಟನೆಗೆ ಮತ್ತಷ್ಟು ವಿಶೇಷತೆ ಬಂದಿದೆ. ಈ ಎಲ್ಲದರ ನಡುವೆ, ಸರ್ಕಾರವು ಇದರ ದುರುಪಯೋಗವನ್ನು ತಡೆಯಲು ಕಾನೂನು ಜಾರಿಗೆ ತಂದ ನಂತರ, ಈ ಗೀತೆಯ ರೋಚಕ ಇತಿಹಾಸ ಹಾಗೂ ಇತ್ತೀಚಿನ ಮಹತ್ವದ ಬದಲಾವಣೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

ವಂದೇ ಮಾತರಂ ಕಾಲಗಣನೆ

  • ನವೆಂಬರ್ 7, 1875: ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ಸಂಪಾದಿಸಿದ ಬಂಗಾಳಿ ಸಾಹಿತ್ಯ ಪತ್ರಿಕೆ ಬಂಗದರ್ಶನ್‌ನಲ್ಲಿ 'ವಂದೇ ಮಾತರಂ' ಮೊದಲು ಪ್ರಕಟವಾಯಿತು.

  • 1882: ಬಂಕಿಮ ಚಂದ್ರ ಅವರ ಆನಂದಮಠ ಕಾದಂಬರಿ ಪ್ರಕಟವಾದಾಗ ಈ ಕವಿತೆಯನ್ನು ಅದರಲ್ಲಿ ಸೇರಿಸಲಾಯಿತು.

  • ಡಿಸೆಂಬರ್ 28, 1896: ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 12ನೇ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ರವೀಂದ್ರನಾಥ ಟ್ಯಾಗೋರ್ ಅವರು ವಂದೇ ಮಾತರಂ ಹಾಡಿದರು.

  • ಆಗಸ್ಟ್ 7, 1905: ಬಂಗಾಳ ವಿಭಜನೆಯ ವಿರುದ್ಧದ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಕಲ್ಕತ್ತಾದಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ವಂದೇ ಮಾತರಂ ಅನ್ನು ರಾಜಕೀಯ ಘೋಷಣೆಯಾಗಿ ಬಳಸಲಾಯಿತು.

  • 1905: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಾರಣಾಸಿ ಅಧಿವೇಶನದಲ್ಲಿ, ಪಕ್ಷವು ಅಖಿಲ ಭಾರತ ಮಟ್ಟದ ಸಂದರ್ಭಗಳಿಗಾಗಿ ಈ ಹಾಡನ್ನು ಅಳವಡಿಸಿಕೊಂಡಿತು.

  • ಏಪ್ರಿಲ್ 1906: ಬಾರಿಸಾಲ್‌ನಲ್ಲಿ ನಡೆದ ಬಂಗಾಳ ಪ್ರಾಂತೀಯ ಸಮ್ಮೇಳನದಲ್ಲಿ ಬ್ರಿಟಿಷ್ ಅಧಿಕಾರಿಗಳು ಸಾರ್ವಜನಿಕವಾಗಿ ವಂದೇ ಮಾತರಂ ಹಾಡುವುದನ್ನು ನಿಷೇಧಿಸಿದರು. ತದನಂತರ ಸಮ್ಮೇಳನವನ್ನೇ ರದ್ದುಗೊಳಿಸಿದರು.

  • ಆಗಸ್ಟ್ 22, 1907: ಜರ್ಮನಿಯ ಸ್ಟಟ್‌ಗಾರ್ಟ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಸಮಾಜವಾದಿ ಸಮ್ಮೇಳನದಲ್ಲಿ ಮೇಡಂ ಭಿಕಾಜಿ ಕಾಮಾ ಅವರು ಭಾರತೀಯ ತ್ರಿವರ್ಣ ಧ್ವಜದ ಆರಂಭಿಕ ಆವೃತ್ತಿಯನ್ನು ಹಾರಿಸಿದರು; ಆ ಧ್ವಜದಲ್ಲಿ ದೇವನಾಗರಿ ಲಿಪಿಯಲ್ಲಿ ವಂದೇ ಮಾತರಂ ಎಂದು ಬರೆಯಲಾಗಿತ್ತು.

  • ಅಕ್ಟೋಬರ್ 26, 1937: ರವೀಂದ್ರನಾಥ ಟ್ಯಾಗೋರ್ ಅವರು ಜವಾಹರಲಾಲ್ ನೆಹರು ಅವರಿಗೆ ಪತ್ರ ಬರೆದು, ಕವಿತೆಯ ಮೊದಲ ಭಾಗವನ್ನು ರಾಷ್ಟ್ರೀಯ ಬಳಕೆಗೆ ಯಾಕೆ ಸೂಕ್ತವೆಂದು ಪರಿಗಣಿಸಲಾಗಿದೆ ಎಂಬುದನ್ನು ವಿವರಿಸಿದರು.

  • ಅಕ್ಟೋಬರ್ 26 – ನವೆಂಬರ್ 1, 1937: ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಕಲ್ಕತ್ತಾದಲ್ಲಿ ಸಭೆ ಸೇರಿ ವಂದೇ ಮಾತರಂ ಕುರಿತು ಚರ್ಚಿಸಿ, ರಾಷ್ಟ್ರೀಯ ಸಭೆಗಳಲ್ಲಿ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಬೇಕೆಂದು ಶಿಫಾರಸು ಮಾಡಿತು.

  • ಆಗಸ್ಟ್ 14–15, 1947: ಐತಿಹಾಸಿಕ ಸಂವಿಧಾನ ಸಭೆಯ ಮಧ್ಯರಾತ್ರಿಯ ಅಧಿವೇಶನದಲ್ಲಿ ಜವಾಹರಲಾಲ್ ನೆಹರು ಅವರ "ಟ್ರಿಸ್ಟ್ ವಿತ್ ಡೆಸ್ಟಿನಿ" ಭಾಷಣಕ್ಕೂ ಮುನ್ನ ಸ್ವಾತಂತ್ರ್ಯ ಹೋರಾಟಗಾರ್ತಿ ಸುಚೇತಾ ಕೃಪಲಾನಿ ಅವರು ವಂದೇ ಮಾತರಂನ ಮೊದಲ ಶ್ಲೋಕವನ್ನು ಹಾಡಿದರು.

