
-ಸೋಮಶೇಖರ ಪಿ.ಭದ್ರಾವತಿ
ಬೆಂಗಳೂರು: ಸ್ಥಿರ ಪ್ರದರ್ಶನದ ಮೂಲಕ ನಾಕೌಟ್ ಹಂತಕ್ಕೆ ಪ್ರವೇಶಿಸಿರುವ ಭಾರತದ ಪ್ರಮುಕ ಸ್ನೂಕರ್ ಆಟಗಾರ ಕಮಲ್ ಚಾವ್ಲಾ, ಐಬಿಎಸ್‌ಎಫ್ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್‌ನ ತಮ್ಮ ಕೊನೆಯ ಲೀಗ್ ಪಂದ್ಯದಲ್ಲಿ ವಿರೋಚಿತ ಸೋಲನ್ನುಭವಿಸಿದ್ದಾರೆ. ಪಂದ್ಯದಲ್ಲಿ ಸೋತರೂ ಸಹ ಅವರು ನೀಡಿದ ಹೋರಾಟ ಮಾತ್ರ ಅದ್ಭುತವಾಗಿತ್ತು. ಅಲ್ಲದೆ ಮತ್ತೊಬ್ಬ ಆಟಗಾರ ಮನನ್ ಚಂದ್ರಾ ಸಹ ಅಂತಿಮ 32ರ ಸುತ್ತಿಗೆ ಪ್ರವೇಶಿಸಿದ್ದರು. ತಮ್ಮ ಪಂದ್ಯದಲ್ಲಿ ನಿರಾಸೆ ಅನುಭವಿಸಿದರು.
ಸೋಮವಾರ ಚಾಂಪಿಯನ್‌ಶಿಪ್‌ನ ಆರನೇ ದಿನ ನಡೆದ ಪಂದ್ಯದಲ್ಲಿ ಕಮಲ್ ಚಾವ್ಲಾ ತಮ್ಮ ಎದುರಾಳಿ ಸಿಂಗಾಪುರದ ಅಂಗ್ ಬೂಂಗ್ ಚಿನ್ ವಿರುದ್ಧ 3-4 ಫ್ರೇಮ್‌ಗಳ ಅಂತರದಲ್ಲಿ ಸೋಲನುಭವಿಸಿದ್ದಾರೆ. ಪಂದ್ಯದ ಆರಂಭಿಕ ಎರಡು ಫ್ರೇಮ್‌ಗಳಲ್ಲಿ ನಿಯಂತ್ರಣ ಸಾಧಿಸಲು ವಿಫಲರಾದ ಕಮಲ್, 42-90, 11-50 ಅಂಕಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದರು. ನಂತರ ಮೂರನೇ ಫ್ರೇಮ್‌ನಲ್ಲಿ 58-34ರ ಮುನ್ನಡೆ ಸಾಧಿಸಿದರು. ಮತ್ತೆ ನಾಲ್ಕನೇ ಫ್ರೇಮ್‌ನಲ್ಲಿ 6-61ರ ತೀವ್ರ ನಿರಾಸೆ ಅನುಭವಿಸಿದ ಕಮಲ್ , 1-3 ಫ್ರೇಮ್‌ಗಳ ಹಿಂದೆ ಉಳಿದಿದ್ದರು. ಹಾಗಾಗಿ ಸುಲಭವಾಗಿ ಪಂದ್ಯವನ್ನು ಕೈ ಚೆಲ್ಲುವಂತೆ ಕಂಡರು.
ಆದರೆ, ಪಂದ್ಯದ ನಂತರದ ಹಂತದಲ್ಲಿ ಕಮಲ್ ಕರಾಮತ್ತು ಎಲ್ಲರ ಹುಬ್ಬೇರುವಂತೆ ಮಾಡಿತು. ಐದು ಮತ್ತು ಆರನೇ ಫ್ರೇಮ್‌ನಲ್ಲಿ ಪ್ರಾಬಲ್ಯ ಮೆರೆದ ಕಮಲ್ ಚಾವ್ಲಾ, 72-24 ಮತ್ತು 79-0 ಅಂಕಗಳ ಮುನ್ನಡೆ ಪಡೆದು ಪಂದ್ಯದಲ್ಲಿ 3-3 ಫ್ರೇಮ್ ಸಮಬಲ ಸಾಧಿಸಿದರು. ಇನ್ನು ನಿರ್ಣಾಯಕ ಫ್ರೇಮ್‌ನಲ್ಲಿ ಉತ್ತಮ ಆರಂಭ ಪಡೆದ ಕಮಲ್ ಒಂದೇ ಬ್ರೇಕ್‌ನಲ್ಲಿ 43 ಅಂಕ ಸಂಪಾದಿಸಿ ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡರು. ಆದರೆ ಅಂತಿಮ ಹಂತದಲ್ಲಿ ಸಿಕ್ಕ ಒಂದೇ ಅವಕಾಶವನ್ನು ಬಳಸಿಕೊಂಡ ಸಿಂಗಾಪುರ ಆಟಗಾರ ಫ್ರೇಮ್ ಅನ್ನು 64-43 ಅಂತರದಲ್ಲಿ ವಶಪಡಿಸಿಕೊಂಡರು.
