ಟೆಸ್ಟ್ ನಾಯಕತ್ವಕ್ಕೆ ಕೊಹ್ಲಿ ಬೆಸ್ಟ್: ಸೌರವ್ ಗಂಗೂಲಿ

ಟೆಸ್ಟ್ ಪಂದ್ಯದ ನಾಯಕತ್ವ ನಿಭಾಯಿಸುವುದರಲ್ಲಿ ಮಹೇಂದ್ರ ಸಿಂಗ್ ಧೋನಿ ವಿಫಲರಾಗಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ....
ಮಹೇಂದ್ರ ಸಿಂಗ್ ಧೋನಿ & ವಿರಾಟ್ ಕೊಹ್ಲಿ
ಮಹೇಂದ್ರ ಸಿಂಗ್ ಧೋನಿ & ವಿರಾಟ್ ಕೊಹ್ಲಿ
Updated on

ಮೆಲ್ಬರ್ನ್: ಟೆಸ್ಟ್ ಪಂದ್ಯದ ನಾಯಕತ್ವ ನಿಭಾಯಿಸುವುದರಲ್ಲಿ ಮಹೇಂದ್ರ ಸಿಂಗ್ ಧೋನಿ ವಿಫಲರಾಗಿದ್ದಾರೆ ಎಂದು ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ
ಹೇಳಿದ್ದಾರೆ.

ಇದೀಗ ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಭಾರತ - ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯದ ಕಾಮೆಂಟರ್ ಆಗಿರುವ ಸೌರವ್, ಏಕದಿನ ಪಂದ್ಯದ ನಾಯಕತ್ವದಲ್ಲಿ ಧೋನಿ ಸಮರ್ಥರಿದ್ದಾರೆ. ಆದರೆ ಟೆಸ್ಟ್ ಪಂದ್ಯಗಳ ನಾಯಕತ್ವ ವಹಿಸುವಲ್ಲಿ ಅವರಿಗೆ ಕಷ್ಟವಾದಂತಿದೆ.

ನಾನು ಇದೆರಡು ಮ್ಯಾಚ್‌ಗಳ ಬಗ್ಗೆ ಹೇಳುತ್ತಿಲ್ಲ. ಆದರೆ ಈವರೆಗೆ ನಡೆದ ಕೆಲವು ಮ್ಯಾಚ್‌ಗಳಲ್ಲಿ  ಧೋನಿ ಕಷ್ಟಪಡುತ್ತಿರುವುದನ್ನು ನೋಡಿದ್ದೇನೆ. ಟೆಸ್ಟ್ ಮ್ಯಾಚ್‌ಗಳಲ್ಲಿ ಪಂದ್ಯ ನಿಭಾಯಿಸಲು ಅವರು ಹೆಣಗಾಡುತ್ತಿದ್ದಾರೆ.   ಧೋನಿ ಅವರು  ಸುಮಾರು 60ರಷ್ಟು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಈ ವಿಷಯಗಳೆಲ್ಲಾ ಆಯ್ಕೆಗಾರರಿಗೆ ಬಿಟ್ಟಿದ್ದು ಎಂದು ಹೇಳಿದ ಗಂಗೂಲಿ ಧೋನಿ ತುಂಬಾ ಕಾಲ ನಾಯಕತ್ವದ ಹೊಣೆ ಹೊತ್ತಿದ್ದಾರೆ ಎಂದಿದ್ದಾರೆ.

ಧೋನಿ ಒಬ್ಬ ಉತ್ತಮ ನಾಯಕ,  ಏಕಪಂದ್ಯದ ದಾಖಲೆಗಳನ್ನು ನೋಡಿದರೆ ಅವರು ಉತ್ತಮ ನಾಯಕ ಎಂಬುದಕ್ಕೆ ಮಾತೆರಡಿಲ್ಲ. ಆದರೆ ವಿದೇಶದಲ್ಲಿನ ಟೆಸ್ಟ್ ಪಂದ್ಯಗಳಲ್ಲಿ ಅವರು ಮುಗ್ಗರಿಸಿದ್ದಾರೆ. ಈ ಸರಣಿ ಮುಗಿದಿಲ್ಲ. ಆದಾಗ್ಯೂ, ಕೊನೆಯ ಹಂತದಲ್ಲಿ ಇದರ ಫಲಿತಾಂಶ ಬೇರೆಯಾಗಿರಬಹುದು. ಧೋನಿ ಆತ್ಮವಿಮರ್ಶೆ ಮಾಡಿಕೊಂಡು ತಂಡವನ್ನು ಮುನ್ನಡೆಸಬೇಕಾದ ಅಗತ್ಯವಿದೆ ಎಂದು ಗಂಗೂಲಿ ಅಭಿಪ್ರಾಯ ಪಟ್ಟಿದ್ದಾರೆ.