  • ಆಗಸ್ಟ್ 15, 1947: ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಸುಮಾರು 6:30 ಕ್ಕೆ ಪಂಡಿತ್ ಓಂಕಾರನಾಥ್ ಠಾಕೂರ್ ಅವರು ಆಲ್ ಇಂಡಿಯಾ ರೇಡಿಯೋದಲ್ಲಿ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರು.

  • ಜನವರಿ 24, 1950: ಸಂವಿಧಾನ ಸಭೆಯ ಅಂತಿಮ ಸಭೆಯಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು ಜನ ಗಣ ಮನ ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಯೂ, ಸ್ವಾತಂತ್ರ್ಯ ಹೋರಾಟದಲ್ಲಿನ ಐತಿಹಾಸಿಕ ಪಾತ್ರಕ್ಕಾಗಿ ವಂದೇ ಮಾತರಂ ಅನ್ನು ಸಮಾನ ಗೌರವ ಹಾಗೂ ಸ್ಥಾನಮಾನ ಹೊಂದಿರುವ ರಾಷ್ಟ್ರೀಯ ಗೀತೆಯನ್ನಾಗಿಯೂ ಘೋಷಿಸಿದರು.

  • ಡಿಸೆಂಬರ್ 23, 1971: 'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ ಕಾಯ್ದೆ, 1971' ಜಾರಿಗೆ ಬಂದಿತು (ಸೆಕ್ಷನ್ 3 ರಾಷ್ಟ್ರಗೀತೆಗೆ ಉದ್ದೇಶಪೂರ್ವಕ ಅಡ್ಡಿ ಉಂಟುಮಾಡುವುದನ್ನು ಅಪರಾಧವೆಂದು ಪರಿಗಣಿಸುತ್ತದೆ).

  • ಜನವರಿ 28, 2026: ಗೃಹ ಸಚಿವಾಲಯವು ಭಾರತದ ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಹೊರಡಿಸಿ, ಅದರ ಅಧಿಕೃತ ಆವೃತ್ತಿ ಮತ್ತು ಬಳಕೆಯ ಮಾರ್ಗಸೂಚಿಗಳನ್ನು ಪ್ರಕಟಿಸಿತು.

  • ಜುಲೈ 24 – ಆಗಸ್ಟ್ 11, 2026: ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026 ಸಂಸತ್ತಿನಲ್ಲಿ ಅಂಗೀಕಾರಗೊಂಡು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆ ಪಡೆಯಿತು. ಇದರ ಮೂಲಕ ವಂದೇ ಮಾತರಂಗೂ ಶಾಸನಬದ್ಧ ರಕ್ಷಣೆ ವಿಸ್ತರಿಸಲಾಯಿತು.

A picture of the rehearsal for the 80th Independence Day celebrations held at the Red Fort in Delhi on August 13, 2026.
'ಜನ ಗಣ ಮನ' ರಾಷ್ಟ್ರಗೀತೆಯಲ್ಲ, ಬ್ರಿಟನ್ ರಾಣಿ ಎಲಿಜಬೆತ್ ಗಾಗಿ ಬರೆದದ್ದು; ವಂದೇ ಮಾತರಂ ರಾಷ್ಟ್ರಗೀತೆಯಾಗಿ ಬದಲಿಸಬೇಕು'

ವಂದೇ ಮಾತರಂ ಪದದ ಅರ್ಥವೇನು?

ವಂದೇ ಮಾತರಂ ಅನ್ನು ಸಾಮಾನ್ಯವಾಗಿ "ತಾಯಿ, ನಾನು ನಿನಗೆ ನಮಸ್ಕರಿಸುತ್ತೇನೆ" ಎಂದು ಅನುವಾದಿಸಲಾಗುತ್ತದೆ. ಇಲ್ಲಿ ತಾಯಿ ಎಂದರೆ ಮಾತೃಭೂಮಿ. ಅದರಂತೆ, ಆರಂಭಿಕ ಚರಣಗಳು ಪ್ರಕೃತಿ, ಫಲವತ್ತತೆ, ಸೌಂದರ್ಯ ಮತ್ತು ಸಮೃದ್ಧಿಯ ಭಾಷೆಯನ್ನು ಬಳಸಿಕೊಂಡು ಭೂಮಿಯನ್ನು ಪೋಷಿಸುವ ಮತ್ತು ಪೂಜ್ಯ ಉಪಸ್ಥಿತಿಯಾಗಿ ಚಿತ್ರಿಸುತ್ತವೆ.

ಇದನ್ನು ಬರೆದವರು ಯಾರು ಮತ್ತು ಮೊದಲು ಪ್ರಕಟವಾಗಿದ್ದು ಯಾವಾಗ?

ಇದನ್ನು 19ನೇ ಶತಮಾನದ ಪ್ರಸಿದ್ಧ ಬಂಗಾಳಿ ಸಾಹಿತಿಯಾದ ಸಾಹಿತ್ಯ ಚಕ್ರವರ್ತಿ ಎನಿಸಿಕೊಂಡಿರುವ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿದರು. ಈ ಕವಿತೆಯನ್ನು ಸಂಸ್ಕೃತೀಕೃತ ಬಂಗಾಳಿಯಲ್ಲಿ ಗಣನೀಯ ಸಂಸ್ಕೃತ ಶಬ್ದಕೋಶದೊಂದಿಗೆ ಬರೆಯಲಾಗಿದೆ. ಇದು ಮೊದಲ ಬಾರಿಗೆ ನವೆಂಬರ್ 7, 1875 ರಂದು ಬಂಗದರ್ಶನ್ ಪತ್ರಿಕೆಯಲ್ಲಿ ಪ್ರಕಟವಾಯಿತು. ಅದರಲ್ಲೂ ಈ ಹಾಡು ಪ್ರಕಟವಾಗಿ, ಇಂದಿಗೆ ಅಧಿಕೃತವಾಗಿ ಹಾಡಿಗೆ 150 ವರ್ಷ.

