ಬಿಸಿಸಿಐ ವಾರ್ಷಿಕ ಸಭೆ ಮತ್ತೆ ಮುಂದೂಡಿಕೆ

ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 17ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ.
ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್
ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್

ಚೆನ್ನೈ: ಬಿಸಿಸಿಐನ ವಾರ್ಷಿಕ ಸಾಮಾನ್ಯ ಸಭೆಯನ್ನು ಮತ್ತೆ ಮುಂದೂಡಲಾಗಿದ್ದು, ಡಿಸೆಂಬರ್ 17ರಂದು ಸಭೆ ನಡೆಸಲು ನಿರ್ಧರಿಸಲಾಗಿದೆ.

ಇಂದು ತುರ್ತು ಸಭೆ ಸೇರಿದ್ದ ಬಿಸಿಸಿಐನ ಪದಾಧಿಕಾರಿಗಳು ಚೆನ್ನೈನಲ್ಲಿ ಡಿಸೆಂಬರ್ 17ರಂದು ವಾರ್ಷಿಕ ಸಾಮಾನ್ಯ ಸಭೆ ನಡೆಸಲು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂತೆಯೇ ಇಂದು ನಡೆದ ಸಭೆಯಲ್ಲಿ ಕೆಲ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದ್ದು, ಬಿಸಿಸಿಐನ ವಿವಾದಿತ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರಿಗೆ ಮತ್ತೆ ಅಧಿಕಾರ ನೀಡುವ ವಿಚಾರಗಳು ಸೇರಿದಂತೆ ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.

ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಪ್ರಕರಣ ಸಂಬಂಧ ತನಿಖೆಗಾಗಿ ನೇಮಕಗೊಂಡಿದ್ದ ನ್ಯಾ.ಮುಕುಲ್ ಮುದ್ಗಲ್ ಸಮಿತಿ ಶ್ರೀನಿವಾಸನ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದು, ಶ್ರೀನಿವಾಸನ್ ಅವರ ಬಿಸಿಸಿಐ ಮರು ಪ್ರವೇಶಕ್ಕೆ ರಹದಾರಿ ಮಾಡಿಕೊಟ್ಟಂತಾಗಿದೆ. ಇದಕ್ಕೆ ಪೂರಕವಾಗಿ ಬಿಸಿಸಿಐನ ಪದಾಧಿಕಾರಿಗಳು ಕೂಡ ಶ್ರೀನಿವಾಸನ್ ಪರ ಬ್ಯಾಟಿಂಗ್ ಮಾಡುತ್ತಿದ್ದು, ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೂ ಶ್ರೀನಿವಾಸನ್‌ಗೂ ಯಾವುದೇ ಸಂಬಂಧವಿಲ್ಲ ಎಂದು ತನಿಖಾ ಸಮಿತಿಯೇ ವರದಿ ನೀಡಿದೆ ಎಂದು ಶ್ರೀನಿವಾಸನ್ ಅವರ ಬೆನ್ನಿಗೆ ನಿಂತಿದ್ದಾರೆ.

ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಬಿಸಿಸಿಐ, ನವೆಂಬರ್ 20ರಂದು ನಿಗದಿ ಪಡಿಸಲಾಗಿದ್ದ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯನ್ನು ಕಾರಣಾಂತರಗಳಿಂದ ಡಿಸೆಂಬರ್ 17ಕ್ಕೆ ಮುಂದೂಡಲಾಗಿದೆ. ಡಿಸೆಂಬರ್ 17ರಂದು ಚೆನ್ನೈನ ಪಾರ್ಕ್ ಶೆರಟನ್‌ನಲ್ಲಿ ಬೆಳಗ್ಗೆ 11.30ಕ್ಕೆ ಸಭೆ ನಿಗದಿಪಡಿಸಲಾಗಿದೆ ಎಂದು ತಿಳಿಸಿದೆ. ಅಲ್ಲದೆ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಕುರಿತಾಗಿಯೂ ಬಿಸಿಸಿಐ ಹೇಳಿಕೆ ಬಿಡುಗಡೆ ಮಾಡಿದ್ದು, ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ನ್ಯಾ.ಮುಕುಲ್ ಮುದ್ಗಲ್ ಸಮಿತಿಯೇ ಪ್ರಕರಣದಲ್ಲಿ ಶ್ರೀನಿವಾಸನ್ ಅವರ ಪಾತ್ರವಿಲ್ಲ ಎಂದು ವರದಿ ನೀಡಿದೆ. ಹೀಗಾಗಿ ಶ್ರೀನಿವಾಸನ್ ಅವರ ವಿರುದ್ಧ ಆರೋಪಗಳೆಲ್ಲಾ ನಿರಾಧಾರವೆಂದು ಸಾಬೀತಾಗಿದೆ ಎಂದು ಹೇಳಿಕೆ ನೀಡಿದೆ.

ಒಟ್ಟಾರೆ ಐಪಿಎಲ್ ಸ್ಫಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ವಿಚಾರಣೆ ಭೀತಿ ಎದುರಿಸುತ್ತಿದ್ದ ಬಿಸಿಸಿಐನ ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಅವರಿಗೆ ನ್ಯಾ.ಮುಕುಲ್ ಮುದ್ಗಲ್ ಸಮಿತಿಯ ವರದಿ ಮರುಜೀವ ನೀಡಿದೆ. ಡಿಸೆಂಬರ್‌ನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿಯೇ ಬಹುಶಃ ಶ್ರೀನಿವಾಸನ್ ಅವರು ಮರು ಗೃಹಪ್ರವೇಶ ಮಾಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com