ಶಿಖರ್ ಶತಕ, ಭಾರತಕ್ಕೆ ಜಯದ ತಿಲಕ

ಭಾರತ ತಂಡವು ಜಿಂಬಾಬ್ವೆ ವಿರುದ್ಧ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 58 ರನ್‌ಗಳ ಜಯ ಸಾಧಿಸಿದೆ.
ಶಿಖರ್ ಶತಕ, ಭಾರತಕ್ಕೆ ಜಯದ ತಿಲಕ
Updated on: 

ಪರಾರೆ: ಶಿಖರ್ ಧವನ್ ಅವರ ಶತಕ ಹಾಗೂ ಉನಾದ್ಕತ್ ಉತ್ತಮ ಬೌಲಿಂಗ್ ನೆರವಿನಿಂದ ಭಾರತ ತಂಡವು ಜಿಂಬಾಬ್ವೆ ವಿರುದ್ಧ ಶುಕ್ರವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ 58 ರನ್‌ಗಳ ಜಯ ಸಾಧಿಸಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಭಾರತ ತಂಡ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 294 ರನ್ ಕಲೆ ಹಾಕಿತು. ಇದ್ದಕ್ಕುತ್ತರವಾಗಿ ಜಿಂಬಾಬ್ವೆ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 236 ರನ್ ಕಲೆ ಹಾಕಿತು.
ಭಾರತ ತಂಡ ಈ ಪಂದ್ಯದಲ್ಲಿ ಜಿಂಬಾಬ್ವೆ ಬೌಲರ್‌ಗಳನ್ನು ದಂಡಿಸುವ ನಿರೀಕ್ಷೆಯನ್ನು ಅಭಿಮಾನಿಗಳು ಹೊಂದಿದ್ದರು. ಆದರೆ ಭಾರತ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಿರಂತರವಾಗಿ ವಿಕೆಟ್ ಕೈ ಚೆಲ್ಲುತ್ತಾ ಈ ನಿರೀಕ್ಷೆಯನ್ನು ಹುಸಿಗೊಳಿಸಿದರು.
ಆರಂಭಿಕರಾಗಿ ಕಣಕ್ಕಿಳಿದ ಶಿಖರ್ ಧವನ್ ಹಾಗೂ ರೋಹಿತ್ ಶರ್ಮಾ ಜೋಡಿ ತಂಡಕ್ಕೆ ಉತ್ತಮ ಆರಂಭ ನೀಡಲಿಲ್ಲ. ಈ ಜೋಡಿ ಕೇವಲ 1 ರನ್‌ಗಳನಷ್ಟೇ ಗಳಿಸಿತು. ಈ ವೇಳೆ ಸರಿಯಾದ ಫುಟ್‌ವರ್ಕ್ ನಡೆಸದ ಶರ್ಮಾ, ಸ್ಲಿಪ್‌ಗೆ ಕ್ಯಾಚ್ ನೀಡಿ ನಿರಾಸೆ ಮೂಡಿಸಿದರು.
ನಂತರ ವಿರಾಟ್ ಕೊಹ್ಲಿ ಸಹ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. 14 ರನ್ ಗಳಿಸಿದ್ದ ಕೊಹ್ಲಿ ವಿವಾದಾತ್ಮಕ ತೀರ್ಪಿಗೆ ಬಲಿಯಾದರು. ಮೊದಲ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಗಳಿಸಿದ್ದ ಅಂಬಟಿ ರಾಯುಡು, ಈ ಪಂದ್ಯದಲ್ಲಿ ವಿಫಲರಾದರು. ಕೇವಲ 5 ರನ್‌ಗಳಿಸಿದ ರಾಯುಡು ಬೇಜವಾಬ್ದಾರಿ ಹೊಡೆತಕ್ಕೆ ಮುಂದಾಗಿ ವಿಟೊರಿಗೆ ವಿಕೆಟ್ ಒಪ್ಪಿಸಿದರು.
ಸುರೇಶ್ ರೈನಾ ಕೇವಲ 4 ರನ್ ಗಳಿಸಿ ಚತಾರಗೆ ವಿಕೆಟ್ ಒಪ್ಪಿಸಿ ರಾಯುಡು ಹಿಂದೆಯೇ ಪೆವಿಲಿಯನ್ ಸೇರಿಕೊಂಡರು.