ಆನಂದಮಠ ಎಂದರೇನು?

ಆನಂದಮಠವು ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರ ಪ್ರಸಿದ್ಧ ಬಂಗಾಳಿ ಕಾದಂಬರಿಯಾಗಿದ್ದು, 1882 ರಲ್ಲಿ ಪ್ರಕಟವಾಯಿತು. ವಂದೇ ಮಾತರಂ ಗೀತೆಯು ಈ ಕಾದಂಬರಿಯಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಮಾತೃಭೂಮಿ, ತ್ಯಾಗ ಮತ್ತು ಪ್ರತಿರೋಧದ ಸಾಹಿತ್ಯಿಕ ನಿರೂಪಣೆಗೆ ಸಂಬಂಧಿಸಿದೆ.

ಮೂಲ ಕವಿತೆಯಲ್ಲಿ ಎಷ್ಟು ಚರಣಗಳಿವೆ?

ಈ ಕವಿತೆಯ ಆರಂಭಿಕ ಮೂಲ ರೂಪದಲ್ಲಿ ಕೇವಲ 2 ಚರಣಗಳು ಅಥವಾ 12 ಸಾಲುಗಳು ಮಾತ್ರ ಇದ್ದವು. ನಂತರ ಬಂಕಿಮ ಚಂದ್ರರು ತಮ್ಮ 'ಆನಂದಮಠ' ಕಾದಂಬರಿಯ ಕಥಾವಸ್ತುವಿಗೆ ಸರಿಹೊಂದುವಂತೆ ಹೆಚ್ಚುವರಿ ಚರಣಗಳು ಮತ್ತು ಸಾಲುಗಳೊಂದಿಗೆ ಅದನ್ನು ವಿಸ್ತರಿಸಿದರು. ಇದರ ಫಲಿತಾಂಶವು 6 ಚರಣಗಳನ್ನು ಒಳಗೊಂಡಿರುವ ದೀರ್ಘ ಆವೃತ್ತಿಯಾಗಿದೆ. ಇದರಲ್ಲಿ, ವ್ಯತ್ಯಾಸವು ಮುಖ್ಯ; ಯಾಕೆಂದರೆ ಮೊದಲ 2 ಚರಣಗಳು ತರುವಾಯ ರಾಷ್ಟ್ರೀಯ ಬಳಕೆಗೆ ಆಯ್ಕೆಯಾದ ಭಾಗವಾಗಿದ್ದವು, ಆದರೆ ವಿಸ್ತೃತ ಪಠ್ಯವು ಗಣನೀಯವಾಗಿ ವಿಭಿನ್ನ ಚಿತ್ರಣವನ್ನು ಒಳಗೊಂಡಿತ್ತು.

ಮೊದಲ 2 ಚರಣಗಳು ಏಕೆ ಮುಖ್ಯವಾಗಿವೆ?

ಮೊದಲ 2 ಚರಣಗಳು ಮಾತೃಭೂಮಿಯ ನೈಸರ್ಗಿಕ ಸೌಂದರ್ಯ, ಹಸಿರು ಮತ್ತು ಸಮೃದ್ಧಿಯ ವರ್ಣನೆಯ ಮೇಲೆ ಕೇಂದ್ರೀಕರಿಸುತ್ತವೆ. ಇವುಗಳಲ್ಲಿ ಯಾವುದೇ ನಿರ್ದಿಷ್ಟ ದೇವತೆಯ ಉಲ್ಲೇಖಗಳಿಲ್ಲ. ಹೀಗಾಗಿ 1937 ರಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ರಾಷ್ಟ್ರೀಯ ಸಭೆಗಳಲ್ಲಿ ಈ ಮೊದಲ 2 ಚರಣಗಳನ್ನು ಮಾತ್ರ ಹಾಡಬೇಕೆಂದು ಶಿಫಾರಸು ಮಾಡಿತು.

ವಂದೇ ಮಾತರಂ ಅನ್ನು ಮೊದಲು ಸಾರ್ವಜನಿಕವಾಗಿ ಯಾವಾಗ ಹಾಡಲಾಯಿತು?

ಡಿಸೆಂಬರ್ 28, 1896 ರಂದು ಕಲ್ಕತ್ತಾದಲ್ಲಿ ನಡೆದ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ 12ನೇ ಅಧಿವೇಶನದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಲಾಯಿತು. ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಅವರು ಹಾಡಿನ ಆರಂಭಿಕ ಭಾಗವನ್ನು ತಮ್ಮದೇ ರಾಗದಲ್ಲಿ ಸಂಯೋಜಿಸಿ ಹಾಡಿದರು.

ಆಗಸ್ಟ್ 7, 1905 ಯಾಕೆ ಮುಖ್ಯವಾಗಿತ್ತು?

ಬಂಗಾಳ ವಿಭಜನೆಯ ವಿರುದ್ಧದ ಸ್ವದೇಶಿ ಚಳವಳಿಯ ಸಂದರ್ಭದಲ್ಲಿ ಕಲ್ಕತ್ತಾದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ವಂದೇ ಮಾತರಂ ಅನ್ನು ಮೊದಲ ಬಾರಿಗೆ ರಾಜಕೀಯ ಘೋಷಣೆಯಾಗಿ ಬಳಸಲಾಯಿತು. ಜೊತೆಗೆ, ಆ ವರ್ಷದ ಕೊನೆಯಲ್ಲಿ ವಾರಣಾಸಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ, ಇದನ್ನು ರಾಷ್ಟ್ರೀಯ ಆಂದೋಲನದ ಸಂಕೇತವಾಗಿ ಅಂಗೀಕರಿಸಲಾಯಿತು.

ಏಪ್ರಿಲ್ 1906 ರಲ್ಲಿ ಬಾರಿಸಲ್‌ನಲ್ಲಿ ಏನಾಯಿತು?

