ಲಂಕಾ ವಿಶ್ವಕಪ್ ತಯಾರಿಗೆ ಭಾರತ ಪ್ರವಾಸ ಮಾರಕ: ರಣತುಂಗ

ಲಂಕಾ ತಂಡದ 2015ರ ವಿಶ್ವಕಪ್ ಸಿದ್ಧತೆಗೆ ಪ್ರಸಕ್ತ ಭಾರತ ಪ್ರವಾಸ ಮಾರಕವಾಗುವ ಸಾಧ್ಯತೆಗಳಿವೆ ಎಂದು ಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ ಅಭಿಪ್ರಾಯಪಟ್ಟಿದ್ದಾರೆ.
ಭಾರತದ ರೋಹಿತ್ ಶರ್ಮಾ ಮತ್ತು ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ
ಭಾರತದ ರೋಹಿತ್ ಶರ್ಮಾ ಮತ್ತು ಶ್ರೀಲಂಕಾ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ

ಕೊಲಂಬೋ: ಲಂಕಾ ತಂಡದ 2015ರ ವಿಶ್ವಕಪ್ ಸಿದ್ಧತೆಗೆ ಪ್ರಸಕ್ತ ಭಾರತ ಪ್ರವಾಸ ಮಾರಕವಾಗುವ ಸಾಧ್ಯತೆಗಳಿವೆ ಎಂದು ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಅರ್ಜುನ್ ರಣತುಂಗ ಅಭಿಪ್ರಾಯಪಟ್ಟಿದ್ದಾರೆ.

ಶ್ರೀಲಂಕಾದ ಪ್ರಸಕ್ತ ಪ್ರವಾಸದಿಂದಾಗಿ 2015ರ ವಿಶ್ವಕಪ್ ತಯಾರಿಗೆ ಮಾರಕ ಪೆಟ್ಟು ಬೀಳುವ ಸಾಧ್ಯತೆ ಇದೆ. ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ ಕ್ರಿಕೆಟ್ ತಂಡ ಏಕದಿನ ಸರಣಿಯಲ್ಲಿ ಸತತ ಹೀನಾಯ ಸೋಲು ಅನುಭವಿಸುತ್ತಿದ್ದು, ಸರಣಿಗೆ ಲಂಕಾ ತಂಡ ಮಾನಸಿಕವಾಗಿ ಸಿದ್ಧವಾಗಿಲ್ಲದಿದ್ದುದ್ದೇ ಈ ವೈಫಲ್ಯಕ್ಕೆ ಕಾರಣ ಎಂದು ಅರ್ಜುನ ರಣತುಂಗ ಹೇಳಿದ್ದಾರೆ.

'ಬಿಸಿಸಿಐನ ಒತ್ತಡಕ್ಕೆ ಮಣಿದ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಪೂರ್ವಾಪರ ಆಲೋಚನೆ ಮಾಡದೆಯೇ ಟೆಸ್ಟ್ ಮತ್ತು ಏಕದಿನ ಸರಣಿಗೆ ಒಪ್ಪಿಗೆ ನೀಡಿದೆ. ಭಾರತದ ವಿರುದ್ಧದ ಸರಣಿಗೆ ಮಾನಸಿಕವಾಗಿ ಸಿದ್ಧರಾಗಿಲ್ಲದ ಲಂಕಾ ಆಟಗಾರರು ತುರ್ತು ಪರಿಸ್ಥಿತಿಗೆ ಹೊಂದಿಕೊಳ್ಳುವಲ್ಲಿ ವಿಫಲರಾಗುತ್ತಿದ್ದು, ಏಕದಿನ ಸರಣಿಯಲ್ಲಿ ಕಳಪೆ ಪ್ರರ್ದಶನ ತೋರುತ್ತಿದ್ದಾರೆ' ಎಂದು ಶ್ರೀಲಂಕಾ ತಂಡದ ಮಾಜಿ ನಾಯಕ ಅಭಿಪ್ರಾಯಪಟ್ಟಿದ್ದಾರೆ.

