
ನವದೆಹಲಿ: ಭಾರತ ಹಾಕಿ ತಂಡದ ಹಿರಿಯ ಆಟಗಾರರ ಪೈಕಿ ಒಬ್ಬರಾಗಿರುವ ಗುರ್ಬಾಜ್ ಸಿಂಗ್ ಮೇಲೆ ಹಾಕಿ ಇಂಡಿಯಾ ಒಂಭತ್ತು ತಿಂಗಳ ಕಾಲ ಅಮಾನತು ಶಿಕ್ಷೆ ಹೇರಿದೆ.
ಭಾರತದ ಪರ 200ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಆಡಿರುವ ಗುರ್ಬಾಜ್ ಸಿಂಗ್, ತಂಡದಲ್ಲಿನ ಸೌಹಾರ್ದತೆಯನ್ನು ಹಾಳುಗೆಡವುದರ ಜತೆಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆಂಬ ಆರೋಪದ ಹಿನ್ನೆಲೆಯಲ್ಲಿ ಹಾಕಿ ಇಂಡಿಯಾದಿಂದ ಶಿಕ್ಷೆಗೆ ಗುರಿಯಾಗಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಶಿಸ್ತುಸಮಿತಿಯ ಈ ನಿರ್ಧಾರದಿಂದ ಅನುಭವಿ ಮಿಡ್‍ಫೀಲ್ಡರ್ ಗುರ್ಬಾಜ್ ಅವರ ರಿಯೋ ಒಲಿಂಪಿಕ್ಸ್ ಕೂಟದಲ್ಲಿ ಭಾಗವಹಿಸಬೇಕೆಂಬ ಬಯಕೆಗೆ ಭಾರೀ ಪೆಟ್ಟು ಬಿದ್ದಂತಾಗಿದೆ. ಶಿಸ್ತು ವಿಷಯಕ್ಕೆ ಸಂಬಂಧಿಸಿದಂತೆ ಗುರ್ಬಾಜ್ ಸಿಂಗ್ ಸದ್ದು ಮಾಡುತ್ತಿರುವುದು ಹೊಸದೇನಲ್ಲ. 2012ರ ಲಂಡನ್ ಒಲಿಂಪಿಕ್ಸ್ ಸಂದರ್ಭದಲ್ಲಿಯೂ ಆಗಿನ ಕೋಚ್ ಮೈಕಲ್ ನಾಬ್ಸ್ ಅವರು ಸಲ್ಲಿಸಿದ್ದ ವರದಿಯಲ್ಲಿ ಒಳ್ಳೆಯ ಅಭಿಪ್ರಾಯ ಕೇಳಿಬಂದಿರಲಿಲ್ಲ.
ಕಳೆದ ತಿಂಗಳು ಬೆಲ್ಜಿಯಂನ ಆ್ಯಂಟ್ವೆರ್ಪ್‍ನಲ್ಲಿ ನಡೆದಿದ್ದ ವಿಶ್ವ ಹಾಕಿ ಲೀಗ್ ಪಂದ್ಯಾವಳಿಯ ವೇಳೆಯೂ ಗುರ್ಬಾಜ್ ಇದೇ ಅಶಿಸ್ತಿನ ಚಾಳಿ ಮುಂದುವರೆಸಿದ್ದರು. ಹಾಕಿ ಇಂಡಿಯಾದಿಂದ ವಜಾಗೊಂಡಿರುವ ಹಾಲೆಂಡ್‍ನ ಪಾಲ್ ಆ್ಯನ್ ವಾಸ್ ಹಾಗೂ ಸಹಾಯಕ ಕೋಚ್ ಜೂಡ್ ಫೆಲಿಕ್ಸ್ ನೀಡಿದ್ದ ವರದಿಯನುಸಾರ ಗುರ್ಬಾಜ್ ಸಿಂಗ್ ಅವರನ್ನು ಯೂರೋಪ್ ಪ್ರವಾಸಕ್ಕೂ ಪರಿಗಣಿಸಿರಲಿಲ್ಲ. ಗುರ್ಬಾಜ್ ಅವರ ವರ್ತನೆ ಹಾಗೂ ಗುಂಪು ಗಾರಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಹಾಕಿ ಇಂಡಿಯಾ, ಒಲಿಂಪಿಯನ್ ಹರ್ಬೀಂದರ್ ಸಿಂಗ್ ನೇತೃತ್ವದ ಶಿಸ್ತುಸಮಿತಿ ಅವರನ್ನು 9 ತಿಂಗಳವರೆಗೆ ಅಮಾನತಿನಲ್ಲಿಡುವ ತೀರ್ಮಾನ ತೆಗೆದುಕೊಂಡಿದೆಯಲ್ಲದೆ, ಮೇಲ್ಮನವಿಗೂ ಅವಕಾಶ ಮಾಡಿಕೊಟ್ಟಿದೆ.
Advertisement