
ದುಬೈ: ಐಸಿಸಿ ವರ್ಷದ ಏಕದಿನ ಕ್ರಿಕೆಟ್ ತಂಡದಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಒಟ್ಟು ನಾಲ್ವರು ಭಾರತೀಯ ಆಟಗಾರರು ಸ್ಥಾನ ಪಡೆದಿದ್ದಾರೆ.
ಶುಕ್ರವಾರ ಐಸಿಸಿ ವರ್ಷದ ಏಕದಿನ ಹಾಗೂ ಟೆಸ್ಟ್ ತಂಡ ಪ್ರಕಟಿಸಲಾಗಿದ್ದು, ಏಕದಿನ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿದ್ದಾರೆ. ಇನ್ನು ವಿರಾಟ್ ಕೊಹ್ಲಿ, ಮಧ್ಯಮ ವೇಗಿ ಮೊಹಮದ್ ಶಮಿ ಜತೆಗೆ ರೋಹಿತ್ ಶರ್ಮಾ 12ನೇ ಆಟಗಾರರಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೆಸ್ಟ್ ತಂಡದಲ್ಲಿ ಭಾರತದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ. ಅಲ್ಲದೆ ಪಾಕಿಸ್ತಾನದಿಂದಲೂ ಯಾವುದೇ ಆಟಗಾರ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿಲ್ಲ. ಇನ್ನು ಈ ತಂಡದ ನಾಯಕತ್ವವನ್ನು ಶ್ರೀಲಂಕಾದ ಆ್ಯಂಜಲೋ ಮ್ಯಾಥ್ಯೂಸ್ ಅವರಿಗೆ ನೀಡಲಾಗಿದ್ದು, ಲಂಕಾ ತಂಡದಿಂದ ಕುಮಾರ ಸಂಗಕ್ಕಾರ ಹಾಗೂ ರಂಗನ ಹೆರಾಥ್ ಸ್ಥಾನ ಪಡೆದಿದ್ದಾರೆ.
ಜಾನ್ಸನ್ ವರ್ಷದ ಕ್ರಿಕೆಟಿಗ: ಇನ್ನು ಆಸ್ಟ್ರೇಲಿಯಾದ ವೇಗಿ ಮಿಚೆಲ್ ಜಾನ್ಸನ್, ಸರ್ ಗ್ಯಾರ್ ಫೀಲ್ಡ್ ಸೋಬರ್ಸ್ ವರ್ಷದ ಕ್ರಿಕೆಟಿಗ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅಲ್ಲದೆ ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇನ್ನು 2004ರಿಂದ ನೀಡಲಾಗುತ್ತಿರುವ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಜಾನ್ಸನ್ ಎರಡನೇ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಅವರು 2009ರಲ್ಲಿ ಈ ಪ್ರಶಸ್ತಿಯನ್ನು ಪಡೆದಿದ್ದರು. ಈ ಮೂಲಕ ರಿಕಿ ಪಾಂಟಿಂಗ್(2006-2007) ಜತೆಗೆ ಎರಡು ಬಾರಿ ಈ ಪ್ರಶಸ್ತಿ ಪಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ.
Advertisement