ಕೊಹ್ಲಿ ಪಡೆಗಿಂದು ಅಭ್ಯಾಸ ಪಂದ್ಯ: ಗೆಲುವಿನ ಶುಭಾರಂಭ ಮಾಡುವ ಸನ್ನಾಹದಲ್ಲಿ ಟೀಂ ಇಂಡಿಯಾ

ಲಂಕಾ ನೆಲದಲ್ಲಿ ಕಾಲಿಟ್ಟಿರುವ ಭಾರತೀಯ ಕ್ರಿಕೆಟ್ ತಂಡ ಗುರುವಾರ ನಡೆಯಲಿರುವ ಏಕೈಕ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸಲಿದೆ.
ಭಾರತೀಯ ಕ್ರಿಕೆಟ್ ತಂಡ
ಭಾರತೀಯ ಕ್ರಿಕೆಟ್ ತಂಡ

ಕೊಲಂಬೊ: ಶ್ರೀಲಂಕಾ ನೆಲದಲ್ಲಿ ಕಾಲಿಟ್ಟಿರುವ ಭಾರತೀಯ ಕ್ರಿಕೆಟ್ ತಂಡ ಗುರುವಾರ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷರ ಇಲೆವೆನ್ ತಂಡವನ್ನು ಎದುರಿಸಲಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆಯೂ ಇದ್ದು ಕೊಂಚ ಆತಂಕ ತರಿಸಿದೆ.

ಹೊಸ ನೆಲ, ಹೊಸ ಹವಾಗುಣಕ್ಕೆ ಹೊಂದಿಕೊಳ್ಳಲು ಇಲ್ಲಿನ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಹೆಚ್ಚು ಸಹಕಾರಿಯಾಗಿರುವುದರಿಂದ ಇದನ್ನು ಟೀಂ ಇಂಡಿಯಾ ಗಂಭೀರವಾಗಿ ಪರಿಗಣಿಸಿದೆ.

ಈಗಾಗಲೇ ತಿಳಿದಿರುವಂತೆ, ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಟೆಸ್ಟ್ ಸರಣಿಯೊಂದರ ಸಂಪೂರ್ಣ ನಾಯಕತ್ವದ ಜವಾಬ್ದಾರಿ ಹೊತ್ತಿದ್ದಾರೆ. ಇದಕ್ಕೂ ಮುನ್ನ ಬಾಂಗ್ಲಾದೇಶದ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ ಅವರು ಟೀಂ ಇಂಡಿಯಾದ ಸಾರಥ್ಯ ವಹಿಸಿದ್ದರು. ಆದರೆ, ಆ ಪಂದ್ಯವೂ ಮಳೆಯ ಕಾಟಕ್ಕೆ ತುತ್ತಾಗಿದ್ದರಿಂದ ಪಂದ್ಯ ಡ್ರಾ ಆಗಿತ್ತು. ಇದೀಗ, ಮೂರು ಪಂದ್ಯಗಳ ಟೆಸ್ಟ್ ಸರಣಿಗೆ ನಾಯಕತ್ವ ವಹಿಸಿಕೊಂಡಿರುವ ಕೊಹ್ಲಿ ಇದರಲ್ಲಿ ತಮ್ಮ ತಂಡವನ್ನು ಸಮರ್ಥವಾಗಿ ಮುನ್ನಡೆಸುವ ಉತ್ಸಾಹದಲ್ಲಿದ್ದಾರೆ.

ಆದರೆ, ಇದಕ್ಕೆ ಮಳೆರಾಯನ ಕೃಪೆ ಸಿಗಲೇಬೇಕು! ಏಕೆಂದರೆ, ಅಭ್ಯಾಸ ನಡೆಸಲು ಮುಂದಾಗಿದ್ದ ಟೀಂ ಇಂಡಿಯಾಕ್ಕೆ ಮಳೆರಾಯ ತೊಂದರೆ ಕೊಟ್ಟಿದ್ದ. ಆದ್ದರಿಂದ ಕೊಹ್ಲಿ ಪಡೆ, ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಬೇಕಾಯಿತು.

ಗುರುವಾರವೂ ಇಲ್ಲಿ ಮಳೆ ಬೀಳುವ ಸಾಧ್ಯತೆಗಳಿರುವುದರಿಂದ ಅಭ್ಯಾಸ ಪಂದ್ಯ ನಡೆಯುವ ಬಗ್ಗೆ ಯಾವುದನ್ನೂ ನಿಶ್ಚಿತವಾಗಿ ಹೇಳುವ ಹಾಗಿಲ್ಲ. ಇನ್ನು ತಂಡಗಳ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಭಾರತ ತಂಡದಲ್ಲಿ ಉತ್ತಮ ಆರಂಬಿsಕರಿದ್ದಾರೆ. ಶಿಖರ್ ಧವನ್, ಮುರಳಿ ವಿಜಯ್ ಜವಾಬ್ದಾರಿಯುತವಾಗಿ ಆಡಿ ಇನಿಂಗ್ಸ್‍ಗೆ ಭದ್ರ ಬುನಾದಿ ಹಾಕುತ್ತಾರೆಂಬ ನಿರೀಕ್ಷೆಯಿದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ಖುದ್ದು ಕೊಹ್ಲಿ ವಿಜೃಂಬಿsಸಿದರೆ, ಇನಿಂಗ್ಸ್‍ಗೆ ಮತ್ತಷ್ಟು ಶಕ್ತಿ ಬರುತ್ತದೆ. ಇವರೊಂದಿಗೆ, ಇತ್ತೀಚೆಗಷ್ಟೇ ಜಿಂಬಾಬ್ವೆ ಪ್ರವಾಸದ ವೇಳೆ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ತಂಡವನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅಜಿಂಕ್ಯ ರಹಾನೆ ಇದ್ದಾರೆ. ಜೊತೆಗೆ, ವೃದ್ಧಿಮಾನ್ ಸಾಹಾ, ಚೇತೇಶ್ವರ ಪೂಜಾರಾ ಅವರಂಥ ಅನುಭವಿ ಆಟಗಾರರೂ ಇದ್ದಾರೆ. ಬೌಲಿಂಗ್ ವಿಭಾಗದಲ್ಲಿ ಹರ್ಭಜನ್ ಸಿಂಗ್, ಅಮಿತ್ ಮಿಶ್ರಾ ಅವರಂಥಾ ಸ್ಪಿನ್ ಮಂತ್ರಿಕರಿದ್ದಾರೆ. ರಾಜ್ಯದ ಕೆ.ಎಲ್. ರಾಹುಲ್ ಹಾಗೂ ವರುಣ್ ಆರೋನ್ ಅವರೂ ಈ ಪಂದ್ಯದಲ್ಲಿ ಕಣಕ್ಕಿಳಿಯುವುದರಿಂದ ಅವರಿಗೆ ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಳ್ಳಲು ಸದಾವಕಾಶ.

5 ಬೌಲರ್ ತಂತ್ರ?: ಈ ಪಂದ್ಯವೂ ಸೇರಿದಂತೆ, ಐವರು ಬೌಲರ್‍ಗಳನ್ನು ಕಣಕ್ಕಿಳಿಸುವ ಇರಾದೆಯಲ್ಲಿ ಕೊಹ್ಲಿ ಇದ್ದಾರೆಂದು ಹೇಳಲಾಗುತ್ತಿದೆ. ಆದರೆ, ಸನ್ನಿವೇಶಕ್ಕೆ ತಕ್ಕಂತೆ ಈ ನಿರ್ಧಾರ ಬದಲಾದರೂ ಅಚ್ಚರಿಯಿಲ್ಲ. ಅಂದಹಾಗೆ, ಈ ಅಭ್ಯಾಸ ಪಂದ್ಯಕ್ಕೆ ಭಾರತ ತಂಡ ಯಾವುದೇ ಕೋಚ್ ಒಬ್ಬರ ನೆರವಿಲ್ಲದೆ ಪಾಲ್ಗೊಳ್ಳುತ್ತಿರುವುದು ವಿಶೇಷ. ಇಂಗ್ಲೆಂಡ್ ನಲ್ಲಿ ನಡೆಯುತ್ತಿರುವ ಆ್ಯಶಷ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ನಿರ್ದೇಶಕ ರವಿಶಾಸ್ತ್ರಿ ಬ್ಯುಸಿಯಾಗಿರುವುದು ಇದಕ್ಕೆ ಕಾರಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com