ರಾಯುಡು ಶತಕಕ್ಕೆ ಲಂಕಾ ಬಲಿ

ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಅಂಬಟಿ ರಾಯುಡು(ಅಜೇಯ 121) ಅವರ ಚೊಚ್ಚಲ ಶತಕದ ನೆರವಿನಿಂದ ಟೀಂ ಇಂಡಿಯಾ...
ಶತಕ ದಾಖಲಿಸಿ ಮಿಂಚಿದ ಅಂಬಟಿ ರಾಯುಡು
ಶತಕ ದಾಖಲಿಸಿ ಮಿಂಚಿದ ಅಂಬಟಿ ರಾಯುಡು

ಅಹಮದಾಬಾದ್: ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಅಂಬಟಿ ರಾಯುಡು(ಅಜೇಯ 121) ಅವರ ಚೊಚ್ಚಲ ಶತಕದ ನೆರವಿನಿಂದ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಸುಲಭ ಗೆಲವು ದಾಖಲಿಸಿದೆ.

ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾದ ತಂಡ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ನಂತರ 50 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 274 ರನ್ ದಾಖಲಿಸಿತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 44.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 275 ರನ್ ದಾಖಲಿಸಿ ಗೆಲವಿನ ದಡ ಸೇರಿತು.

ಮಿಂಚಿದ ರಾಯುಡು: ಶ್ರೀಲಂಕಾ ನೀಡಿದ ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಕಳೆದ ಪಂದ್ಯದಲ್ಲಿ ಶತಕ ದಾಖಲಿಸಿ ಮಿಂಚಿದ್ದ ಆರಂಭಿಕ ಬ್ಯಾಟ್ಸ್‌ಮನ್ ಅಂಜಿಕ್ಯ ರಹಾನೆ 8 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು. ಹಾಗಾಗಿ ತಂಡ ಆರಂಭದಲ್ಲಿ ಎಡವಿದಂತಾಯಿತು.

2ನೇ ವಿಕೆಟ್‌ಗೆ ಜತೆಯಾದ ಶಿಖರ್ ಧವನ್ ಹಾಗೂ ಅಂಬಟಿ ರಾಯುಡು ತಂಡಕ್ಕೆ 122 ರನ್‌ಗಳ ಶತಕದ ಜತೆಯಾಟ ನೀಡಿ ಪಂದ್ಯವನ್ನು ಸಂಪೂರ್ಣವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.

ಪಂದ್ಯದ ಅಂತಿಮದವರೆಗೂ ಅಜೇಯರಾಗುಳಿದ ಅಂಬಟಿ ರಾಯುಡು ಏಕದಿನ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ದಾಖಲಿಸಿದರು. 118 ಎಸೆತಗಳನ್ನು ಎದುರಿಸಿದ ರಾಯುಡು 10 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ ಅಜೇಯ 121 ರನ್ ಪೇರಿಸಿದರು.

ಇನ್ನು ಮೊದಲ ಪಂದ್ಯದಲ್ಲಿ ಶತಕ ದಾಖಲಿಸಿದ್ದ ಶಿಖರ್ ಧವನ್, ಈ ಪಂದ್ಯದಲ್ಲಿ 80 ಎಸೆತದಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ 79 ರನ್ ದಾಖಲಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಬಂದ ಕೊಹ್ಲಿ 44 ಎಸೆತದಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 49 ರನ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com