

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಮತ್ತು ಇಂಟರ್ನೆಟ್ ಪರದೆಗಳಿಗೆ ಅಂಟಿಕೊಂಡಿರುವ ಯುವ ಪೀಳಿಗೆಯನ್ನು ಮರಳಿ ಅಕ್ಷರ ಲೋಕಕ್ಕೆ ಸೆಳೆಯುವುದು ಒಂದು ಸವಾಲಿನ ಕೆಲಸ. ಇಂತಹ ಸವಾಲನ್ನು ಪ್ರೀತಿಯಿಂದ ಸ್ವೀಕರಿಸಿ, ಹಾಸನ ಜಿಲ್ಲೆಯಲ್ಲಿ ಅಕ್ಷರ ಕ್ರಾಂತಿ ಮಾಡುತ್ತಿರುವುದು ‘ಅಕ್ಷರ ಬುಕ್ ಹೌಸ್’. ಇದರ ರೂವಾರಿ ಗಂಗಾಧರ್ ಅವರು ಕೇವಲ ಪುಸ್ತಕ ವ್ಯಾಪಾರಿಯಲ್ಲ, ಬದಲಿಗೆ ಕನ್ನಡ ಭಾಷೆ, ಸಾಹಿತ್ಯ ಮತ್ತು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುತ್ತಿರುವ ಸಾಂಸ್ಕೃತಿಕ ಹರಿಕಾರ.
ಅಕ್ಷರ ಬುಕ್ ಹೌಸ್‌ನ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆ ಎಂದರೆ ‘ಅಕ್ಷರ ಪುರಸ್ಕಾರ’. ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ (PUC) ಪರೀಕ್ಷೆಗಳಲ್ಲಿ ಅತ್ಯುತ್ತಮ ಅಂಕ ಗಳಿಸಿದ ಗ್ರಾಮೀಣ ಹಾಗೂ ನಗರ ಪ್ರದೇಶದ ತಲಾ 250 (ಒಟ್ಟು ೫೦೦) ಮೆರಿಟ್ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ.
ಇಲ್ಲಿ ನೀಡಲಾಗುವ ಬಹುಮಾನ ಕೇವಲ ಟ್ರೋಫಿ ಅಥವಾ ನಗದಿಗೆ ಸೀಮಿತವಾಗಿಲ್ಲ. ಬದಲಿಗೆ ಪ್ರತಿಯೊಬ್ಬ ವಿದ್ಯಾರ್ಥಿಗೂ ತಲಾ ರೂ. 1,500 ಮೌಲ್ಯದ ಅಮೂಲ್ಯ ಪುಸ್ತಕಗಳ ಪುರಸ್ಕಾರವನ್ನು ನೀಡಲಾಗುತ್ತದೆ. ಕಳೆದ ಒಂದು ದಶಕದಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಈ ಅಭಿಯಾನದಲ್ಲಿ ಇದುವರೆಗೆ ಸುಮಾರು 5,000 ವಿದ್ಯಾರ್ಥಿಗಳಿಗೆ 50,000 ಕ್ಕೂ ಹೆಚ್ಚು ಪುಸ್ತಕಗಳನ್ನು ವಿತರಿಸಿರುವುದು ಒಂದು ದಾಖಲೆಯೇ ಸರಿ.
ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರವೂ ಮಹತ್ವದ್ದಾಗಿರುವುದರಿಂದ ಉತ್ತಮ ಸೇವೆ ಸಲ್ಲಿಸುತ್ತಿರುವ ಶಿಕ್ಷಕರನ್ನೂ ‘ರಾಷ್ಟ್ರ ನಿರ್ಮಾಪಕರು’ ಪ್ರಶಸ್ತಿಯ ಮೂಲಕ ಗೌರವಿಸಲಾಗುತ್ತಿದೆ.
ಕನ್ನಡ ಭಾಷೆಯನ್ನು ಬೆಳೆಸಬೇಕು, ಶ್ರೀಮಂತಗೊಳಿಸಬೇಕು ಎಂಬ ಉದ್ದೇಶದಿಂದ ಗಂಗಾಧರ್ ಅವರು ಹಾಸನದಲ್ಲಿ ಪುಸ್ತಕ ಭವನ ಆರಂಭಿಸಿದ್ದಾರೆ.
