ಬ್ರಿಸ್‌ಬೇನ್ ಟೆಸ್ಟ್ ಸೋಲಿಗೆ ಕೊಹ್ಲಿ, ಧವನ್ ಕಾರಣ?

ಬ್ರಿಸ್‌ಬೇನ್ ಟೆಸ್ಟ್ ಸೋಲಿಗೆ ಭಾರತ ತಂಡದ ಉಪನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ.
ಟೀಂ ಇಂಡಿಯಾ ಆಟಗಾರರಾದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ
ಟೀಂ ಇಂಡಿಯಾ ಆಟಗಾರರಾದ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ

ನವದೆಹಲಿ: ಬ್ರಿಸ್‌ಬೇನ್ ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಸೋಲಿಗೆ ಭಾರತ ತಂಡದ ಉಪನಾಯಕ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಅವರೇ ಕಾರಣ ಎಂದು ಹೇಳಲಾಗುತ್ತಿದೆ.

ಪಂದ್ಯದ ನಾಲ್ಕನೇ ದಿನದಾಟ ಎರಡನೇ ಇನ್ನಿಂಗ್ಸ್  ಮುಂದುವರೆಸುವ ಮುನ್ನ ಟೀಂ ಇಂಡಿಯಾದ ಡ್ರೆಸಿಂಗ್ ರೂನಲ್ಲಿ ಕೆಲ ಗೊಂದಲಕಾರಿ ಘಟನೆಗಳು ನಡೆದಿದ್ದು, ಇದೇ ಪಂದ್ಯದ ಸೋಲಿಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ. ಪ್ರಮುಖವಾಗಿ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ನಡುವಿನ ಜಗಳ ಪಂದ್ಯದ ಸೋಲಿನಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಲಾಗುತ್ತಿದೆ.

ಬ್ರಿಸ್‌ಬೇನ್ ಟೆಸ್ಟ್‌ನ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಎರಡನೇ ಇನ್ನಿಂಗ್ಸ್ ಮುಂದುವರೆಸುವ ಹಿಂದಿನ ದಿನ ಅಭ್ಯಾಸದ ವೇಳೆ ಮೊಣಕೈಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್, ಮಾರನೇ ದಿನ ಆಟ ಮುಂದುವರೆಸಲು ಹಿಂದೇಟು ಹಾಕಿದ್ದರು. ಹೀಗಾಗಿ ಅನಿವಾರ್ಯವಾಗಿ ವಿರಾಟ್ ಕೊಹ್ಲಿ ಅವರು ಶಿಖರ್ ಧವನ್ ಸ್ಥಾನದಲ್ಲಿ ಆಡಬೇಕಾಯಿತು. ಮೊಣಕೈಗೆ ಗಾಯ ಮಾಡಿಕೊಂಡಿದ್ದ ಶಿಖರ್ ಧವನ್  ಕಣಕ್ಕಿಳಿಯಲು ಅಂತಿಮ ಕ್ಷಣದಲ್ಲಿ ಹಿಂದೇಟು ಹಾಕಿದ ಪರಿಣಾಮ ಅನಿವಾರ್ಯವಾಗಿ ಕೊಹ್ಲಿ ಅವರನ್ನು ಕಣಕ್ಕಿಳಿಸಲಾಯಿತು ಎಂದು ಟೀಂ ಮ್ಯಾನೇಜ್‌ಮೆಂಟ್ ಮೂಲಗಳು ತಿಳಿಸಿವೆ.

ಆದರೆ ತಾವು ನಾಲ್ಕನೇ ದಿನದಾಟದ ಮೊದಲ ಸೆಷನ್‌ನಲ್ಲಿಯೇ ಕಣಕ್ಕಿಳಿಯುವ ವಿಚಾರವೇ ತಿಳಿಯದ ಕೊಹ್ಲಿ ಯಾವುದೇ ರೀತಿಯ ಸಿದ್ಧತೆ ಮಾಡಿಕೊಂಡಿರಲಿಲ್ಲ. ಪಂದ್ಯ ಆರಂಭವಾಗುವ 7 ನಿಮಿಷಗಳ ಹಿಂದಷ್ಟೇ ತಾವು ಕಣಕ್ಕಿಳಿಯಬೇಕು ಎಂದು ವಿರಾಟ್ ಕೊಹ್ಲಿಗೆ ತಿಳಿಯಿತಂತೆ. ಅಂತಿಮ ಕ್ಷಣದಲ್ಲಿ ಡ್ರೆಸಿಂಗ್ ರೂಂನಿಂದ ಬಂದ ಆದೇಶ ಕೊಹ್ಲಿಗೆ ಇರುಸು-ಮುರುಸು ಉಂಟುಮಾಡಿತ್ತು. ಒಲ್ಲದ ಮನಸ್ಸಿನಿಂದಲೇ ಕಣಕ್ಕಿಳಿದ ಕೊಹ್ಲಿ ಕೇವಲ 1ರನ್ ಗಳಿಸಿ ಔಟಾಗಿದ್ದರು.