ಬಾರಿಸಾಲ್‌ನಲ್ಲಿ ನಡೆದ ಬಂಗಾಳ ಪ್ರಾಂತೀಯ ಸಮ್ಮೇಳನದಲ್ಲಿ ಬ್ರಿಟಿಷ್ ಅಧಿಕಾರಿಗಳು ಸಾರ್ವಜನಿಕವಾಗಿ ವಂದೇ ಮಾತರಂ ಹಾಡುವುದನ್ನು ನಿಷೇಧಿಸಿದರು ಮತ್ತು ನಂತರ ಇಡೀ ಸಮ್ಮೇಳನವನ್ನೇ ನಿಷೇಧಿಸಿದರು. ಅದರಲ್ಲೂ, ಈ ಘಟನೆ, ಹಾಡಿಗೂ ಬ್ರಿಟಿಷರ ಆಳ್ವಿಕೆಯ ಪ್ರತಿರೋಧಕ್ಕೂ ಇರುವ ಸಂಬಂಧವನ್ನು ಮತ್ತಷ್ಟು ಬಲಪಡಿಸಿತು.

ಹಾಗಾದರೆ, ಆ 6 ಚರಣಗಳಲ್ಲಿ ಏನಿದೆ?

  • 1 ಮತ್ತು 2ನೇ ಚರಣ: ಪ್ರಕೃತಿ ಸೌಂದರ್ಯ ಮತ್ತು ಸಮೃದ್ಧಿ ಮೊದಲ ಎರಡು ಚರಣಗಳಲ್ಲಿ ತಾಯ್ನಾಡಿನ ನೈಸರ್ಗಿಕ ಸೊಬಗು, ಶುದ್ಧ ನೀರಿನ ಸೆಲೆಗಳು, ತಂಪಾದ ಮಲಯ ಮಾರುತಗಳು, ಫಲವತ್ತಾದ ಕೃಷಿ ಭೂಮಿ, ಹಚ್ಚಹಸಿರಿನ ಸಸ್ಯ ಸಂಪತ್ತು ಮತ್ತು ಬೆಣ್ಣೆಯಂತಹ ಚಂದ್ರನ ಬೆಳಕನ್ನು ವರ್ಣಿಸಲಾಗಿದೆ. ಇಡೀ ಭೂಮಿಯನ್ನು ಪ್ರಜೆಗಳನ್ನು ಪ್ರೀತಿಯಿಂದ ಪೋಷಿಸುವ ತಾಯಿಯಾಗಿ ಇಲ್ಲಿ ಚಿತ್ರಿಸಲಾಗಿದೆ.

  • 3ನೇ ಚರಣ: ಸಾಮೂಹಿಕ ಶಕ್ತಿ ಮತ್ತು ಒಗ್ಗಟ್ಟು ಈ ಚರಣವು ದೇಶದ ಜನರ ಒಗ್ಗಟ್ಟು ಮತ್ತು ಅಗಾಧ ಶಕ್ತಿಯನ್ನು ಬಿಂಬಿಸುತ್ತದೆ. ಕೋಟ್ಯಂತರ ಜನರ ಕಂಠಗಳಿಂದ ಹೊರಹೊಮ್ಮುವ ಗರ್ಜನೆ, ಕೋಟ್ಯಂತರ ಕೈಗಳಲ್ಲಿರುವ ಸಾಮೂಹಿಕ ಬಲವನ್ನು ವರ್ಣಿಸುತ್ತಾ ತಾಯ್ನಾಡಿಗೆ ಅಸಾಧಾರಣ ರಕ್ಷಣಾ ಶಕ್ತಿ ಇದೆ ಎಂಬುದನ್ನು ಸಾರುತ್ತದೆ.

  • 4ನೇ ಚರಣ: ಜ್ಞಾನ, ಕರ್ತವ್ಯ ಮತ್ತು ಆಧ್ಯಾತ್ಮಿಕ ಶಕ್ತಿ ತಾಯ್ನಾಡೇ ನಮ್ಮ ಜ್ಞಾನ, ನಮ್ಮ ಧರ್ಮ, ನಮ್ಮ ಹೃದಯದಲ್ಲಿರುವ ಭಕ್ತಿ ಮತ್ತು ನಮ್ಮ ದೇಹದಲ್ಲಿರುವ ಪ್ರಾಣ ಎಂಬ ಭಾವನಾತ್ಮಕ ಸಮರ್ಪಣೆಯನ್ನು ಇದು ಒಳಗೊಂಡಿದೆ. ಆದರಂತೆ, ತಾಯಿಯ ಪ್ರೇರಣೆಯೇ ಎಲ್ಲ ಶಕ್ತಿಗೂ ಮೂಲ ಎಂದು ಇಲ್ಲಿ ವಿವರಿಸಲಾಗಿದೆ.

  • 5ನೇ ಚರಣ: ದೈವಿಕ ರೂಪಕಗಳು ಮತ್ತು ಸಾಂಸ್ಕೃತಿಕ ಚಿತ್ರಣ ಈ ಭಾಗದಲ್ಲಿ ಮಾತೃಭೂಮಿಯನ್ನು ಸಾಂಸ್ಕೃತಿಕ ಮತ್ತು ದೈವಿಕ ಸಂಕೇತಗಳಾಗಿ ನೋಡಲಾಗಿದೆ. ಶಕ್ತಿಯ ಪ್ರತೀಕವಾಗಿ ದುರ್ಗಾ, ಸಮೃದ್ಧಿ ಮತ್ತು ಐಶ್ವರ್ಯದ ದೇವತೆಯಾಗಿ ಲಕ್ಷ್ಮಿ ಹಾಗೂ ವಿದ್ಯಾ ಪ್ರದಾಯಿನಿಯಾಗಿ ಸರಸ್ವತಿಯ ರೂಪದಲ್ಲಿ ತಾಯಿಯನ್ನು ಆರಾಧಿಸಲಾಗಿದೆ.