ಈ ಹಿಂದೆ ಉತ್ತಮ ಪುಸ್ತಕಗಳಿಗಾಗಿ ಹಾಸನದ ಜನರು ಮೈಸೂರು, ಧಾರವಾಡ ಹಾಗೂ ಬೆಂಗಳೂರಿಗೆ ತೆರಳಬೇಕಾದ ಪರಿಸ್ಥಿತಿ ಇತ್ತು. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ಹಾಸನದಲ್ಲೇ ವಿವಿಧ ವಿಷಯಗಳ ಪುಸ್ತಕಗಳು ಲಭ್ಯವಾಗುವಂತೆ ಪುಸ್ತಕ ಭವನವನ್ನು ರೂಪಿಸಲಾಗಿದೆ.
ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವುದರ ಜತೆಗೆ ಮೊಬೈಲ್ ಫೋನ್ ಹಾಗೂ ವಿಡಿಯೊ ಆಟಗಳ ಮೇಲಿನ ಅತಿಯಾದ ಆಸಕ್ತಿಯನ್ನು ಕಡಿಮೆ ಮಾಡುವುದು ಕೂಡ ಗಂಗಾಧರ್ ಅವರ ಉದ್ದೇಶವಾಗಿದೆ.
ವೈಜ್ಞಾನಿಕ ಕ್ಷೇತ್ರದಲ್ಲಿನ ಹೊಸ ಬೆಳವಣಿಗೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸಿ, ಅವುಗಳನ್ನು ಓದಿ ವಿಮರ್ಶೆ ಬರೆಯುವಂತೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲಾಗುತ್ತಿದೆ. ವಿದ್ಯಾರ್ಥಿಗಳಿಂದ ಬಂದ ವಿಮರ್ಶೆಗಳಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಿ 2,000 ರೂ. ಬಹುಮಾನ ನೀಡಲಾಗುತ್ತಿದೆ.
ಪುಸ್ತಕ ಭವನದಲ್ಲಿ ಮಾನವ ಅಭಿವೃದ್ಧಿ, ನೈತಿಕ ವಿಜ್ಞಾನ, ಸ್ಪರ್ಧಾತ್ಮಕ ಪರೀಕ್ಷೆ, ಆಧ್ಯಾತ್ಮಿಕತೆ, ಆತ್ಮಚರಿತ್ರೆ, ಸಣ್ಣಕಥೆಗಳು, ಯೋಗ, ಪ್ರೇರಣಾದಾಯಕ ಬರಹಗಳು, ವ್ಯಂಗ್ಯಚಿತ್ರಗಳು ಹಾಗೂ ಸಾಮಾಜಿಕ ಜವಾಬ್ದಾರಿಯಂತಹ ವಿವಿಧ ವಿಷಯಗಳ ಪುಸ್ತಕಗಳು ಲಭ್ಯವಿವೆ. ಸದ್ಯ ಇಲ್ಲಿ ಸುಮಾರು 2.5 ಲಕ್ಷ ಪುಸ್ತಕಗಳ ಸಂಗ್ರಹವಿದೆ.
ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ಶೇ.10ರಿಂದ 15ರವರೆಗೆ ರಿಯಾಯಿತಿ ನೀಡಲಾಗುತ್ತಿದ್ದು, ನವೆಂಬರ್ ತಿಂಗಳಲ್ಲಿ ವಿಶೇಷ ರಿಯಾಯಿತಿಯನ್ನೂ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ನೆರೆಯ ಜಿಲ್ಲೆಗಳಲ್ಲಿಯೂ ಪುಸ್ತಕ ಭವನದ ಶಾಖೆಗಳನ್ನು ಆರಂಭಿಸುವ ಯೋಜನೆಯನ್ನು ಗಂಗಾಧರ್ ಹೊಂದಿದ್ದಾರೆ.
ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ಅಕ್ಷರ ಪುಸ್ತಕ ಭವನ ಕೈಗೊಂಡಿರುವ ಪ್ರಯತ್ನಗಳಿಗೆ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಿರಿಯ ಸಾಹಿತಿ ಹಾಗೂ ಸರಸ್ವತಿ ಸಮ್ಮಾನ ಪುರಸ್ಕೃತ ದಿವಂಗತ ಎಸ್.ಎಲ್. ಭೈರಪ್ಪ, ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರ, ಕವಿ ದುಂಡಿರಾಜ್, ಕವಿ ದೊಡ್ಡರಂಗೇಗೌಡ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹಾಗೂ ಸಾಹಿತಿ ಸಿದ್ದಲಿಂಗಯ್ಯ, ಗಾಯಕಿ ಬಿ.ಕೆ. ಸುಮಿತ್ರಾ, ಗಾಯಕ ಅನಂತಪದ್ಮನಾಭ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಸಾಹಿತಿ ಬನ್ನಂಜೆ, ವಾಗ್ಮಿ ಗುರುರಾಜ ಕರ್ಜಗಿ, ಇಸ್ರೋದ ಮಾಜಿ ಅಧ್ಯಕ್ಷ ಕಿರಣ್ ಕುಮಾರ್ ಹಾಗೂ ಕನ್ನಡ ಧಾರಾವಾಹಿ ನಟ ಸೇತುರಾಮ್ ಸೇರಿದಂತೆ ಹಲವರು ಪುಸ್ತಕ ಭವನಕ್ಕೆ ಭೇಟಿ ನೀಡಿ ಗಂಗಾಧರ್ ಅವರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಪುಸ್ತಕ ಪ್ರೇಮಿ ಚಂದ್ರಶೇಖರ್ ಅವರು ಕನ್ನಡ ಪುಸ್ತಕಗಳ ಮಾರಾಟಗಾರರನ್ನು ಸರ್ಕಾರ ಮತ್ತಷ್ಟು ಪ್ರೋತ್ಸಾಹಿಸಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಕನ್ನಡ ಪುಸ್ತಕಗಳನ್ನು ಪುಸ್ತಕ ಮಾರಾಟಗಾರರಿಗೆ ಒದಗಿಸುವಂತಹ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು. ಇದರಿಂದ ಕನ್ನಡ ಪುಸ್ತಕಗಳು ಹೆಚ್ಚು ಜನರನ್ನು ತಲುಪಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ.
ಹಾಸನದ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿರುವ ಅರ್ಪಿತಾ ಅವರಿಗೂ ಅಕ್ಷರ ಪುಸ್ತಕ ಭವನದ ದೊಡ್ಡ ಸಂಗ್ರಹ ಅನುಕೂಲವಾಗಿದೆ.
ಪ್ರಮುಖ ಪುಸ್ತಕಗಳಿಗಾಗಿ ಮೈಸೂರು ಅಥವಾ ಬೆಂಗಳೂರಿಗೆ ತೆರಳುವ ಅಗತ್ಯವಿಲ್ಲ. ಹಾಸನದಲ್ಲೇ ಅಗತ್ಯ ಪುಸ್ತಕಗಳು ದೊರೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಪುಸ್ತಕಗಳು ಮನುಷ್ಯನ ಅತ್ಯುತ್ತಮ ಸ್ನೇಹಿತರು ಎಂಬುದನ್ನು ಅಕ್ಷರ ಬುಕ್ ಹೌಸ್ ಹಾಸನದಲ್ಲಿ ಸಾಬೀತುಪಡಿಸುತ್ತಿದ್ದು, ಗಂಗಾಧರ್ ಅವರ ಈ ನಿಸ್ವಾರ್ಥ ಸೇವೆ, ಕನ್ನಡ ಭಾಷೆಯ ಮೇಲಿನ ಅಭಿಮಾನ ಮತ್ತು ಯುವ ಪೀಳಿಗೆಯನ್ನು ಜ್ಞಾನವಂತರನ್ನಾಗಿ ಮಾಡುವ ಹಂಬಲ ಇಡೀ ನಾಡಿಗೆ ಮಾದರಿಯಾಗಿದೆ. ಇಂತಹ ಸಾಂಸ್ಕೃತಿಕ ಕೇಂದ್ರಗಳು ಪ್ರತಿಯೊಂದು ಜಿಲ್ಲೆಯಲ್ಲೂ ತಲೆಯೆತ್ತಿದಾಗ ಮಾತ್ರ ಕನ್ನಡ ಭಾಷೆ ಮತ್ತು ಸಂಸ್ಕೃತಿ ನಿರಂತರವಾಗಿ ಬೆಳಗಲು ಸಾಧ್ಯ.