ಜಗಜ್ಜಾಹೀರಾದ ಧವನ್-ಕೊಹ್ಲಿ ಕಿತ್ತಾಟ

ವಿರಾಟ್ ಕೊಹ್ಲಿ, ಶಿಖರ್ ಧವನ್
ವಿರಾಟ್ ಕೊಹ್ಲಿ, ಶಿಖರ್ ಧವನ್

ಮೆಲ್ಬೋರ್ನ್: ಬ್ರಿಸ್ಬೇನ್ ಟೆಸ್ಟ್ ಪಂದ್ಯವನ್ನು ಭಾರತ ಸೋತ ಬೆನ್ನಲ್ಲೇ ಭುಗಿಲೆದ್ದಿರುವ ವಿವಾದಗಳು ದಿನಗಳೆದಂತೆ ಹೊಸ ತಿರುವು ಪಡೆಯುತ್ತಿವೆ.

ಪಂದ್ಯದ ನಾಲ್ಕನೇ ದಿನ ಶಿಖರ್ ಧವನ್ 2ನೇ ಕ್ರಮಾಂಕದಲ್ಲಿ ಕಣಕ್ಕಿಳಿಯದೇ ಡ್ರೆಸ್ಸಿಂಗ್ ರೂಂನಲ್ಲೇ ಉಳಿದ ಬಗ್ಗೆ ವಿವಾದ ಎದ್ದಿತ್ತು. ಪಂದ್ಯ ಸೋತ ನಂತರ ಮಾತನಾಡಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ, ಪಂದ್ಯದ ನಾಲ್ಕನೇ ದಿನದಾಟದ ಬೆಳಗ್ಗೆ ತಂಡದ ಡ್ರೆಸಿಂಗ್ ರೂಮ್‌ನಲ್ಲಿ ಗೊಂದಲ ಏರ್ಪಟ್ಟಿದ್ದು ಅದನ್ನು ನಿಭಾಯಿಸಲು ಸಾಧ್ಯವಾಗಿರಲಿಲ್ಲ ಎಂದು ಒಪ್ಪಿಕೊಂಡಿದ್ದರು. ಇದಕ್ಕೆ ಪೂರಕವಾಗಿ, ಹೊಸ ಸುದ್ದಿ ಹೊರಬಿದ್ದಿದ್ದು, ಅಗ್ರ ಕ್ರಮಾಂಕದಲ್ಲಿ ಆಡದ ಶಿಖರ್ ಮೇಲೆ ಕೊಹ್ಲಿ ಹರಿಹಾಯ್ದರು ಎಂಬುದಾಗಿ ವರದಿಯಾಗಿದೆ.

ವರದಿ ಪ್ರಕಾರ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಆಸೀಸ್ ಬೌಲರ್‌ಗಳನ್ನು ಎದುರಿಸುವುದರಿಂದ ತಪ್ಪಿಸಿಕೊಳ್ಳಲು ಗಾಯದ ನೆಪವೊಡ್ಡಿರುವುದಾಗಿ ವಿರಾಟ್ ಕೊಹ್ಲಿ ಆರೋಪಿಸಿದ್ದಾರೆ. ಇದರಿಂದ ಇಬ್ಬರ ನಡುವೆ ಮಾತಿನ ಚಕಮಿಕಿ ನಡೆದಿದೆ. ಡ್ರೆಸಿಂಗ್ ರೂಮ್‌ನಲ್ಲಿ ನಡೆದಿದ್ದ ಈ ವಾಗ್ಯುದ್ಧದ ವರದಿಯ ಸಾರಾಂಶ ಹೀಗಿದೆ...

ಪಂದ್ಯದ ನಾಲ್ಕನೇ ದಿನದಾಟ ಆರಂಭವಾಗುವ ಮುನ್ನ ಶಿಖರ್ ಧವನ್ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವಾಗ ಗಾಯಗೊಂಡ ಹಿನ್ನೆಲೆಯಲ್ಲಿ ದಿನದಾಟವನ್ನು ಮುಂದುವರಿಸಲು ಸಾಧ್ಯವಾಗಲಿಲ್ಲ.