ಭಾರತ ಪ್ರವಾಸದಲ್ಲಿನ ಲಂಕಾ ತಂಡದ ಕಳಪೆ ಪ್ರದರ್ಶನಕ್ಕೆ ಆಯ್ಕೆದಾರರ ಸಮಿತಿ ಅಧ್ಯಕ್ಷ ಜಯಸೂರ್ಯ, ತಂಡದ ಕೋಚ್ ಮರ್ವನ್ ಅಟ್ಟಪಟ್ಟು ಮತ್ತ ತಂಡದ ನಾಯಕ ಎಂಜಲೋ ಮ್ಯಾಥ್ಯೂಸ್ ಅವರೇ ನೇರ ಕಾರಣ. ತಂಡದ ಮನಸ್ಥಿತಿಯ ಬಗ್ಗೆ ತಿಳಿದಿದ್ದರೂ ಈ ಮೂವರು ಭಾರತ ಪ್ರವಾಸಕ್ಕೆ ಒಪ್ಪಿಗೆ ನೀಡಿದ್ದು, ತಂಡಕ್ಕೆ ಮಾರಕವಾಗಿ ಪರಿಣಮಿಸಿದೆ. ಭಾರತ ಪ್ರವಾಸಕ್ಕೆ ಒಪ್ಪಿಗೆ ನೀಡಿದ್ದಾಗ ಶ್ರೀಲಂಕಾ ತಂಡದ ಆಟಗಾರರು ದೈಹಿಕ ಪರೀಕ್ಷೆಯಲ್ಲಿ ತೊಡಗಿಕೊಂಡಿದ್ದರು. ಬಿಸಿಸಿಐನಿಂದ ಆಹ್ವಾನ ಬರುತ್ತಲೇ ಶ್ರೀಲಂಕಾ ಕ್ರಿಕೆಟ್ ಸಂಸ್ಥೆ ಪೂರ್ವಾಪರ ಆಲೋಚನೆ ಮಾಡದೆಯೇ ಪ್ರವಾಸಕ್ಕೆ ಆಟಗಾರರ ಹೆಸರನ್ನು ಕೂಡ ಘೋಷಣೆ ಮಾಡಿಬಿಟ್ಟಿತು. ಇದೀಗ ಅದರ ಫಲವನ್ನು ನಾವು ನೋಡುತ್ತಿದ್ದೇವೆ ಎಂದು ರಣತುಂಗ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಭಾರತದಲ್ಲಿ ನಡೆಯುತ್ತಿರುವ ಶ್ರೀಲಂಕಾ ಮತ್ತು ಭಾರತ ನಡುವಿನ ಏಕದಿನ ಪಂದ್ಯದಲ್ಲಿ ಲಂಕಾ ತಂಡ ಹೀನಾಯ ಪ್ರದರ್ಶನ ತೋರುತ್ತಿದ್ದು, ನಿನ್ನೆಯಷ್ಟೇ ಭಾರತದ ರೋಹಿತ್ ಶರ್ಮಾ ವೈಯುಕ್ತಿಕ 264ರನ್‌ಗಳ ದಾಖಲೆ ನಿರ್ಮಿಸಿದರು. ಯಾವುದೇ ಹಂತದಲ್ಲಿಯೂ ಲಂಕಾ ಬೌಲರ್‌ಗಳಿಂದ ಭಾರತ ಬ್ಯಾಟ್ಸಮನ್‌ಗಳನ್ನು ಕಟ್ಟಿಹಾಕಲು ಸಾಧ್ಯವಾಗಲೇ ಇಲ್ಲ. ಕಳಪೆ ಪ್ರದರ್ಶನದಿಂದಾಗಿ ಶ್ರೀಲಂಕಾದಲ್ಲಿ ಆಟಗೀರರ ವಿರುದ್ಧ ಅಸಮಾಧಾನ ಭುಗಿಲೆದಿದ್ದು, ಕ್ರಿಕೆಟ್ ಪ್ರೇಮಿಗಳು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಮಾಜಿ ನಾಯಕ ಅರ್ಜುನ ರಣತುಂಗ ಅವರು ಹೇಳಿಕೆ ನೀಡಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ ತನ್ನ ವೇತನ ತಾರತಮ್ಯದಿಂದಾಗಿ ಭಾರತ ಪ್ರವಾಸವನ್ನು ಮೊಟಕು ಗೊಳಿಸಿ ಸ್ವದೇಶಕ್ಕೆ ವಾಪಸ್ ತೆರಳಿತ್ತು. ವಿಂಡೀಸ್ ಆಟಗಾರರ ನಿರ್ಧಾರದಿಂದಾಗಿ ಬಿಸಿಸಿಐಗೆ ಸಾಕಷ್ಟು ನಷ್ಟವಾಗಿತ್ತು. ಈ ನಷ್ಟವನ್ನು ಭರಿಸಲು ಬಿಸಿಸಿಐ ಶ್ರೀಲಂಕಾ ಕ್ರಿಕೆಟ್ ಸಂಸ್ಥೆಯ ಮೇಲೆ ಒತ್ತಡ ಹೇರಿ ಶ್ರೀಲಂಕಾ ಮತ್ತು ಭಾರತ ತಂಡಗಳ ನಡುವೆ ಸರಣಿ ಆಯೋಜನೆ ಮಾಡಿದ್ದರು.

2015 ವಿಶ್ವಕಪ್ ತಯಾರಿ ಸೇರಿದಂತೆ ಮುಂಬರುವ ಸರಣಿಗಳಿಗಾಗಿ ದೈಹಿಕ ಸಮಾರ್ಥ್ಯ ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದ ಲಂಕಾ ಆಟಗಾರರು ಲಂಕಾ ಕ್ರಿಕೆಟ್ ಸಂಸ್ಥೆಯ ಆಣತಿ ಮೇರೆಗೆ ಅನಿವಾರ್ಯವಾಗಿ ಭಾರತ ಪ್ರವಾಸ ಕೈಗೊಳ್ಳಬೇಕಾಯಿತು. ಇದೇ ವಿಚಾರವನ್ನು ಸರಣಿಗೂ ಮೊದಲೇ ಲಂಕಾ ತಂಡದ ನಾಯಕ ಮಾಥ್ಯೂಸ್ ಅವರು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com