ಮನನ್ ಚಂದ್ರಾ ತಮ್ಮ ಎದುರಾಳಿ ವೇಲ್ಸ್‌ನ ಜೇಮಿ ಕ್ಲಾರ್ಕ್ ವಿರುದ್ಧ 4-2(61-16 5-69, 38-72, 67-0, 69-0, 83-25) ಫ್ರೇಮ್‌ಗಳಲ್ಲಿ ಪರಾಭವಗೊಂಡರು. ಇನ್ನು ಶಹಬಾಜ್ ಅದಿಲ್ ಖಾನ್ ತಮ್ಮ ಎದುರಾಳಿ ಆಸ್ಟ್ರೇಲಿಯಾದ ಮಾಥ್ಯೂಬೋಲ್ಟನ್ ವಿರುದ್ಧ 4-2 (23-107, 65-43, 81-13, 13-99, 69-15, 84-19) ಫ್ರೇಮ್‌ಗಳಿಂದ ಸೋಲನುಭವಿಸಿದರು.
ಇನ್ನು ಭಾರತದ ಪುರುಷರ ವಿಭಾಗದಲ್ಲಿ ಕಿರಿಯ ಆಟಗಾರ ಆಶುತೋಷ್ ಪಧಿ, ಟೂರ್ನಿಯಲ್ಲಿ ಅತ್ಯಂತ ಕಿರಿಯ ಆಟಗಾರ ಚೀನಾದ ಯಾಂಗ್ ಬಿಂಗ್‌ಟಾವ್ ವಿರುದ್ಧ 4-0(68-39, 61-51, 64-28, 74-09) ಅಂತರದಲ್ಲಿ ಪರಾಭವಗೊಂಡರು.
ಅಮೀಗೆ ಶಾಕ್:
ಭಾರತದ ಮಹಿಳಾ ಸ್ನೂಕರ್‌ನ ಭರವಸೆ ಎಂದೇ ಬಿಂಬಿತವಾಗಿರುವ ಅಮೀಕಮಾನಿ ಅವನರನ್ನು ಭಾರತದವರೇ ಆದ ಆರಾಂಕ್ಸಾ ಸ್ಯಾಂಚಿಸ್ 3-2 (49-61, 10-53, 72-47, 70-36, 70-28) ಶಾಕ್ ನೀಡಿದ್ದಾರೆ.
ಇನ್ನು ಪ್ರಮುಖ ಆಟಗಾರ್ತಿ ವಿದ್ಯಾ ಪಿಳ್ಳೈ, ತಮ್ಮ ಎದುರಾಳಿ ಹಾಂಕಾಂಗ್‌ನ ಆನ್‌ಯೀ ವಿರುದ್ಧ 2-3 (77-38, 32-67, 42-62, 53-2, 53-53) ಫ್ರೇಮ್‌ಗಳ ಅಂತರದಲ್ಲಿ ತಲೆ ಬಾಗಿದರು.
ಉಳಿದಂತೆ ಕರ್ನಾಟಕದ ಉಮಾದೇವಿ, ಬ್ರೆಜಿಲ್‌ನ ವೆಂಡಿ ಜೇನ್ಸ್ ವಿರುದ್ಧ 1-3(59-17, 9-72, 27-73, 37-57) ಹಾಗೂ ನೀನಾ ಪ್ರವೀಣ್, ಥಾಯ್ಲೆಂಡ್‌ನ ವರಾತನೂನ್ ಸುಕ್ರಿತನೇಸ್ ವಿರುದ್ಧ 1-3(100-63, 18-81, 2-65, 27-62) ಫ್ರೇಮ್‌ಗಳ ನಿರಾಸೆ ಅನುಭವಿಸಿದರು.
ಹಾಲಿ ಚಾಂಪಿಯನ್‌ಗೆ ಜಯ
ಇನ್ನು ಮಾಸ್ಟರ್ಸ್ ವಿಭಾಗದಲ್ಲಿ ಹಾಲಿ ಚಾಂಪಿಯನ್ ಥಾಯ್ಲೆಂಡ್‌ನ ಫಿಸಿಸ್ಟ್ ಚಾಂಡ್‌ಸ್ರಿ ತಮ್ಮ ಗೆಲುವಿನ ಹಾದಿಯಲ್ಲಿ ಸಾಗಿದ್ದಾರೆ. ತಮ್ಮ ಎದುರಾಳಿ ಬೆಲ್ಜಿಯಂನ ರೆನೆ ಹೆಮೆಲ್ ಸೋಟ್ ವಿರುದ್ಧ 3-0 (71-30, 59-20, 99-15) ಫ್ರೇಮ್‌ಗಳ ಗೆಲುವು ದಾಖಲಿಸಿದರು. ಉಳಿದಂತೆ ಭಾರತದ ನವೀನ್ ಕುಮಾರ್ ತಮ್ಮ ಎದುರಾಳಿ ಆಸ್ಟ್ರೇಲಿಯಾದ ಪೌಲ್ ಥೋಮೆರ್ಸನ್ ವಿರುದ್ಧ 3-0(84-9, 73-31, 63-27) ಹಾಗೂ ನದೀಮ್ ಅಹ್ಮದ್, ಎದುರಾಳಿ ನ್ಯೂಜಿಲೆಂಡ್‌ನ ಪೌಲ್ ಟೆಂಪಲ್ ವಿರುದ್ಧ 3-0 (74-31, 80-01, 78-08) ಫ್ರೇಮ್‌ಗಳ ಗೆಲುವು ದಾಖಲಿಸಿದರು.
Advertisement