ಗೆಲವಿನ ಕನಸಲ್ಲಿ ರೋಸ್‌ಬರ್ಗ್

Updated on: 

ರ್ಬರ್‌ಗ್ರಿಂಗ್: ಕಳೆದ ವಾರ ನಡೆದಿದ್ದ ಬ್ರಿಟನ್ ಗ್ರ್ಯಾನ್ ಪ್ರೀನಲ್ಲಿ ಮೊದಲ ಸ್ಥಾನ ಗಳಿಸಿದ್ದ ಮರ್ಸಿಡಿಸ್ ತಂಡದ ನಿಕೋ ರೋಸ್‌ಬರ್ಗ್ ಅವರು, ಇದೇ ಭಾನುವಾರ ನಡೆಯುವ ಜರ್ಮನ್ ಗ್ರ್ಯಾನ್ ಪ್ರೀ ರೇಸ್‌ನಲ್ಲಿ ಮೊದಲಿಗರಾಗುವ ನಿರೀಕ್ಷೆಯಲ್ಲಿದ್ದಾರೆ. ಮೂಲತಃ ಜರ್ಮನಿಯವರೇ ಆಗಿರುವ ಅವರು, ಜು. 7ರಂದು ನಡೆಯಲಿರುವ ರೇಸ್‌ನಲ್ಲಿ ವಿಜಯಿಯಾದರೆ, ಸ್ವದೇಶದಲ್ಲಿ ಅವರು ಸತತ ಮೂರು ಬಾರಿ (ಹ್ಯಾಟ್ರಿಕ್) ಮೊದಲ ಸ್ಥಾನ ಅಲಂಕರಿಸಿದಂತಾಗುತ್ತದೆ. ಸುಮಾರು 15 ಕಿ.ಮೀ. ಹೊಂದಿರುವ ನರ್ಬರ್‌ಗ್ರಿಂಗ್‌ನ ಟ್ರ್ಯಾಕ್‌ನಲ್ಲಿ ಕಳೆದೆರಡು ವರ್ಷವೂ ನಡೆದಿದ್ದ ರೇಸ್‌ಗಳಲ್ಲಿ ಅವರು ಗೆಲವು ಸಾಧಿಸಿದ್ದರು.

ಭಾರತದಲ್ಲಿ ಟೆನಿಸ್ ಜಯಪ್ರಿಯ ಕ್ರೀಡೆ
ನವದೆಹಲಿ:
ಟೆನಿಸ್ ಕ್ರೀಡೆಗೆ ವಿಶ್ವದಲ್ಲಿ ಅಮೆರಿಕ ಬಿಟ್ಟರೆ ಭಾರತದಲ್ಲೇ ಅತಿ ಹೆಚ್ಚು ಅಭಿಮಾನಿಗಳಿದ್ದಾರೆ ಎಂಬ ಹೊಸ ವಿಷಯ ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣವಾದ ಫೇಸ್‌ಬುಕ್‌ನಲ್ಲಿ ಭಾರತೀಯರು ಟೆನಿಸ್ ಬಗ್ಗೆ ಹೆಚ್ಚು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ನಡೆಸಲಾದ ಅಧ್ಯಯನದಿಂದ ಟೆನಿಸ್ ಅಭಿಮಾನಿಗಳನ್ನು ಹೊಂದಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ ಎರಡನೇ ಸ್ಥಾನ ಸಿಕ್ಕಿದೆ. ಅಷ್ಟೇ ಅಲ್ಲ... ಜಾಗತಿಕ ಮಟ್ಟದಲ್ಲಿ ನಡೆಸಲಾಗಿರುವ ಈ ಅಧ್ಯಯನದ ಪ್ರಕಾರ, ಪ್ರಸ್ತುತ ನಡೆಯುತ್ತಿರುವ ವಿಂಬಲ್ಡನ್ ಬಗ್ಗೆ ಆಸಕ್ತಿ ವಹಿಸಿರುವ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನ ಗಳಿಸಿದೆ. ಜೂ. 24ರಿಂದ ಜು. 1ರವರೆಗೆ ಫೇಸ್‌ಬುಕ್‌ನಲ್ಲಿ ವಿವಿಧ ದೇಶಗಳ ಜನರು ವಿನಿಮಯ ಮಾಡಿಕೊಂಡ ಒಟ್ಟು 11.6 ಮಿಲಿಯನ್ ಮಾಹಿತಿ, ಅಭಿಪ್ರಾಯ (ಲೈಕ್, ಕಮೆಂಟ್ ಒಳಗೊಂಡಂತೆ)ಗಳನ್ನು ಅಧ್ಯಯನ ಮಾಡಲಾಗಿದ್ದು, ಆ ಅಧ್ಯಯನದ ಫಲಿತಾಂಶ ಭಾರತ ಟೆನಿಸ್ ಅಭಿಮಾನಿಗಳನ್ನು ಹೊಂದಿರುವ 2ನೇ ಅತಿದೊಡ್ಡ ರಾಷ್ಟ್ರವಾಗಿ ಹೊರಹೊಮ್ಮಿದೆ.