  • 6ನೇ ಚರಣ: ಕರುಣಾಮಯಿ ತಾಯಿಗೆ ಅಂತಿಮ ನಮನ ಕೊನೆಯ ಚರಣದಲ್ಲಿ ಮತ್ತೆ ಸುಂದರವಾದ, ಪವಿತ್ರವಾದ ಮತ್ತು ಎಲ್ಲವನ್ನೂ ದಯಪಾಲಿಸುವ ಮಾತೃಭೂಮಿಯ ಕರುಣಾಮಯಿ ಸ್ವರೂಪಕ್ಕೆ ಮರಳಿ, ಭಕ್ತಿಯಿಂದ ನಮಸ್ಕರಿಸಿ ಗೀತೆಯನ್ನು ಸಂಪನ್ನಗೊಳಿಸಲಾಗಿದೆ.

1937 ರಲ್ಲಿ ಏನಾಯಿತು?

ವಂದೇ ಮಾತರಂ ಕುರಿತು ರಾಜಕೀಯ ಕಳವಳಗಳು ಹೆಚ್ಚಾದಾಗ, ಸೆಪ್ಟೆಂಬರ್ 28, 1937 ರಂದು ಡಾ. ರಾಜೇಂದ್ರ ಪ್ರಸಾದ್ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರಿಗೆ ಪತ್ರ ಬರೆದು, ವಂದೇ ಮಾತರಂ ಬಗ್ಗೆ ಹೆಚ್ಚುತ್ತಿರುವ ಸಾರ್ವಜನಿಕ ಮತ್ತು ರಾಜಕೀಯ ಆತಂಕಗಳ ಬಗ್ಗೆ ಕಳವಳ ವ್ಯಕ್ತಪಡಿಸಿ, ಸ್ಪಷ್ಟ ನಿಲುವು ತೆಗೆದುಕೊಳ್ಳಲು ಕೋರಿದರು. ಆ ಬಳಿಕ ಅಕ್ಟೋಬರ್ 26 ರಿಂದ ನವೆಂಬರ್ 1, 1937 ರವರೆಗೆ ಕಲ್ಕತ್ತಾದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ವಂದೇ ಮಾತರಂ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಆ ವೇಳೆ, ಸುಭಾಷ್ ಚಂದ್ರ ಬೋಸ್ ಮತ್ತು ಜವಾಹರಲಾಲ್ ನೆಹರು ಅವರು ಈ ಹಾಡಿನ ಬಗ್ಗೆ ರವೀಂದ್ರನಾಥ ಟ್ಯಾಗೋರ್ ಅವರ ಸಲಹೆಯನ್ನು ಕೋರಿದ್ದರು. ಅದರಂತೆ, ರಾಷ್ಟ್ರೀಯ ಸಭೆಗಳಲ್ಲಿ ಮೊದಲ ಎರಡು ಚರಣಗಳನ್ನು (ಭೂಮಿಯ ನೈಸರ್ಗಿಕ ಸೌಂದರ್ಯ ಮತ್ತು ವೈಭವವನ್ನು ವಿವರಿಸುವ ಆರಂಭಿಕ ಭಾಗ) ಮಾತ್ರ ಹಾಡಬೇಕೆಂದು ಟ್ಯಾಗೋರ್ ಸಲಹೆ ನೀಡಿದರು. ಇದರ ತರುವಾಯು, ರಾಷ್ಟ್ರೀಯ ಸಭೆಗಳಲ್ಲಿ ಕೇವಲ ಮೊದಲ ಎರಡು ಚರಣಗಳನ್ನು ಮಾತ್ರ ಹಾಡಲು  ಕಾರ್ಯಕಾರಿ ಸಮಿತಿಯು ಅನುಮೋದಿಸಲಾಯಿತು.

1937 ರ ಶಿಫಾರಸಿನ ಹಿಂದಿನ ಕಾರಣವೇನು?

ಮೊದಲ ಎರಡು ಚರಣಗಳು ನೈಸರ್ಗಿಕ ಸೌಂದರ್ಯವನ್ನು ವಿವರಿಸುವುದರಿಂದ ಎಲ್ಲರಿಗೂ ಸ್ವೀಕಾರಾರ್ಹವಾಗಿದ್ದವು. ಜೊತೆಗೆ ಹೊರಟಗಾರರಿಂದ ಜನಪ್ರಿಯ ಬಳಕೆಯಲ್ಲಿಯೂ ಇತ್ತು. ಆದರೆ ನಂತರದ ಚರಣಗಳು ಎಲ್ಲರಿಗೂ ಸಮಾನವಾಗಿ ಒಪ್ಪಿತವಾಗದ ಧಾರ್ಮಿಕ ವಿಚಾರಗಳು ಹಾಗೂ ದೇವತೆಯ ಚಿತ್ರಣಗಳನ್ನು ಒಳಗೊಂಡಿದ್ದ ಕಾರಣ, ಹಾಡಿನ ರಾಷ್ಟ್ರೀಯ ಮಹತ್ವವನ್ನು ಕಾಪಾಡಲು ಮೊದಲ ಎರಡು ಚರಣಗಳಿಗೆ ಮಾತ್ರ ಸೀಮಿತಗೊಳಿಸಲಾಯಿತು.

A picture of the rehearsal for the 80th Independence Day celebrations held at the Red Fort in Delhi on August 13, 2026.
3 ವರ್ಷ ಜೈಲು ಶಿಕ್ಷೆ ಫಿಕ್ಸ್: ಲೋಕಸಭೆಯಲ್ಲೂ 'ವಂದೇ ಮಾತರಂ' ಮಸೂದೆ ಅಂಗೀಕಾರ!

1947 ರ ಸ್ವಾತಂತ್ರ್ಯ ದಿನದಂದು ವಂದೇ ಮಾತರಂ ಏನಾಯಿತು?