ಧವನ್ ಮೊಣಕೈಗೆ ನಿಜಕ್ಕೂ ಗಾಯವಾಗಿತ್ತೇ..?
ಇನ್ನು ಈ ಪ್ರಕರಣದಲ್ಲಿ ದೊರೆತಿರುವ ಮತ್ತೊಂದು ತಿರುವು ಎಂದರೆ ಶಿಖರ್ ಧವನ್ ಅವರ ಮೊಣಕೈಗೆ ನಿಜಕ್ಕೂ ಗಾಯವಾಗಿತ್ತೇ ಎಂಬ ವಿಚಾರ. ಏಕೆಂದರೆ ಪಂದ್ಯದ ಸೋಲಿನ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಸ್ವತಃ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರೇ ಶಿಖರ್ ಧವನ್ ಗಾಯದಿಂದಾಗಿ ಕಣಕ್ಕಿಳಿಯಲಿಲ್ಲ ಎಂಬ ಮಾತನ್ನು ತಳ್ಳಿ ಹಾಕಿದ್ದರು. ಅಲ್ಲದೆ ಧವನ್ ಸ್ಥಾನದಲ್ಲಿ ಕೊಹ್ಲಿ ಕಣಕ್ಕಿಳಿದು ಔಟಾದ ಬಳಿಕ ಡ್ರೆಸಿಂಗ್ ರೂಂಗೆ ಬಂದ ಕೊಹ್ಲಿ ಶಿಖರ್ ಧವನ್ ಅವರೊಂದಿಗೆ ಕೊಂಚ ಮಾತಿನಚಕಮಕಿ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ ಕೊಹ್ಲಿ ಅವರ ನಡವಳಿಕೆಯು ಧವನ್‌ಗೆ ಗಾಯವಾಗಿರಲೇ ಇಲ್ಲ ಎನ್ನುವಂತಿತ್ತು ಎಂದು ಮೂಲಗಳು ತಿಳಿಸಿವೆ.

ಟೀಂ ಇಂಡಿಯಾಗೆ ರವಿಶಾಸ್ತ್ರಿ ಸೂಚನೆ
ಇನ್ನು ಬ್ರಿಸ್‌ಬೇನ್ ಟೆಸ್ಟ್ ಸೋಲಿನ ಹಿನ್ನಲೆಯಲ್ಲಿ ತಂಡದ ನಿರ್ದೇಶಕ ರವಿಶಾಸ್ತ್ರಿ ಅವರು ಕೆಲ ಸೂಚನೆಗಳನ್ನು ನೀಡಿದ್ದು, ಪಂದ್ಯ ನಡೆಯುವ ವೇಳೆ ತಂಡದ ಯಾವುದೇ ಆಟಗಾರ ಯಾವುದೇ ಸ್ಥಾನದಲ್ಲಿ ಆಡಲು ಸಿದ್ಧರಾಗಿರಬೇಕು ಎಂದು ಸೂಚಿಸಿದ್ದಾರೆ. ಕೊಹ್ಲಿ ಮತ್ತು ಧವನ್ ನಡುವಿನ ಗೊಂದಲದ ಹಿನ್ನಲೆಯಲ್ಲಿ ಮಾಜಿ ಕ್ರಿಕೆಟಗ ರವಿಶಾಸ್ತ್ರಿ ಅವರು ಟೀಂ ಇಂಡಿಯಾಗೆ ಈ ಸೂಚನೆ ನೀಡಿದ್ದಾರೆ.

ಒಟ್ಟಾರೆ ಆಟಗಾರರ ನಡುವಿನ ಗೊಂದಲದಿಂದಾಗಿ ಟೀಂ ಇಂಡಿಯಾ ಬ್ರಿಸ್‌ಬೇನ್ ಟೆಸ್ಟ್ ಪಂದ್ಯವನ್ನು ಗೆಲ್ಲುವ ಅಪೂರ್ವ ಅವಕಾಶವನ್ನು ಕೈ ಚೆಲ್ಲಿಕೊಂಡಿದೆ. ಆದರೆ ಮುಂಬರುವ ಪಂದ್ಯಗಳಲ್ಲಿ ಇದು ಮುಂದುವರೆಯದಿರಲಿ ಎಂಬುದೇ ಅಭಿಮಾನಿಗಳ ಆಶಯವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com