ಧವನ್ ಗಾಯದ ಪ್ರಮಾಣವನ್ನು ಅರಿಯದ ತಂಡದ ಆಡಳಿತ ಮಂಡಳಿ, ಸರಿಯಾದ ಯೋಜನೆ ರೂಪಿಸಿರಲಿಲ್ಲ. ಆದರೆ, ದಿನದಾಟ ಆರಂಭವಾಗಲು ಕೆಲವೇ ನಿಮಿಷ ಬಾಕಿ ಇರುವಾಗ ಧವನ್ ನೋವಿನಿಂದ ಬಳಲುತ್ತಿದ್ದರಿಂದ ಅಂತಿಮ ಗಳಿಗೆಯಲ್ಲಿ ಕೊಹ್ಲಿಯನ್ನು ಕಣಕ್ಕಿಳಿಸಲು ತಂಡ ನಿರ್ಧರಿಸಿತು. ಹಾಗಾಗಿ ಕೊಹ್ಲಿ, ಬ್ಯಾಟಿಂಗ್ ಮಾಡಲು ಸಿದ್ಧತೆ ನಡೆಸದೇ ಕ್ರೀಸ್‌ಗೆ ಇಳಿದರು.

ನಂತರ ಚೇತೇಶ್ವರ ಪೂಜಾರ ಜತೆಗೆ ದಿನದಾಟ ಆರಂಭಿಸಿದ ಕೊಹ್ಲಿಗೆ ಆಸೀಸ್ ಬೌಲರ್‌ಗಳು ಒತ್ತಡ ಹಾಕಿದರು. ಹಾಗಾಗಿ ಕೊಹ್ಲಿ ಮೊದಲ ರನ್ ದಾಖಲಿಸಿಲು 10 ಎಸೆತ ತೆಗೆದುಕೊಂಡರು. ನಂತರ ಔಟಾಗಿ ಪೆವಿಲಿಯನ್‌ಗೆ ಮರಳಿದರು.

ನಂತರ ನಡೆದ ಜಗಳ: ದಿಢೀರನೆ ಬ್ಯಾಟಿಂಗ್‌ಗೆ ಇಳಿಯುವ ನಿರ್ಧಾರದಿಂದ ಅತೃಪ್ತರಾಗಿದ್ದ ವಿರಾಟ್ ಕೊಹ್ಲಿ, ಕೇವಲ ಒಂದು ರನ್ ಗಳಿಸಿ ಔಟಾಗಿದ್ದಕ್ಕೆ ಮತ್ತಷ್ಟು ವಿಚಲಿತರಾದರು.

ನಂತರ ಡ್ರೆಸಿಂಗ್ ರೂಮ್‌ಗೆ ತೆರಳಿದ ಕೊಹ್ಲಿ, ಧವನ್ ಮೇಲೆ ಕೂಗಾಡಿದರು. ಧವನ್ ಆಸೀಸ್ ಬೌಲರ್‌ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಗಾಯದ ಸುಳ್ಳು ನೆಪ ಒಡ್ಡಿರುವುದಾಗಿ ಕೊಹ್ಲಿ ಆರೋಪಿಸಿದರು. ಇದರಿಂದ ಕೋಪಗೊಂಡ ಶಿಖರ್ ಧವನ್, ಕೊಹ್ಲಿ ವಿರುದ್ಧ ರೇಗಾಡಿದ್ದರು.

ದೇಶವನ್ನು ಪ್ರತಿನಿಧಿಸುವುದು ಹೆಮ್ಮೆಯ ಸಂಗತಿ. ಒಂದು ವೇಳೆ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ, ತಾವೇ ಹಿಂದೆ ಸರಿಯುವುದಾಗಿ ಧವನ್, ಕೊಹ್ಲಿ ಪ್ರತ್ಯುತ್ತರ ನೀಡಿದರು. ನಂತರ ಇಬ್ಬರು ಆಟಗಾರರ ನಡುವೆ ಮಧ್ಯ ಪ್ರವೇಶಿಸಿದ ತಂಡದ ನಿರ್ದೇಶಕ ರವಿಶಾಸ್ತ್ರಿ ಜಗಳವನ್ನು ತಣ್ಣಗಾಗಿಸಿದರು.

ಅಲ್ಲದೆ ಒಬ್ಬ ಆಟಗಾರ ಎಷ್ಟೇ ಖ್ಯಾತಿಗಳಿಸಿದರೂ ಯಾವುದೇ ಸಂದರ್ಭದಲ್ಲೂ ಕಣಕ್ಕೀಳಿಯಲು ಸಿದ್ಧವಾಗಿರಬೇಕು ಎಂದು ರವಿಶಾಸ್ತ್ರಿ, ಕೊಹ್ಲಿಗೆ ಕಿವಿಮಾತು ಹೇಳಿದರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com