  • ಆಗಸ್ಟ್ 14–15, 1947 ರ ಮಧ್ಯರಾತ್ರಿ ಜವಾಹರಲಾಲ್ ನೆಹರು ಅವರ "ಟ್ರಿಸ್ಟ್ ವಿತ್ ಡೆಸ್ಟಿನಿ" ಭಾಷಣಕ್ಕೂ ಮುನ್ನ ಸುಚೇತಾ ಕೃಪಲಾನಿ ಸಂವಿಧಾನ ಸಭೆಯಲ್ಲಿ ವಂದೇ ಮಾತರಂನ ಮೊದಲ ಚಾರಣವನ್ನು ಹಾಡಿದರು. ಇದರ ತರುವಾಯು, ಸ್ವತಂತ್ರ ಭಾರತದ ಸಂವಿಧಾನ ಸಭೆಯ ಮೊದಲ ಅಧಿವೇಶನವು ಆ ರಾತ್ರಿ ಎಲ್ಲಾ ಸದಸ್ಯರು ಜನ ಗಣ ಮನ ಹಾಡುವುದರೊಂದಿಗೆ ಮುಕ್ತಾಯಗೊಂಡಿತು .

  • ಆಗಸ್ಟ್ 15, 1947 ರ ಸ್ವಾತಂತ್ರ್ಯ ದಿನದ ಬೆಳಿಗ್ಗೆ ಸುಮಾರು 6:30 ಕ್ಕೆ ಆಲ್ ಇಂಡಿಯಾ ರೇಡಿಯೋದಲ್ಲಿ ಪಂಡಿತ್ ಓಂಕಾರನಾಥ್ ಠಾಕೂರ್ ಅವರು ಆ ದಿನ ಬೆಳಿಗ್ಗೆ ಸರಿಸುಮಾರು 6:30 ಕ್ಕೆ ಆಲ್ ಇಂಡಿಯಾ ರೇಡಿಯೋದಲ್ಲಿ ವಂದೇ ಮಾತರಂ ಹಾಡಿದರು.

ವಂದೇ ಮಾತರಂ ಅನ್ನು ರಾಷ್ಟ್ರೀಯ ಗೀತೆಯಾಗಿ ಯಾವಾಗ ಅಧಿಕೃತವಾಗಿ ಗುರುತಿಸಲಾಯಿತು?

ಜನವರಿ 24, 1950 ರಂದು ಸಂವಿಧಾನ ಸಭೆಯ ಅಂತಿಮ ಸಭೆಯಲ್ಲಿ ಡಾ. ರಾಜೇಂದ್ರ ಪ್ರಸಾದ್ ಅವರು 'ಜನ ಗಣ ಮನ' ಗೀತೆಯನ್ನು ರಾಷ್ಟ್ರಗೀತೆಯನ್ನಾಗಿಯೂ, ಸ್ವಾತಂತ್ರ್ಯ ಹೋರಾಟದ ಐತಿಹಾಸಿಕ ಹಿನ್ನೆಲೆಗಾಗಿ 'ವಂದೇ ಮಾತರಂ' ಅನ್ನು ಸಮಾನ ಸ್ಥಾನಮಾನ ಮತ್ತು ಗೌರವವಿರುವ ರಾಷ್ಟ್ರೀಯ ಗೀತೆಯನ್ನಾಗಿಯೂ (National Song) ಅಧಿಕೃತವಾಗಿ ಘೋಷಿಸಿದರು.

ಸಂವಿಧಾನದಲ್ಲಿ ವಂದೇ ಮಾತರಂ ಹೆಸರಿನಿಂದ ಉಲ್ಲೇಖಿಸಲಾಗಿದೆಯೇ?

ಇಲ್ಲ. ಸಂವಿಧಾನದಲ್ಲಿ 'ವಂದೇ ಮಾತರಂ' ಅನ್ನು ರಾಷ್ಟ್ರೀಯ ಗೀತೆ ಎಂದು ಹೆಸರಿಸುವ ಯಾವುದೇ ನಿರ್ದಿಷ್ಟ ವಿಧಿ ಇಲ್ಲ. ಇದರ ಸ್ಥಾನಮಾನವು ಜನವರಿ 24, 1950 ರ ಸಂವಿಧಾನ ಸಭೆಯ ಅಧಿಕೃತ ಘೋಷಣೆಯಿಂದ ಬಂದಿದೆ. ಅಂದರೆ, ಸಂವಿಧಾನದ 51(A) ವಿಧಿಯು ನಾಗರಿಕರಿಗೆ ಸಂವಿಧಾನವನ್ನು ಪಾಲಿಸಲು ಮತ್ತು ಅದರ ಆದರ್ಶಗಳು ಮತ್ತು ಸಂಸ್ಥೆಗಳು, ರಾಷ್ಟ್ರಧ್ವಜ ಮತ್ತು ರಾಷ್ಟ್ರಗೀತೆಯನ್ನು ಗೌರವಿಸಲು ಹೇಳುತ್ತದೆ.

1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆ ಏನಾಗಿತ್ತು?

ಇದು ರಾಷ್ಟ್ರೀಯ ಚಿಹ್ನೆಗಳು, ಧ್ವಜ ಮತ್ತು ರಾಷ್ಟ್ರಗೀತೆಗೆ ಅಗೌರವ ತೋರುವುದನ್ನು ತಡೆಯಲು ತರಲಾದ ಕೇಂದ್ರ ಕಾನೂನು. ಇದು ಡಿಸೆಂಬರ್ 23, 1971 ರಂದು ರಾಷ್ಟ್ರಪತಿಗಳ ಅನುಮೋದನೆಯನ್ನು ಪಡೆದು ಜಾರಿಗೆ ಬಂದಿತು.

1971 ರ ಕಾಯಿದೆಯ ಸೆಕ್ಷನ್ 3 ಏನು ಒದಗಿಸಿದೆ?

ಸೆಕ್ಷನ್ 3 ರ ಪ್ರಕಾರ, ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಹಾಡುವುದನ್ನು ತಡೆಯುವುದು ಅಥವಾ ಅದನ್ನು ಹಾಡುತ್ತಿರುವ ಸಭೆಗೆ ಅಡಚಣೆ ಉಂಟುಮಾಡುವುದು ಅಪರಾಧವಾಗಿದ್ದು, ಇದಕ್ಕೆ ಗರಿಷ್ಠ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡನ್ನೂ ವಿಧಿಸಲು ಅವಕಾಶ ಕಲ್ಪಿಸಿತ್ತು.