ಭಾರತ ತಂಡ ಒಂದು ಹಂತದಲ್ಲಿ 65 ರನ್‌ಗಳಿಗೆ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಜತೆಯಾದ ಆರಂಭಿಕ ಶಿಖರ್ ಧವನ್ ಹಾಗೂ ದಿನೇಶ್ ಕಾರ್ತಿಕ್ ಜವಾಬ್ದಾರಿಯುತ ಬ್ಯಾಟಿಂಗ್ ನಡೆಸಿದರು. ಈ ಜೋಡಿ 5ನೇ ವಿಕೆಟ್‌ಗೆ 167 ರನ್‌ಗಳ ಕಾಣಿಕೆ ನೀಡಿ ತಂಡಡಕ್ಕೆ ಆಧಾರವಾಗಿ ನಿಂತರು.
ಶಿಖರ್ ಧವನ್ ತಮ್ಮ ಏಕದಿನದ 3ನೇ ಶತಕ ದಾಖಲಿಸಿದರೆ, ಕಾರ್ತಿಕ್ ಅರ್ಧಶತಕ ಗಳಿಸಿದರು. ನಂತರ ಬಂದ ಜಡೇಜಾ 15, ಮಿಶ್ರಾ 9 ರನ್‌ಗಳಿಸಿ ಔಟಾದರು. ಅಂತಿಮ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ವಿನಯ್ ಕುಮಾರ್ ಹಾಗೂ ಶಮಿ ಅಹ್ಮದ್ ಬಿರುಸಿನ ಬ್ಯಾಟಿಂಗ್ ನಡೆಸಿ 23 ರನ್ ಗಳಿಸಿದರು. ಈ ವೇಳೆ ವಿನಯ್ 2 ಸಿಕ್ಸರ್ 1 ಬೌಂಡರಿ ಹಾಗೂ 1 ಸಿಂಗಲ್ ಪಡೆದರೆ, ಅಂತಿಮ ಎಸೆತದಲ್ಲಿ ಶಮಿ ಸಿಕ್ಸರ್ ಬಾರಿಸಿದರು. ಈ ಮೂಲಕ ಭಾರತ ತಂಡ 290ರ ಗಡಿ ದಾಟಲು ನೆರವಾದರು. ಇನ್ನು ಜಿಂಬಾಬ್ವೆ ತಂಡದ ಪರ ವಿಟೊರಿ 2 ವಿಕೆಟ್ ಪಡೆದರೆ, ಜಾರ್ವಿಸ್, ಚಿಟಾರ, ಉತ್ಸೇಯ, ವಿಲಿಯಮ್ಸ್ ತಲಾ 1 ವಿಕೆಟ್ ಪಡೆದರು.
ಜಿಂಬಾಂಬ್ವೆ ಹೋರಾಟ: ಭಾರತ ನೀಡಿದ 295ರನ್‌ಗಳ ಗುರಿಯನ್ನು ಬೆನ್ನಟ್ಟಿದ ಜಿಂಬಾಬ್ವೆ ತಂಡ ಸಾಧಾರಣ ಆರಂಭವನ್ನೇ ಪಡೆಯಿತು. ಆರಂಭಿಕರಾಗಿ ಕಣಕ್ಕಿಳಿದ ಸಿಬಾಂಡಾ ಹಾಗೂ ಸಿಕಂದರ್ ರಾಜಾ ತಂಡಕ್ಕೆ 45 ರನ್ ಪೇರಿಸಿದರು. ಈ ವೇಳೆ ರಾಜಾ 20 ರನ್ ಗಳಿಸಿ ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು. ನಂತರ ಜತೆಯಾದ ಮಸಕಜ 2ನೇ ವಿಕೆಟ್‌ಗೆ 64ರನ್‌ಗಳ ಉತ್ತಮ ಜತೆಯಾಟ ನೀಡಿದರು. ಈ ವೇಳೆ 55 ರನ್‌ಗಳಿಸಿದ್ದ ಸಿಬಾಂಡಾ, ಉನಾದ್ಕತ್‌ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್‌ನಲ್ಲಿ ನಾಯಕ ಟೇಲರ್ ರನೌಟ್ ಆಗುವ ಮೂಲಕ ಪೆವಿಲಿಯನ್ ಸೇರಿಕೊಂಡರು.
ವಿಲಿಯಮ್ಸ್ 5, ವಾಲರ್ 2 ರನ್ ಗಳಿಸಿ ಔಟಾದರು. ಈ ಮೂಲಕ ಜಿಂಬಾಬ್ವೆ 133ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ದಿಢೀರ್ ಕುಸಿತ ಕಂಡಿತು. ಆ ಸಮಯದಲ್ಲಿ ಜತೆಯಾದ ಚಿಗುಂಬುರಾ ಹಾಗೂ ಉತ್ಸೇಯ ರಕ್ಷಣಾತ್ಮಕ ಆಟಕ್ಕೆ ಮುಂದಾದರು. ಈ ಜೋಡಿ 7ನೇ ವಿಕೆಟ್‌ಗೆ 88 ರನ್‌ಗಳ ಜತೆಯಾಟವಾಡಿತು. ಸಮಯೋಜಿತ ಬ್ಯಾಟಿಂಗ್ ನಡೆಸಿದ ಚಿಗುಂಬುರಾ 46 ರನ್ ಗಳಿಸಿ ಶಮಿಗೆ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಉತ್ಸೇಯಾ ಅಜೇಯ 52 ರನ್‌ಗಳಿಸಿದರು.

