
ಮುಂಬೈ: ಮುಂಬರುವ ಆಸಿಸ್ ಪ್ರವಾಸಕ್ಕೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಇದೇ ಮೊದಲ ಬಾರಿಗೆ ಕನ್ನಡಿಗ ರಾಹುಲ್ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದಾರೆ.
ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಅವರ ನೇತೃತ್ವದಲ್ಲಿ ಮುಂಬೈನ ಬಿಸಿಸಿಐ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಆಸ್ಟ್ರೇಲಿಯಾ ಪ್ರವಾಸಕ್ಕಾಗಿ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕದ ಪ್ರತಿಭಾನ್ವಿತ ಆಟಗಾರ ಕೆ.ಎಲ್.ರಾಹುಲ್ ಅವರಿಗೆ ಸ್ಥಾನ ಕಲ್ಪಿಸಲಾಗಿದ್ದು, ಕರ್ನಾಟಕದ ಮತ್ತೊರ್ವ ಆಟಗಾರ ಸ್ಟುವರ್ಟ್ ಬಿನ್ನಿಯನ್ನು ತಂಡದಿಂದ ಕೈಬಿಡಲಾಗಿದೆ. ಇನ್ನು ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಸುರೇಶ್ ರೈನಾ ಅವರನ್ನು ಮತ್ತೆ ತಂಡಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಇನ್ನು ಶ್ರೀಲಂಕಾ ವಿರುದ್ಧ ಏಕದಿನ ಪಂದ್ಯದಲ್ಲಿ ಕೈನ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ನಾಯಕ ಧೋನಿ ಮೊದಲ ಟೆಸ್ಟ್‌ಗೆ ಅಲಭ್ಯರಾಗಿದ್ದು, ಅವರ ಬದಲಿಗೆ ವಿರಾಟ್ ಕೊಹ್ಲಿ ಇದೇ ಮೊದಲ ಬಾರಿಗೆ ತಂಡದ ಸಾರಥ್ಯವನ್ನು ವಹಿಸಿಕೊಳ್ಳಲ್ಲಿದ್ದಾರೆ. ಇನ್ನು ಮೊದಲ ಟೆಸ್ಟ್‌ನಿಂದ ಧೋನಿ ಹೊರಗುಳಿದಿರುವುದರಿಂದ ವಿಕೆಟ್ ಕೀಪರ್ ಸಮಸ್ಯೆ ಎದುರಾಗಿದ್ದು, ಇದನ್ನು ನಿವಾರಿಸಲು ಬಿಸಿಸಿಐ ಕ್ರಮ ಕೈಗೊಂಡಿದೆ. ನಮನ್ ಓಜಾ ಮತ್ತು ವೃದ್ಧಿಮಾನ್ ಸಹಾ ಅವರನ್ನು ಹೆಚ್ಚುವರಿ ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದ್ದು, ಮೊದಲ ಟೆಸ್ಚ್‌ನಲ್ಲಿ ಧೋನಿ ಅವರ ಬದಲಿಗೆ ಇವರಿಬ್ಬರಲ್ಲಿ ಒಬ್ಬರು ಕೀಪಿಂಗ್ ಜವಾಬ್ದಾರಿ ಹೊರಲಿದ್ದಾರೆ.
ಆಯ್ಕೆಗಾರರ ಗಮನೆ ಸೆಳೆದ ಕನ್ನಡಿಗ ರಾಹುಲ್
ಇನ್ನು ಪ್ರಸ್ತುತ ಆಯ್ಕೆಗಾರರ ಗಮನ ಸೆಳೆದು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿರುವ ಕನ್ನಡಿಗ ರಾಹುಲ್ ಪ್ರಸ್ತುತ ಉತ್ತಮ ಫಾರ್ಮ್‌ನಲ್ಲಿದ್ದು, ಕೇಂದ್ರವಲಯದ ವಿರುದ್ಧದ ದುಲೀಪ್ ಟ್ರೋಫಿ ಫೈನಲ್‌ನಲ್ಲಿ ಎರಡು ಶತಕ ಸಿಡಿಸಿದ್ದಾರೆ. ರಾಹುಲ್ ಆಯ್ಕೆ ಕುರಿತು ಹರ್ಷ ವ್ಯಕ್ತಪಡಿಸಿರುವ ಅವರ ತಂದೆ ಲೋಕೇಶ್ ಅವರು, ಅವನ ಆಯ್ಕೆ ನಿರೀಕ್ಷಿತವಾಗಿತ್ತು. ಪ್ರಸಕ್ತ ಋತುವಿನಲ್ಲಿ ರಾಹುಲ್ ಉತ್ತಮ ಫಾರ್ಮ್‌ನಲ್ಲಿದ್ದಾನೆ. ದೇಶದ ಪರ ಆಡಲು ಆಯ್ಕೆಯಾಗುವುದು ಹೆಮ್ಮೆಯ ಸಂಗತಿಯಾಗಿದ್ದು, ಆಯ್ಕೆದಾರರ ನಿರೀಕ್ಷೆಯನ್ನು ರಾಹುಲ್ ಹುಸಿ ಮಾಡುವುದಿಲ್ಲ ಎಂಬ ಭರವಸೆ ತಮಗಿದೆ ಎಂದು ಹೇಳಿದರು.
ಇದೇ ಡಿಸೆಂಬರ್ 4ರಿಂದ ಬ್ರಿಸ್‌ಬೇನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ಮೊದಲ ಟೆಸ್ಟ್ ಆಡಲಿದ್ದು, ನವೆಂಬರ್ 21ರಂದು ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ತೆರಳಲಿದೆ.
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಮಂಡಳಿ ಸಿದ್ಧಪಡಿಸಿರುವ ಭಾರತ ತಂಡದ ಪಟ್ಟಿ ಇಂತಿದೆ.
ಮಹೇಂದ್ರ ಸಿಂಗ್ ಧೋನಿ (ನಾಯಕ), ವಿರಾಟ್ ಕೊಹ್ಲಿ, ಶಿಖರ್ ಧವನ್, ಮುರಳಿ ವಿಜಯ್, ಕೆ.ಎಲ್.ರಾಹುಲ್, ಚೇತೇಶ್ವರ ಪೂಜಾರ, ಅಜಿಂಕ್ಯಾ ರಹಾನೆ, ರೋಹಿತ್ ಶರ್ಮಾ, ಸುರೇಶ್ ರೈನಾ, ವೃದ್ಧಿಮಾನ್ ಸಹಾ, ನಮನ್ ಓಜಾ, ರವಿಚಂದ್ರನ್ ಅಶ್ವಿನ್, ಕರಣ್ ಶರ್ಮಾ, ರವೀಂದ್ರ ಜಡೇಜಾ, ಭುವನೇಶ್ವರ ಕುಮಾರ್, ಮಹಮದ್ ಶಮಿ, ಇಶಾಂತ್ ಶರ್ಮಾ, ಉಮೇಶ್ ಯಾದವ್, ವರುಣ್ ಆರನ್
Advertisement