1971 ರ ಕಾನೂನು ನಿರ್ದಿಷ್ಟವಾಗಿ ವಂದೇ ಮಾತರಂ ಅನ್ನು ರಕ್ಷಿಸಿದೆಯೇ?

ಇಲ್ಲ. 1971 ರ ಮೂಲ ಕಾಯಿದೆಯ ಸೆಕ್ಷನ್ 3 ಕೇವಲ ರಾಷ್ಟ್ರಗೀತೆಯನ್ನು (ಜನ ಗಣ ಮನ) ಮಾತ್ರ ಉಲ್ಲೇಖಿಸಿತ್ತೇ ಹೊರತು ರಾಷ್ಟ್ರೀಯ ಗೀತೆಯನ್ನಲ್ಲ (ವಂದೇ ಮಾತರಂ).

ಹಾಗಾದರೆ, 2026 ರಲ್ಲಿ ಏನು ಬದಲಾಯಿತು?

'ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ) ಮಸೂದೆ, 2026' ಮೂಲಕ ರಾಷ್ಟ್ರಗೀತೆಗೆ ಇದ್ದ ಸೆಕ್ಷನ್ 3 ರ ರಕ್ಷಣೆಯನ್ನು ರಾಷ್ಟ್ರೀಯ ಗೀತೆ 'ವಂದೇ ಮಾತರಂ'ಗೂ ವಿಸ್ತರಿಸಲಾಯಿತು. ಮೊದಳಿಗೆ, ಈ ಮಸೂದೆಯನ್ನು ಜುಲೈ 24, 2026 ರಂದು ರಾಜ್ಯಸಭೆಯಲ್ಲಿ ಪರಿಚಯಿಸಲಾಯಿತು, ನಂತರ ಜುಲೈ 29 ರಂದು ರಾಜ್ಯಸಭೆಯಲ್ಲಿ ಅಂಗೀಕರಿಸಲಾಯಿತು ಮತ್ತು ಸಂಸತ್ತು ಜುಲೈ 30, 2026 ರಂದು ಅದರ ಅಂಗೀಕಾರವನ್ನು ಪೂರ್ಣಗೊಳಿಸಿತು.

ತಿದ್ದುಪಡಿ ಯಾವಾಗ ಕಾನೂನಾಯಿತು?

ಜುಲೈ 2026 ರಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡು, ಆಗಸ್ಟ್ 11, 2026 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಒಪ್ಪಿಗೆ ದೊರೆತ ನಂತರ ಇದು ಕಾನೂನಾಯಿತು. ಆದ್ದರಿಂದ ಇದು 1971 ರ ಕಾಯಿದೆಯಡಿಯಲ್ಲಿ ಸಂಬಂಧಿತ ಶಾಸನಬದ್ಧ ರಕ್ಷಣೆಯನ್ನು ರಾಷ್ಟ್ರೀಯ ಗೀತೆಯಾಗಿ ವಂದೇ ಮಾತರಂಗೂ ವಿಸ್ತರಿಸುತ್ತದೆ.

A picture of the rehearsal for the 80th Independence Day celebrations held at the Red Fort in Delhi on August 13, 2026.
ಮದರಸಾಗಳಲ್ಲಿ 'ವಂದೇ ಮಾತರಂ' ಹಾಡಿದರೆ ಆಕಾಶ ಕಳಚಿ ಬೀಳುವುದಿಲ್ಲ: ಕೋಲ್ಕತ್ತಾ ಹೈಕೋರ್ಟ್

ಈಗ ನಿಖರವಾಗಿ ಏನು ಶಿಕ್ಷಾರ್ಹ?

ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆ ಅಥವಾ ರಾಷ್ಟ್ರೀಯ ಗೀತೆಯನ್ನು ಹಾಡುವುದನ್ನು ತಡೆಯುವುದು, ಅಥವಾ ಅದನ್ನು ಹಾಡುತ್ತಿರುವ ಸಭೆಗೆ ಅಡ್ಡಿಪಡಿಸುವುದು ಶಿಕ್ಷಾರ್ಹ ಅಪರಾಧ. ಇದಕ್ಕೆ 3 ವರ್ಷಗಳವರೆಗೆ ಜೈಲು ಶಿಕ್ಷೆ, ದಂಡ ಅಥವಾ ಎರಡೂ ಇರುತ್ತದೆ.

ಹೊಸ ಕಾನೂನು ಎಲ್ಲರೂ ವಂದೇ ಮಾತರಂ ಹಾಡಬೇಕೆಂದು ಹೇಳುತ್ತದೆಯೇ?

ಇಲ್ಲ. ಕಾನೂನು ಕೇವಲ ಉದ್ದೇಶಪೂರ್ವಕವಾಗಿ ಹಾಡುವುದನ್ನು ತಡೆಯುವುದು ಅಥವಾ ಅಡ್ಡಿಪಡಿಸುವುದನ್ನು ಅಪರಾಧವೆನ್ನುತ್ತದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಹಾಡಲೇಬೇಕು ಎಂದು ಅದು ಹೇಳುವುದಿಲ್ಲ. ಆದ್ದರಿಂದ, ಭಾಗವದಿರುವುದು ಮತ್ತು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಕಾನೂನುಬದ್ಧವಾಗಿ ವಿಭಿನ್ನ ಪ್ರಶ್ನೆಗಳಾಗಿವೆ.

ಗಾಯನದ ಸಮಯದಲ್ಲಿ ಮೌನವಾಗಿರುವುದು ಸ್ವಯಂಚಾಲಿತವಾಗಿ ಅಪರಾಧವೇ?

