ಬೆಂಗಳೂರು: ಆರಂಭದಲ್ಲೇ ಎದುರಾಳಿ ತಂಡ ಮುನ್ನಡೆ ಸಾಧಿಸಲು ಅವಕಾಶ ಬಿಟ್ಟುಕೊಟ್ಟ ಬೆಂಗಳೂರು ಬುಲ್ಸ್ ಮತ್ತೊಮ್ಮೆ ಕೈ ಸುಟ್ಟುಕೊಂಡಿದೆ.
ಮತ್ತೊಂದೆಡೆ ಆರಂಭಿಕ 10 ನಿಮಿಷದಲ್ಲಿ ಸಿಕ್ಕ ಮುನ್ನಡೆಯಿಂದ ಪಂದ್ಯದುದ್ದಕ್ಕೂ ಮಂದಗತಿಯ ಆಟದಿಂದ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಜೈಪುರ ಪಿಂಕ್ ಪ್ಯಾಂಥರ್ಸ್ ಗೆಲುವು ದಾಖಲಿಸಿತು.
ಗುರುವಾರ ಅಭಿಮಾನಿಗಳಿಂದ ಸಂಪೂರ್ಣವಾಗಿ ತುಂಬಿದ್ದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ 27-25 ಅಂಕಗಳ ಅಂತರದಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಮಣಿಸಿತು.
ಈ ಸೋಲಿನಿಂದಾಗಿ ಬೆಂಗಳೂರು ತಂಡದ ಸೆಮಿಫೈನಲ್ ಹಾದಿ ಜಟಿಲವಾಗಿದೆ. ಬುಲ್ಸ್ ತನ್ನ ಮುಂದಿನ ಪಂದ್ಯಗಳಲ್ಲಿ ಕ್ರಮವಾಗಿ ದಬಾಂಗ್ ಡೆಲ್ಲಿ, ತೆಲುಗು ಟೈಟಾನ್ಸ್ ಹಾಗೂ ಪುನೇರಿ ಪಲ್ಟಾನ್ಸ್ ವಿರುದ್ಧ ಸೆಣಸಲಿದೆ.
ರಮ್ಯಾ ರಾಷ್ಟ್ರಗೀತೆ
ಇನ್ನು ಕನ್ನಡ ಚಿತ್ರರಂಗದ ಖ್ಯಾತ ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದರು. ಪಂದ್ಯವನ್ನು ವೀಕ್ಷಿಸಲು ಖ್ಯಾತ ನಟಿ ಪಾರೂಲ್ ಯಾದವ್, ಹರ್ಷಿಕಾ ಪೂಣಚ್ಚ, ನಿರ್ದೇಶಕ ಪವನ್ ಒಡೆಯರ್ ಹಾಗೂ ಯುವ ನಟ ಧನಂಜಯ್ ಆಗಮಿಸಿದ್ದರು.