
ಮುಂಬೈ: ಅನುಮಾನಾಸ್ಪದ ಬೌಲಿಂಗ್ ಶೈಲಿಯ ಪ್ರಕರಣದಲ್ಲಿ ಮತ್ತೆ ಸಿಲುಕಿದ್ದ ಕೋಲ್ಕೊತ್ತಾ ನೈಟ್ ರೈಡರ್ಸ್ ತಂಡದ ಸ್ಪಿನ್ನರ್ ಸುನಿಲ್ ನಾರಾಯಣ್ ಅವರಿಗೆ ಐಪಿಎಲ್ ನಲ್ಲಿ ಮತ್ತೆ ದಾಳಿ ನಡೆಸದಂತೆ ನಿಷೇಧದ ಶಿಕ್ಷೆ ಜಾರಿಗೊಳಿಸಲಾಗಿದೆ. ಈ ಮೂಲಕ ಪ್ರಸಕ್ತ ಸಾಲಿನ ಟೂರ್ನಿಯ ಮುಂದಿನ ಪಂದ್ಯಗಳಿಂದ ಅವರು ಹೊರಗುಳಿಯಲಿದ್ದಾರೆ.
ಸುನೀಲ್ ನಾರಾಯಣ್ ಅವರ ಆಫ್ ಸ್ಪಿನ್ ಎಸೆತದ ಬೌಲಿಂಗ್ ಶೈಲಿ ನಿಯಮದ ಉಲ್ಲಂಘನೆಯಾಗಿದ್ದು, ಬಿಸಿಸಿಐ ಆಯೋಜಿಸುವ ಯಾವುದೇ ಟೂರ್ನಿಯಲ್ಲಿ ಭಾಗವಹಿಸುವಂತಿಲ್ಲ.
ವಿಶಾಖಪಟ್ಟಣದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ನಡೆದ ಪಂದ್ಯದಲ್ಲಿ ನಾರಾಯಣ್ ಅವರ ಬೌಲಿಂಗ್ ಶೈಲಿಯ ಮೇಲೆ ಅನುಮಾನ ವ್ಯಕ್ತವಾಗಿತ್ತು. ಈ ಕುರಿತು ಮೈದಾನದ ಅಂಪೈರ್ ಗಳು ದೂರು ನೀಡಿದ್ದರು. ಬಳಿಕ ನಾರಾಯಣ್ ಚೆನ್ನೈನಲ್ಲಿರುವ ಶ್ರೀ ರಾಮಚಂದ್ರ ಆರ್ಥೋಸ್ಕೋಪಿ ಮತ್ತು ಸ್ಪೋರ್ಟ್ ಸೈನ್ಸ್ ಸೆಂಟರ್ ನಲ್ಲಿ ಬಯೋ ಮೆಕ್ಯಾನಿಕಲ್ ಪರೀಕ್ಷೆಗೆ ಒಳಗಾಗಿದ್ದರು. ನಂತರ ಈ ಕೇಂದ್ರದ ತಜ್ಞರು ಸನ್ ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ಸುನೀಲ್ ಅವರ ಬೌಲಿಂಗ್ ಶೈಲಿಯನ್ನು ವಿಶ್ಲೆಷಿಸಿ ವರದಿ ನೀಡಿತ್ತು. ಸುನೀಲ್ ಅವರು ಆಫ್ ಸ್ಪಿನ್ ಎಸೆತ ನಿಯಮ ಉಲ್ಲಂಘನೆಯಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಒಂದು ವೇಳೆ ಸುನೀಲ್ ಈ ಐಪಿಎಲ್ ನಲ್ಲಿ ಮತ್ತೆ ಆಫ್ ಸ್ಪಿನ್ ದಾಳಿಗೆ ಇಳಿದರೆ, ಅಂಪೈರ್ ಗಳು 24.2ರ ನಿಯಮ ಅಳವಡಿಸಿ, ಅವರು ಪ್ರಯೋಗಿಸುವ ಎಸೆತಗಳನ್ನು ನೋ
ಬಾಲ್ ಎಂದು ತೀರ್ಪು ನೀಡಬಹುದಾಗಿದೆ.
Advertisement