ಸ್ಕೋರ್ ಬೋರ್ಡ್

ಭಾರತ 294/8 (50 ಓವರ್)

ರೋಹಿತ್ ಸಿ ಸಿಬಾಂಡಾ ಬಿ ವಿಟೊರಿ 1(7), ಧವನ್ ಬಿ ಉತ್ಸೇಯ 116(127), ಕೊಹ್ಲಿ ಸಿ ವಾಲರ್ ಬಿ ಜಾರ್ವಿಸ್ 14(18), ರಾಯುಡು ಸಿ ಉತ್ಸೇಯ ಬಿ ವಿಟೊರಿ 5(25), ರೈನಾ ಸಿ ಟೇಲರ್ ಬಿ ಚಿಟಾರ 4(11), ಕಾರ್ತಿಕ್ ರನೌಟ್ (ಟೇಲರ್) 69(74), ಜಡೇಜಾ ಸಿ ಚಿಗುಂಬುರಾ ಬಿ ವಿಲಿಯಮ್ಸ್ 15(22), ಮಿಶ್ರಾ ರನೌಟ್ (ಸಿಬಾಂಡಾ/ವಿಲಿಯಮ್ಸ್) 9(7), ವಿನಯ್ ಅಜೇಯ 27(12), ಶಮಿ ಅಜೇಯ 6(1), ಇತರೆ 28
ವಿಕೆಟ್ ಪತನ: 1-2, 2-35, 3-55, 4-65, 5-232, 6-237, 7-251, 8-271
ಬೌಲಿಂಗ್: ಜಾರ್ವಿಸ್ 10-0-70-1, ವಿಟೊರಿ 8-0-27-2, ಚಿಟಾರ 9-0-46-1, ಚಿಗುಂಬುರಾ 6-0-30-0, ಉತ್ಸೇಯ 10-0-67-1, ಮಸಕಜ4-0-15-0, ವಿಲಿಯಮ್ಸ್ 3-0-34-1

ಜಿಂಬಾಬ್ವೆ 236/9 (50 ಓವರ್)
ಸಿಬಾಂಡಾ ಸಿ ಮಿಶ್ರಾ ಬಿ ಉನಾದ್ಕತ್ 55(65), ರಾಜಾ ಸಿ ಧವನ್ ಬಿ ಉನಾದ್ಕತ್ 20(35), ಮಸಕಜಸಿ ಶಮಿ ಬಿ ಮಿಶ್ರಾ 34(47), ಟೇಲರ್ ರನೌಟ್ (ಉನಾದ್ಕತ್) 0(4), ವಿಲಿಯಮ್ಸ್ ಎಲ್‌ಬಿಡಬ್ಲ್ಯೂ ಬಿ ಜಡೇಜಾ 5(11), ವಾಲರ್ ಎಲ್‌ಬಿಡಬ್ಲ್ಯೂ ಬಿ ಮಿಶ್ರಾ 2(13), ಚಿಗುಂಬುರಾ ಸಿ ಕಾರ್ತಿಕ್ ಬಿ ಶಮಿ 46(58), ಉತ್ಸೇಯ , ಜಾರ್ವಿಸ್ ಬಿ ಉನಾದ್ಕತ್ 2(4), ವಿಟೊರಿ ಬಿ ಉನಾದ್ಕತ್ 0(1), ಚಿಟಾರ , ಇತರೆ 20
ವಿಕೆಟ್ ಪತನ: 1-45, 2-109, 3-109, 4-127, 5-130, 6-133, 7-221, 8-236, 9-236
ಬೌಲಿಂಗ್: ವಿನಯ್ 9-2-49-0, ಶಮಿ 10-0-52-1, ಉನಾದ್ಕತ್ 10-3-41-4, ಜಡೇಜಾ 10-1-30-1, ಮಿಶ್ರಾ 10-1-46-2, ರೈನಾ 1-0-5-0

4ನೇ ಪಂದ್ಯ ಮುಂದಕ್ಕೆ
ಹರಾರೆ:
ಆಫ್ರಿಕಾ ರಾಷ್ಟ್ರಗಳಲ್ಲಿ ಜು.31ರಂದು ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಭಾರತ, ಜಿಂಬಾಬ್ವೆ ನಡುವಿನ 4ನೇ ಏಕದಿನ ಪಂದ್ಯವನ್ನು ಆ.1ಕ್ಕೆ ಮುಂದೂಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com