ಎಐಎಫ್‌ಎಫ್ ವತಿಯಿಂದ ಕೇಂದ್ರೀಕೃತ ನೋಂದಣಿ ವ್ಯವಸ್ಥೆ
ಲಂಡನ್:
ದೇಶದಲ್ಲಿನ ಫುಟ್ಬಾಲ್ ಆಟಗಾರರಿಗೆ ಕೇಂದ್ರೀಕೃತ ನೋಂದಣಿ ವ್ಯವಸ್ಥೆಯನ್ನು ಜಾರಿಗೊಳಿಸಲು ಭಾರತೀಯ ಫುಟ್ಬಾಲ್ ಸಂಸ್ಥೆ (ಎಐಎಫ್‌ಎಫ್) ನಿರ್ಧರಿಸಿದೆ. ಇದರಿಂದಾಗಿ, ಆಟಗಾರರು ತಮ್ಮ ಜನ್ಮದಿನಾಂಕದ ಬಗ್ಗೆ ಸುಳ್ಳು ಮಾಹಿತಿ ನೀಡುವುದನ್ನು ತಪ್ಪಿಸಬಹುದೆಂದು ಸಂಸ್ಥೆ ನಿರೀಕ್ಷಿಸಿದೆಯಲ್ಲದೇ, ಜಿಲ್ಲಾ ಮಟ್ಟದ ಫುಟ್ಬಾಲ್ ಆಟಗಾರರಿಂದ ಹಿಡಿದು ರಾಷ್ಟ್ರಮಟ್ಟದ ಆಟಗಾರರವರೆಗಿನ ಹೊಸ ವ್ಯವಸ್ಥೆಯಡಿ ನೋಂದಣೆಗೊಳ್ಳುವ ಎಲ್ಲಾ ಕ್ರೀಡಾಳುಗಳಿಗೂ ವಿಮೆ ಸೌಲಭ್ಯ ಸಿಗಲಿದೆ.
ನೋಂದಾವಣಿ ಹೇಗೆ?: ಈ ಎಲ್ಲಾ ನೋಂದಾವಣಿ ಪ್ರಾಥಮಿಕ ಹಂತದಲ್ಲಿ ರಾಜ್ಯಮಟ್ಟದ ಫುಟ್ಬಾಲ್ ಸಂಸ್ಥೆಗಳಿಂದಲೇ ನಡೆಯುತ್ತದೆ. ಆಯಾ ರಾಜ್ಯಗಳ ಆಟಗಾರರು ಎಐಎಫ್‌ಎಫ್ ಅಧೀನದಲ್ಲಿ ಕಾರ್ಯನಿರ್ವಹಿಸುವ ರಾಜ್ಯಮಟ್ಟದ ಫುಟ್ಬಾಲ್ ಸಂಸ್ಥೆಗಳಲ್ಲಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕಿರುತ್ತದೆ. ಆ ಸಂದರ್ಭದಲ್ಲಿ ಅವರಿಗೆ ಗುರುತಿನ ಪತ್ರವನ್ನು ನೀಡಲಾಗುತ್ತದೆ. ಪ್ರತಿಯೊಂದು ಗುರುತಿನ ಚೀಟಿಯಲ್ಲಿ ಪ್ರತಿಯೊಬ್ಬ ಆಟಗಾರನಿಗೆ ಪ್ರತ್ಯೇಕವಾಗಿ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ. ಹೀಗೆ, ಎಲ್ಲಾ ರಾಜ್ಯಗಳ ಆಟಗಾರರಿಗೆ ನೀಡಲಾಗುವ ಗುರುತಿನ ಚೀಟಿಯಲ್ಲಿನ ಸಂಖ್ಯೆಯನ್ನು ಒಂದೇ ಸರ್ವರ್‌ನಲ್ಲಿ ಸಂಗ್ರಹಿಸಲಾಗುತ್ತದೆ. ಈ ಕಾರ್ಯವನ್ನು ನಿರ್ವಹಿಸಲು ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದ ಕಂಪನಿಯೊಂದಕ್ಕೆ ಜವಾಬ್ದಾರಿಯನ್ನು ವಹಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com