
ಸಿಡ್ನಿ : ಮಂಗಳವಾರ 'ಶೆಫೀಲ್ಡ್ ಶೀಲ್ಡ್' ಪಂದ್ಯದ ವೇಳೆ ಮಾರಣಾಂತಿಕ ಬೌನ್ಸರ್ ಏಟು ತಿಂದು ಕೋಮಾ ಸ್ಥಿತಿಗೆ ತಲುಪಿದ್ದ ಆಸ್ಟ್ರೇಲಿಯಾದ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಗುರುವಾರ ನಿಧನರಾಗಿದ್ದಾರೆ.
ಸಿಡ್ನಿಯ ಸೇಂಟ್ ವಿನ್ಸೆಂಟ್ಸ್ ಹಾಸ್ಪಿಟಲ್‌ನ ತುರ್ತು ನಿಗಾ ಘಟಕದಲ್ಲಿ ಜೀವನ್ಮರಣದಲ ಹೋರಾಟ ನಡೆಸುತ್ತಿದ್ದ ಫಿಲಿಪ್ ಸಾವನ್ನಪ್ಪಿರುವ ಸುದ್ದಿಯನ್ನು ಆಸ್ಟ್ರೇಲಿಯಾದ ಟೀಂ ಡಾಕ್ಟರ್ ಪೀಟರ್ ಬ್ರಂಕರ್ ದೃಢಪಡಿಸಿದ್ದಾರೆ.
ಮಾರಕವಾದ ಅಬೋಟ್ ಎಸೆತ!
ಸಿಡ್ನಿ ಕ್ರಿಕೆಟ್ ಗ್ರೌಂಡ್‌ನಲ್ಲಿ ನಡೆಯುತ್ತಿದ್ದ ನ್ಯೂ ಸೌತ್ ವೇಲ್ಸ್ ಮತ್ತು ಸೌತ್ ಆಸ್ಟ್ರೇಲಿಯಾ ನಡುವೆ ಚತುರ್ದಿನ ಶೆಫೀಲ್ಡ್ ಶೀಲ್ಡ್ ಪಂದ್ಯ ನಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿತ್ತು. ಸೌತ್ ಆಸ್ಟ್ರೇಲಿಯ ಪರ ಇನ್ನಿಂಗ್ಸ್ ಆರಂಭಿಸುತ್ತಿದ್ದ ಹ್ಯೂಸ್ ಆಗ 63 ರನ್ ಮಾಡಿದ್ದು, 9 ಬೌಂಡರಿಗಳನ್ನು ಹೊಡೆದಿದ್ದರು.
ಬ್ಯಾಟಿಂಗ್ ಮುಂದುವರಿಸುತ್ತಿದ್ದಾಗ ನ್ಯೂ ಸೌತ್ ವೇಲ್ಸ್‌ನ ಮಧ್ಯಮ ವೇಗಿ ಸೀನ್ ಅಬೋಟ್ ಎಸೆದ ಬೌನ್ಸರ್‌ನ್ನು ಹುಕ್ ಮಾಡಲು ಹ್ಯೂಸ್ ಯತ್ನಿಸಿದ್ದಾರೆ. ಆವಾಗ ಚೆಂಡು ಹೆಲ್ಮೆಟ್ ಮೂಲಕ ತಲೆಗೆ ಬಂದು ಬಡಿದಿದೆ. ಸ್ವಲ್ಪ ಹೊತ್ತು ಬೆನ್ನು ಬಗ್ಗಿಸಿ ನಿಂತು ಹ್ಯೂಸ್ ನಂತರ ಪ್ರಜ್ಞೆ ಕಳೆದುಕೊಂಡು ಕುಸಿದು ಬಿದ್ದಿದ್ದರು. ತಲೆಯಿಂದ ರಕ್ತ ಸುರಿಯುತ್ತಿದ್ದು, ವೈದ್ಯ ಜಾನ್ ಆರ್ಚರ್ಡ್ ತುರ್ತು ಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಈ ಘಟನೆ ನಡೆದ ನಂತರ ಪಂದ್ಯವನ್ನು ಅಲ್ಲಿಗೇ ರದ್ದುಗೊಳಿಸಲಾಗಿತ್ತು.
ಫಿಲ್ ಹ್ಯೂಸ್ ಎಂದೇ ಜನಜನಿತ
ಫಿಲಿಪ್ ಜೋಯೆಲ್ ಹ್ಯೂಸ್ 'ಫಿಲ್ ಹ್ಯೂಸ್' ಎಂದೇ ಜನಜನಿತರಾಗಿದ್ದಾರೆ. 25ರ ಹರೆಯದ ಎಡಗೈ ಆರಂಭಿಕ ದಾಂಡಿಗನಾಗಿರುವ ಹ್ಯೂಸ್ 2009ರಕಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಈವರೆಗೆ ಒಟ್ಟು 26 ಟೆಸ್ಟ್ ಪಂದ್ಯಗಳನ್ನಾಡಿರುವ ಇವರು 3 ಶತಕ, 7 ಅರ್ಧಶತಕ ಬಾರಿಸಿದ್ದು ಒಟ್ಟು 1,535 ರನ್ ಗಳಿಸಿಕೊಂಡಿದ್ದಾರೆ.
25 ಏಕದಿನ ಪಂದ್ಯಗಳನ್ನು ಆಡಿ, 836 ರನ್ ಗಳಿಸಿರುವ ಇವರು ಏಕದಿನ ಪಂದ್ಯಗಳಲ್ಲಿ 2 ಶತಕ , 4 ಅರ್ಧ ಶತಕಗಳನ್ನು ಬಾರಿಸಿದ್ದಾರೆ.
ವಿಕೆಟ್ ಕೀಪಿಂಗ್ ಮೂಲಕವೂ ಗುರುತಿಸಿಕೊಂಡಿದ್ದ ಹ್ಯೂಸ್ ಟೆಸ್ಟ್‌ನಲ್ಲಿ ಅನುಭವಿ ಕ್ರಿಕೆಟರ್ ಎಂದೆನಿಸಿಕೊಂಡಿದ್ದರೂ ತಂಡದಲ್ಲಿ ಖಾಯಂ ಸ್ಥಾನ ಸಂಪಾದಿಸಲು ಸಾಧ್ಯವಾಗಿರಲಿಲ್ಲ.
Advertisement