
ಮುಂಬೈ: ಜಾಗತಿಕ ಕ್ರಿಕೆಟ್ ಕಂಡ ಬ್ಯಾಟಿಂಗ್ ದೈತ್ಯ ಸಚಿನ್ ತೆಂಡೂಲ್ಕರ್ ಶುಕ್ರವಾರ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಈ ಹಿನ್ನಲೆಯಲ್ಲಿ ಶನಿವಾರ ನಡೆಯಲಿರುವ ಮುಂಬೈ ಇಂಡಿಯನ್ಸ್ ಐಪಿಎಲ್ ಪಂದ್ಯದ ವೇಳೆ ಬಡ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲಿದ್ದಾರೆ. ರಿಲಯನ್ಸ್ ಸಂಸ್ಥೆ ಈ ಸಮಾರಂಭವನ್ನು ಆಯೋಜಿಸಿದೆ. 16 ತಿಂಗಳ ಹಿಂದೆ ತಮ್ಮ ವೈಭವಯುತ ಕ್ರಿಕೆಟ್ ಜೀವನಕ್ಕೆ ಗುಡ್‍ಬೈ ಹೇಳಿದ ಸಚಿನ್ ಅವರ ಹುಟ್ಟುಹಬ್ಬ ಈ ಬಾರಿ ವಿಶೇಷವಾಗಿ ಆಚರಣೆಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಈ ಬಾರಿಯ ಹುಟ್ಟುಹಬ್ಬದ ವೇಳೆ ಅವರು ಮುಂಬೈನಲ್ಲೇ ಇರಲಿದ್ದಾರೆ.
ಶುಕ್ರವಾರ ತಮ್ಮ ನಿವಾಸದಲ್ಲಿ ಕುಟುಂಬವರ್ಗ ಹಾಗೂ ಸ್ನೇಹಿತರೊಡಗೂಡಿ ಸಚಿನ್ ಹುಟ್ಟುಹಬ್ಬ ಆಚರಿಸುತ್ತಾರೆ. ಆದರೆ, ಸಚಿನ್ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಲು ಮುಂಬೈ ಇಂಡಿಯನ್ಸ್ ತಂಡದ ಮಾಲೀಕತ್ವ ಹೊಂದಿರುವ ರಿಲಯನ್ಸ್ ಕಂಪನಿ ನಿರ್ಧರಿಸಿದೆ.
ರಿಲಯನ್ಸ್ ಫೌಂಡೇಷನ್ ವತಿಯಿಂದ ಶೈಕ್ಷಣಿಕ ಸೌಲಭ್ಯ ಪಡೆಯುತ್ತಿರುವ ಸುಮಾರು 25 ಸಾವಿರ ಬಡ ಮಕ್ಕಳಿಗೆ ಶನಿವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಮುಂಬೈ ಇಂಡಿಯನ್ಸ್ ಹಾಗೂ ಸನ್‍ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ
ಪಂದ್ಯವನ್ನು ನೋಡಲು ಅವಕಾಶ ಮಾಡಿಕೊಟ್ಟಿದೆ.
ಅಂದು ಆ ಮಕ್ಕಳೊಂದಿಗೆ ಸಚಿನ್ ಕುಳಿತು ಪಂದ್ಯ ವೀಕ್ಷಿಸಲಿದ್ದಾರೆ. ಪಂದ್ಯಕ್ಕೂ ಮುನ್ನ ನಡೆಯಲಿರುವ ಸರಳ ಸಮಾರಂಭದಲ್ಲಿ ಸಚಿನ್ ಕೇಕ್ ಕತ್ತರಿಸಿ ಸಂಭ್ರಮಿಸಲಿದ್ದಾರೆ.
Advertisement