ಪಲ್ಟಾನ್ಸ್ ಮುಂದೆ ಪಲ್ಟಿ ಹೊಡೆದ ಡೆಲ್ಲಿ

ಪಂದ್ಯದ ಮೊದಲಾರ್ಧದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರೂ, ದ್ವಿತೀಯಾರ್ಧದಲ್ಲಿ ಹೋರಾಟಕಾರಿ ಪ್ರದರ್ಶನದಿಂದ ಪುನೇರಿ...
ಪ್ರೊ ಕಬಡ್ಡಿ ಲೀಗ್
ಪ್ರೊ ಕಬಡ್ಡಿ ಲೀಗ್
Updated on

ಪುಣೆ: ಪಂದ್ಯದ ಮೊದಲಾರ್ಧದಲ್ಲಿ ತೀವ್ರ ಹಿನ್ನಡೆ ಅನುಭವಿಸಿದರೂ, ದ್ವಿತೀಯಾರ್ಧದಲ್ಲಿ ಹೋರಾಟಕಾರಿ ಪ್ರದರ್ಶನದಿಂದ ಪುನೇರಿ ಪಲ್ಟಾನ್ಸ್ ತಂಡ ಪ್ರೊ ಕಬಡ್ಡಿಯಲ್ಲಿ ಮೊದಲ ಬಾರಿಗೆ ದಬಾಂಗ್ ಡೆಲ್ಲಿ ತಂಡವನ್ನು ಮಣಿಸಿತು.

ಭಾನುವಾರ ಪುಣೆಯಲ್ಲಿ ಆರಂಭವಾದ ಅಂತಿಮ ಹಂತದ ಲೀಗ್ ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಆತಿಥೇಯ ಪುನೇರಿ ಪಲ್ಟಾನ್ಸ್ 33-28 ಅಂಕಗಳ ಅಂತರದಲ್ಲಿ ಡೆಲ್ಲಿ ದಬಾಂಗ್ ತಂಡವನ್ನು ಮಣಿಸಿತು. ಪಂದ್ಯದ ಆರಂಭದಲ್ಲೇ ಎಡವಿದ ಪುನೇರಿ ಪಲ್ಟಾನ್ಸ್ ತಂಡದ ವಿರುದ್ಧ ದಬಾಂಗ್ ಡೆಲ್ಲಿ ಸುಲಭವಾಗಿ ಮುನ್ನಡೆ ಸಾಧಿಸಲು ಅವಕಾಶ ನೀಡಲಾಯಿತು.

ಪರಿಣಾಮ ತವರಿನ ಪ್ರೇಕ್ಷಕರಿಗೆ ನಿರಾಸೆ ತರಿಸಿತು. ಆದರೆ ಎರಡನೇ ಅವಧಿಯಲ್ಲಿ ಎದುರಾಳಿ ತಂಡವನ್ನು 2 ಬಾರಿ ಆಲೌಟ್ ಮಾಡಿದ ಪುಣೆ ಪಡೆ, ಅಭಿಮಾನಿಗಳು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಪುಣೆ ತಂಡದ ಪರ ಜಿತೇಶ್ ಜೋಷಿ 10 ಹಾಗೂ ಸಂಜಯ್ ಕುಮಾರ್ 7 ಅಂಕಗಳನ್ನು ಸಂಪಾದಿಸಿ ಜಯದ ರೂವಾರಿಗಳೆನಿಸಿದರು. ಡೆಲ್ಲಿ ತಂಡದ ಪರ ಕಾಶಿಲಿಂಗ ಅಡಕೆ 9 ಅಂಕ ಗಳಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಸಾಧ್ಯವಾಗಲಿಲ್ಲ.

