ಜೀವನದ ಕ್ಷಣಗಳನ್ನು ತೆರೆದಿಟ್ಟ ಕ್ರಿಕೆಟ್ ದೇವರು

ವಿಶ್ವ ಬ್ಯಾಟಿಂಗ್ ದಿಗ್ಗಜ ಸಚಿನ್...
ಸಚಿನ್ ತೆಂಡೂಲ್ಕರ್ ಬಹು ನಿರೀಕ್ಷಿತ 'ಪ್ಲೇಯಿಂಗ್ ಇಟ್ ಮೈ ವೇ ಆತ್ಮ ಚರಿತ್ರೆ ಬಿಡುಗಡೆ ಕಾರ್ಯಕ್ರಮ.
ಸಚಿನ್ ತೆಂಡೂಲ್ಕರ್ ಬಹು ನಿರೀಕ್ಷಿತ 'ಪ್ಲೇಯಿಂಗ್ ಇಟ್ ಮೈ ವೇ ಆತ್ಮ ಚರಿತ್ರೆ ಬಿಡುಗಡೆ ಕಾರ್ಯಕ್ರಮ.

ಮುಂಬೈ: ವಿಶ್ವ ಬ್ಯಾಟಿಂಗ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಹು ನಿರೀಕ್ಷಿತ 'ಪ್ಲೇಯಿಂಗ್ ಇಟ್ ಮೈ ವೇ ಆತ್ಮ ಚರಿತ್ರೆಯನ್ನು ಮುಂಬೈನಲ್ಲಿ ಬುಧವಾರ ಸಂಜೆ ಬಿಡುಗಡೆ ಮಾಡಿದರು.

ಜಗಮಗಿಸುವ ಕಾರ್ಯಕ್ರಮದಲ್ಲಿ ಬಿಡುಗಡೆಯಾದ ಈ ಪುಸ್ತಕ ಗುರುವಾರದಿಂದ ಮಾರಾಟಕ್ಕೆ ಲಭ್ಯವಿದೆ.

ತಾಯಿಗೆ ಪುಸ್ತಕದ ಪ್ರತಿ: ಹಲವಾರು ಕುತೂಹಲಕಾರಿ ಅಂಶಗಳನ್ನು ಹೊಂದಿರುವ ಈ ಪುಸ್ತಕ ಬಿಡುಗಡೆಗೂ ಮುನ್ನ, ಸಚಿನ್ ತಾಯಿ ರಜನಿ ಅವರಿಗೆ ಪುಸ್ತಕದ ಒಂದು ಪ್ರತಿಯನ್ನು ನೀಡಿದರು. ಆಗ ಸಚಿನ್ ಅವರೊಂದಿಗೆ ಅವರ ಸೋದರ ಅಜೀತ್ ಮತ್ತು ಪತ್ನಿ ಅಂಜಲಿ ಇದ್ದರು.

ಪುಸ್ತಕ ಬಿಡುಗಡೆ ವೇಳೆ ಹಾಜರಿದ್ದ ಸಚಿನ್ ಪತ್ನಿ ಅಂಜಲಿ, ಸುನಿಲ್ ಗವಾಸ್ಕರ್, ರವಿಶಾಸ್ತ್ರಿ ಹಾಗೂ ದಿಲೀಪ್ ವೆಂಗ್ಸ್‌ರ್ಕಾರ್ ಸೇರಿದಂತೆ ಇತರ ಗಣ್ಯರು ಸಚಿನ್ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.

ಅಂಜಲಿ ಮೊದಲು ಭೇಟಿಯಾದಾಗ: ನಾನು ನನ್ನ ತಾಯಿಯನ್ನು ಕರೆದುಕೊಂಡು ಬರಲು ವಿಮಾನ ನಿಲ್ದಾಣಕ್ಕೆ ತೆರಳಿದಾಗ ಸಚಿನ್ ನನ್ನ ಮನಸೊರೆಗೊಂಡರು. ಆಗ ಕೇವಲ 17 ವರ್ಷದವರಾಗಿದ್ದ ಸಚಿನ್ ಒಂದು ರೀತಿಯಲ್ಲಿ ಮುಜುಗರಕ್ಕೊಳಗಾದವರಂತೆ ಕಂಡುಬಂದರು ಎಂದು ಪತ್ನಿ ಅಂಜಲಿ ತಿಳಿಸಿದರು.