ಖಂಡಿತ ಇಲ್ಲ. ಸುಪ್ರೀಂ ಕೋರ್ಟ್ ಈ ಹಿಂದೆ ಸ್ಪಷ್ಟಪಡಿಸಿದಂತೆ, ಗೌರವಯುತವಾಗಿ ಮೌನವಾಗಿರುವುದು ಮತ್ತು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವುದು ಕಾನೂನುಬದ್ಧವಾಗಿ ವಿಭಿನ್ನ ಸಂಗತಿಗಳು. ಹಾಗಾಗಿ, ಆ ಪೂರ್ವನಿದರ್ಶನವು ತಿದ್ದುಪಡಿ ಮಾಡಿದ ನಿಬಂಧನೆಯ ಭಾಷೆಯನ್ನು ಅರ್ಥಮಾಡಿಕೊಳ್ಳುವುದಕ್ಕೆ ಪ್ರಸ್ತುತವಾಗಿದೆ, ಆದಾಗ್ಯೂ ಹೊಸ ಕಾನೂನು ನಿರ್ದಿಷ್ಟ ಸಂಗತಿಗಳಿಗೆ ಹೇಗೆ ಅನ್ವಯಿಸುತ್ತದೆ ಎಂಬುದು ಅಂತಿಮವಾಗಿ ಪ್ರತಿಯೊಂದು ಪ್ರಕರಣದ ಸಂದರ್ಭಗಳನ್ನು ವಿಭಿನ್ನವಾಗಿರುತ್ತದೆ.

ಈ ತಿದ್ದುಪಡಿಯು ವಂದೇ ಮಾತರಂ ಗೀತೆಯ ಟೀಕೆಯನ್ನು ಕಾನೂನುಬಾಹಿರಗೊಳಿಸುತ್ತದೆಯೇ?

ಇಲ್ಲ. ಇದು ಟೀಕೆಯ ಮೇಲಿನ ನಿಷೇಧವಲ್ಲ. ಹಾಡುವಿಕೆಯನ್ನು ತಡೆಯುವುದು ಅಥವಾ ಅಡ್ಡಿಪಡಿಸುವುದನ್ನು ತಡೆಯುವುದು ಮಾತ್ರ ಇದರ ಉದ್ದೇಶ. ಹಾಡಿನ ಐತಿಹಾಸಿಕ ಅಥವಾ ಸಾಹಿತ್ಯಿಕ ಚರ್ಚೆಗೆ ಯಾವುದೇ ನಿರ್ಬಂಧವಿಲ್ಲ.

ಇದಕ್ಕೂ ಮುನ್ನ ಜನವರಿ 2026 ರಲ್ಲಿ ಗೃಹ ಸಚಿವಾಲಯವು ಏನು ಬದಲಾಯಿಸಿತು?

ಜನವರಿ 28, 2026 ರಂದು ಗೃಹ ಸಚಿವಾಲಯವು "ಭಾರತದ ರಾಷ್ಟ್ರೀಯ ಗೀತೆಗೆ ಸಂಬಂಧಿಸಿದ ನಿಯಮಾವಳಿಗಳನ್ನು" ಹೊರಡಿಸಿ, ವಂದೇ ಮಾತರಂನ ಅಧಿಕೃತ ಆವೃತ್ತಿ, ಅದನ್ನು ಹಾಡುವ ಸಂದರ್ಭಗಳು ಮತ್ತು ಶಿಷ್ಟಾಚಾರದ ಮಾರ್ಗಸೂಚಿಗಳನ್ನು ನಿಗದಿಪಡಿಸಿತು.

ಅಧಿಕೃತ ಆವೃತ್ತಿಯು ಎಲ್ಲಾ ಆರು ಚರಣಗಳನ್ನು ಒಳಗೊಂಡಿದೆಯೇ?

ಹೌದು. ಜನವರಿ 2026 ರ ಗೃಹ ಸಚಿವಾಲಯದ ಆದೇಶದ ಪ್ರಕಾರ, ರಾಷ್ಟ್ರೀಯ ಗೀತೆಯ ಅಧಿಕೃತ ಆವೃತ್ತಿಯು ಎಲ್ಲಾ 6 ಚರಣಗಳ ಪೂರ್ಣ ರೂಪವನ್ನು ಒಳಗೊಂಡಿದೆ.

ವಂದೇ ಮಾತರಂ ಮತ್ತು ಜನ ಗಣ ಮನ ಎರಡನ್ನೂ ಪ್ರದರ್ಶಿಸಿದಾಗ ಏನಾಗುತ್ತದೆ?

ಅಧಿಕೃತ ನಿಯಮಾವಳಿಗಳ ಪ್ರಕಾರ, ಮೊದಲು ರಾಷ್ಟ್ರೀಯ ಗೀತೆ (ವಂದೇ ಮಾತರಂ) ಹಾಡಬೇಕು/ನುಡಿಸಬೇಕು, ನಂತರ ರಾಷ್ಟ್ರಗೀತೆಯನ್ನು (ಜನ ಗಣ ಮನ) ನುಡಿಸಬೇಕು.

ವಂದೇ ಮಾತರಂ ಚಿತ್ರದಲ್ಲಿ ಕಾಣಿಸಿಕೊಂಡಾಗ ಇದಕ್ಕೆ ಹೊರತಾಗಿರುತ್ತದೆಯೇ?

ಹೌದು. ನ್ಯೂಸ್ ರೀಲ್, ಸಾಕ್ಷ್ಯಚಿತ್ರ ಅಥವಾ ಚಲನಚಿತ್ರದ ಭಾಗವಾಗಿ ಗೀತೆ ಪ್ರದರ್ಶನಗೊಂಡಾಗ, ಎದ್ದು ನಿಲ್ಲುವುದರಿಂದ ಸಭಾಂಗಣದಲ್ಲಿ ಅವ್ಯವಸ್ಥೆ ಅಥವಾ ಅಡ್ಡಿ ಉಂಟಾಗುವುದಾದರೆ ಪ್ರೇಕ್ಷಕರು ಎದ್ದು ನಿಲ್ಲುವ ಅಗತ್ಯವಿಲ್ಲ ಎಂದು ನಿಯಮಾವಳಿಯು ವಿನಾಯಿತಿ ನೀಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com