ಪಂದ್ಯದ ಆರಂಭಿಕ ಹಂತದಲ್ಲೇ ಆತಿಥೇಯರನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾದ ದಬಾಂಗ್ ಡೆಲ್ಲಿ ಉತ್ತಮ ಮುನ್ನಡೆ ಕಾಯ್ದುಕೊಂಡಿತು. ಮೊದಲಾರ್ಧದಲ್ಲಿ ಚುರುಕಿನ ಆಟ ತೋರಿದ ಡೆಲ್ಲಿ 20ನೇ ನಿಮಿಷದ ವೇಳೆಗೆ 19-11ರ ಮುನ್ನಡೆ ಪಡೆಯಿತು. ವಿರಾಮದ ಬಳಿಕ ಆರಂಭದಲ್ಲೇ ಹೋರಾಟಕಾರಿ ಪ್ರದರ್ಶನ ನೀಡಿದ ಪುನೇರಿ ಪಲ್ಟಾನ್ಸ್, 2 ಬಾರಿ ಡೆಲ್ಲಿ ತಂಡವನ್ನು ಆಲೌಟ್ ಮಾಡುವ ಮೂಲಕ ಪುಣೆ 28-24ರ ಮುನ್ನಡೆ ಸಂಪಾದಿಸಿತು. ಪಂದ್ಯದ ಅಂತಿಮ ನಿಮಿಷಗಳಲ್ಲಿ ಜಾಣ್ಮೆಯ ಆಟ ಪ್ರದರ್ಶಿಸಿದ ಪುಣೆ 5 ಅಂಕಗಳ ಅಂತರದಲ್ಲಿ ಪಂದ್ಯವನ್ನು ತನ್ನದಾಗಿಸಿಕೊಂಡಿತು.

ಜೈಪುರಕ್ಕೆ ಆಘಾತ: ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಜೈಪುರ ಪಿಂಕ್ ಪ್ಯಾಂಥರ್ಸ್ ತಮ್ಮ ಪ್ರತಿಸ್ಪರ್ಧಿ ಬೆಂಗಾಲ್ ವಾರಿಯಸ್ಸ್ ವಿರುದ್ಧ ವಿರೋಚಿತ ಸೋಲನುಭವಿಸಿದೆ. ಸೆಮಿಫೈನಲ್‍ಗೆ ಲಗ್ಗೆ ಹಾಕುವ ಉತ್ಸಾಹದೊಂದಿಗೆ ಕಣಕ್ಕಿಳಿದ ಪಿಂಕ್ ಪ್ಯಾಥರ್ಸ್ ತಂಡ ಉತ್ತಮ ಹೋರಾಟ ನೀಡಿದರೂ 38-39 ಅಂಕಗಳ ಅಂತರದಲ್ಲಿ ಸೋಲನುಭವಿಸಿತು.

ಈ ಪಂದ್ಯದ ಸೋಲಿನಿಂದಾಗಿ ಸೆಮಿಫೈನಲ್‍ನಲ್ಲಿ ತೆರವಾಗಿರುವ ನಾಲ್ಕನೇ ಸ್ಥಾನಕ್ಕಾಗಿ ಜೈಪುರ ಹಾಗೂ ಪಾಟ್ನಾ ನಡುವಣ ಪೈಪೋಟಿ ತ್ರೀವಗೊಂಡಿದೆ. ಮುಂದಿನ ಪಂದ್ಯದಲ್ಲಿ ಪಾಟ್ನಾ ಹಾಗೂ ಜೈಪುರ ಪರಸ್ಪರ ಸೆಣಸಲಿದ್ದು, ಉಭಯ ತಂಡಗಳು ಮಾಡು ಇಲ್ಲವೆ ಮಡಿ ಎಂಬ ಪರಿಸ್ಥಿತಿಯಲ್ಲಿ ಸೆಣಸಲಿವೆ. ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ತಂಡದ ಪರ ಆಕರ್ಷಕ ಪ್ರದರ್ಶನ ನೀಡಿದ ನಾಯಕ ಸುನೀಲ್ ಜೈಪಾಲ್ 12, ಪ್ರಮುಖ ರೈಡರ್ ಮಹೇಂದ್ರ ರಜಪೂತ್ 11 ಅಂಕಗಳನ್ನು ಕಲೆ ಹಾಕುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com