ನೀರಿನಿಂದ ಹೊರಬಿದ್ದ ಮೀನಾಗಿದ್ದ ಸಚಿನ್: ಪಾಕಿಸ್ತಾನದ ವಿರುದ್ಧ ನಡೆದ ಪಂದ್ಯದ ಮೊದಲ ಇನಿಂಗ್ಸ್‌ನಿಂದ ಹೊರಬಿದ್ದಾಗ, ಸಚಿನ್ ನೀರಿನಿಂದ ಹೊರಬಿದ್ದ ಮೀನಿನಂತಾಗಿದ್ದರು. ಆದರೆ, ಪಾಕಿಸ್ತಾನದ ಪ್ರವಾಸ ಮುಕ್ತಾಯವಾದ ನಂತರ ವೈಟ್ ಶಾರ್ಕ್ ಆಗಿದ್ದರು ಎಂದು ರವಿಶಾಸ್ತ್ರಿ ತಿಳಿಸಿದರು.

ಮುಲ್ತಾನ್ ಘಟನೆ ಪ್ರಸ್ತಾಪ: 2004ರಲ್ಲಿ ಪಾಕಿಸ್ತಾನದ ವಿರುದ್ಧ ಮುಲ್ತಾನ್‌ನಲ್ಲಿ ಟೆಸ್ಟ್ ಪಂದ್ಯ ನಡೆದಾಗ 194 ರನ್ ಗಳಿಸಿದ್ದ ಸಚಿನ್ ತೆಂಡೂಲ್ಕರ್ ದ್ವಿಶತಕ ಬಾರಿಸಲು ಸಮೀಪವಿದ್ದಾಗ, ನಾಯಕ ರಾಹುಲ್ ದ್ರಾವಿಡ್ ಡಿಕ್ಲೇರ್ ಘೋಷಿಸಿದ್ದ ಕುರಿತು ತೆಂಡೂಲ್ಕರ್ ಮಾತನಾಡಿದರು.
ಈ ಘಟನೆಯ ನಂತರವೂ ನಾನು ರಾಹುಲ್ ದ್ರಾವಿಡ್ ಉತ್ತಮ ಸ್ನೇಹಿತರಾಗಿ ಮುಂದುವರಿದಿದ್ದೇವೆ. ಎಲ್ಲ ಕ್ರಿಕೆಟ್ ಆಟಗಾರರು ಕೆಲ ಸಮಯ ಪರಸ್ಪರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ ಎಂದು ಸಚಿನ್ ತಿಳಿಸಿದರು.

ಆಸೀಸ್ ಪ್ರವಾಸ ಬಹಿಷ್ಕಾರಕ್ಕೆ ನಿರ್ಧರಿಸಿದ್ದ ಸಚಿನ್: ಭಾರತೀಯ ಕ್ರಿಕೆಟ್‌ನಲ್ಲಿ ನಡೆದ ಪ್ರಮುಖ ಪ್ರಕರಣಗಳಲ್ಲಿ ಒಂದಾದ ಮಂಕಿ ಗೇಟ್ ನಂತರ ಆಸ್ಟ್ರೇಲಿಯಾ ಪ್ರವಾಸವನ್ನು ಬಹಿಷ್ಕರಿಸಲು ಸಚಿನ್ ತೆಂಡೂಲ್ಕರ್ ನಿರ್ಧರಿಸಿದ್ದರಂತೆ.
ಸಿಡ್ನಿಯಲ್ಲಿ ನಡೆದ ದ್ವೀತಿಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆ್ಯಂಡ್ರೂ ಸೈಮಂಡ್ಸ್ ವಿರುದ್ಧ ಭಾರತದ ಹರ್ಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದ್ದಾರೆ ಎಂದು ಅತಿಧೇಯ ಆಸ್ಟ್ರೇಲಿಯಾ ತಂಡ ದೂರು ನೀಡಿದ ನಂತರ, ಆ ಸರಣಿಯನ್ನೇ ಬಹಿಷ್ಕರಿಸಬೇಕು ಎಂದು ಸಚಿನ್ ತೀರ್ಮಾನಿಸಿದ್ದರಂತೆ. ಒಂದು ವೇಳೆ ಹರ್ಭಜನ್ ಮೇಲೆ ನಿಷೇಧ ಹೇರಿದರೆ ಸರಣಿಯನ್ನು ಬಹಿಷ್ಕರಿಸಬೇಕು ಎಂದು ನಾನು ಮತ್ತು ಅನಿಲ್ ಕುಂಬ್ಳೆ ತೀರ್ಮಾನಿಸಿದ್ದೇವು ಎಂದು ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ ಸಚಿನ್.

ಪುಸ್ತಕ ಬಿಡುಗಡೆ ವೀಡಿಯೊಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com