ಏತನ್ಮಧ್ಯೆ, ಉಪನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ ಗಂಗೂಲಿ, ಕೊಹ್ಲಿ  ಭಾರತದ ಕ್ರಿಕೆಟ್‌ನ ಭವಿಷ್ಯದ ನಾಯಕ ಎಂದಿದ್ದಾರೆ.

ಭವಿಷ್ಯದಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಕೊಹ್ಲಿ ವಹಿಸಲಿದ್ದಾರೆ. ನಮಗೆ ಪಾಸಿಟಿವ್ ಕ್ಯಾಪ್ಟನ್ ಬೇಕಾಗಿದ್ದಾರೆ. ಮುಂದಿನ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ಧೋನಿಯೇ ವಹಿಸಲಿದ್ದಾರೆ. ಅದರನಂತರ ಏನಾಗುತ್ತೋ ಎಂಬುದನ್ನು ನೋಡಬೇಕಾಗಿದೆ.

ನನಗೆ ಕೊಹ್ಲಿಯ ಪ್ಯಾಷನ್ ಇಷ್ಟ. ಅಂಥಾ ಪ್ಯಾಷನ್ ಇರಬೇಕು. ನನಗೆ ಅವನಿಷ್ಟ. ನನಗಿಷ್ಟವಾದುದನ್ನು ನಾನವನಲ್ಲಿ ಕಾಣುತ್ತೇನೆ ಎಂದು ಗಂಗೂಲಿ ಹೇಳಿದ್ದಾರೆ.

ಒಂದು ವೇಳೆ ನಾಯಕತ್ವದಲ್ಲಿ ಬದಲಾವಣೆಯಾದರೆ 90 ಟೆಸ್ಟ್‌ಗಳ ಅನುಭವಿಯಾಗಿರುವ ಧೋನಿ, ಕೋಹ್ಲಿಯ ನಾಯಕತ್ವದಲ್ಲಿ ಆಟವನ್ನು ಮುಂದುವರಿಸಬೇಕು.

ಸಚಿನ್ ಟೆಸ್ಟ್ ಕ್ಯಾಪ್ಟನ್ ಪಟ್ಟದಿಂದ ಹೊರಬಂದು ನನ್ನ ನಾಯಕತ್ವದಲ್ಲಿ ಆಟವಾಡಿದ್ದರು. ನಾನು ರಾಹುಲ್ ದ್ರಾವಿಡ್‌ರ ನೇತೃತ್ವದಲ್ಲಿ ಆಡಿದ್ದೆ. ದ್ರಾವಿಡ್ ಧೋನಿ ನಾಯಕತ್ವದಲ್ಲಿ ಆಡಿದ್ದರು. ರಿಕಿ ಪಾಂಟಿಂಗ್ ಕೂಡಾ ಮೈಕಲ್ ಕ್ಲಾರ್ಕ್ ನಾಯಕತ್ವದಲ್ಲಿ ಆಡಿದ್ದರು. ಇದೊಂದು ಸಮಸ್ಯೆ ಎಂದು ನನಗನಿಸುವುದಿಲ್ಲ.

ನಾಯಕತ್ವ ಅನ್ನೋದು ಒಂದು ಪಾತ್ರ ಅಷ್ಟೇ. ತಂಡಕ್ಕಾಗಿ ಕೊಡುಗೆಗಳನ್ನು ನೀಡುವುದು ನಿಮ್ಮ ಜವಾಬ್ದಾರಿ. ಅದಕ್ಕಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಲೇ ಇರಬೇಕು ಎಂದು ಗಂಗೂಲಿ ನುಡಿದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com