ಸಿಡ್ನಿ ಟೆಸ್ಟ್: ದ್ರಾವಿಡ್ ದಾಖಲೆ ಬ್ರೇಕ್ ಮಾಡ್ತಾರಾ ವಿರಾಟ್?

ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ನವದೆಹಲಿ: ಉತ್ತಮ ಫಾರ್ಮ್‌ನಲ್ಲಿರುವ ಭಾರತದ ಟೆಸ್ಟ್ ಕ್ರಿಕೆಟ್ ನಾಯಕ ವಿರಾಟ್ ಕೊಹ್ಲಿ ಸಿಡ್ನಿಯಲ್ಲಿ ನಡೆಯಲಿರುವ ಅಂತಿಮ ಟೆಸ್ಟ್ ಪಂದ್ಯದಲ್ಲಿ ದಾಖಲೆಯೊಂದನ್ನು ಮುರಿಯಲು ಸಿದ್ಧರಾಗಿದ್ದಾರೆ.

ಮೊದಲ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಶತಕ ಮತ್ತು ಒಂದು ಅರ್ಧ ಶತಕ ಬಾರಿಸಿದ್ದ ಕೊಹ್ಲಿಗೆ ಸರಣಿ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು ರನ್ ಗಳಿಸಿರುವ ರಾಹುಲ್ ದ್ರಾವಿಡ್‌ರ ರೆಕಾರ್ಡ್ ಮುರಿಯಲು 121 ರನ್ ಅಗತ್ಯವಿದೆ.

2003-04ರ ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ದ್ರಾವಿಡ್ 619 ರನ್ ಗಳಿಸುವ ಮೂಲಕ ಅತೀ ಹೆಚ್ಚು ರನ್ ಗಳಿಸಿದ ಭಾರತೀಯ ಆಟಗಾರನೆಂಬ ದಾಖಲೆ ಬರೆದಿದ್ದರು. ಈಗ ನಡೆಯುತ್ತಿರುವ ಟೆಸ್ಟ್ ಪಂದ್ಯಗಳಲ್ಲಿ ಕೊಹ್ಲಿ ಒಟ್ಟು 499 ರನ್ ಗಳಿಸಿದ್ದಾರೆ.

ಆದಾಗ್ಯೂ, ದ್ರಾವಿಡ್ ನಂತರ ಗುಂಡಪ್ಪ ವಿಶ್ವನಾಥ್ (1979) ಮತ್ತು ವಿವಿಎಸ್ ಲಕ್ಷ್ಮಣ್ (2001) ತಲಾ 518 ಮತ್ತು 503 ರನ್ ಗಳಿಸಿ ಕೊಹ್ಲಿಯಿಂದ ಮುಂದಿದ್ದಾರೆ.

ಒಂದು ವೇಳೆ ಕೊಹ್ಲಿ ಕೊನೆಯ ಟೆಸ್ಟ್ ಪಂದ್ಯದಲ್ಲಿ ದ್ರಾವಿಡ್ ಅವರ ರೆಕಾರ್ಡ್‌ನ್ನು ಮುರಿದರೆ, ಪ್ರಸ್ತುತ ಸರಣಿಯಲ್ಲಿ ನಾಯಕತ್ವದ ಜತೆಗೆ ಹೊಸ ಮೈಲಿಗಲ್ಲು ಸೃಷ್ಟಿಸಿದಂತಾಗುತ್ತದೆ.

ಇನ್ನೊಂದೆಡೆ ಟೆಸ್ಟ್ ಪಂದ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಡಿಢೀರನೆ ವಿದಾಯ ಹೇಳಿ ಹೊರನಡೆದಿರುವುದರಿಂದ ಸಿಡ್ನಿ ಟೆಸ್ಟ್‌ನಲ್ಲಿ ಭಾರತ ಗೆಲುವು ಸಾಧಿಸುವ ಮೂಲಕ ಆ ಗೆಲವನ್ನು ಧೋನಿಗೆ ಸಮರ್ಪಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತದೆ.

ಹೀಗಿರುವಾಗ ಅಂತಿಮ ಟೆಸ್ಟ್ ಪಂದ್ಯವನ್ನು ಭಾರತ ಗೆಲ್ಲಲಿ, ಕೊಹ್ಲಿ ದಾಖಲೆ ವೀರನಾಗಲಿ ಎಂಬುದೇ ಕ್ರಿಕೆಟ್ ಪ್ರೇಮಿಗಳ ಹಾರೈಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com