
ಲಂಡನ್: ಆಸ್ಟ್ರೇಲಿಯಾ ವೇಗದ ದಾಳಿಗೆ ತತ್ತರಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿಯ ಐದನೇ ಹಾಗೂ ಅಂತಿಮ ಪಂದ್ಯದಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಪಂದ್ಯದ ಮೂರನೇ ದಿನವಾದ ಶನಿವಾರದ ಆಟದಲ್ಲಿ ಇಂಗ್ಲೆಂಡ್ ತಂಡ ಕೇವಲ 149 ರನ್‍ಗಳಿಗೆ ತನ್ನ ಮೊದಲ ಇನಿಂಗ್ಸ್‍ಗೆ ತೆರೆ ಎಳೆದುಕೊಂಡಿತು.
ಈ ಮೂಲಕ ಫಾಲೋ ಆನ್‍ಗೆ ಸಿಲುಕಿತು. ನಂತರ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 47 ಓವರ್‍ಗಳಲ್ಲಿ 3 ವಿಕೆಟ್ ಗೆ 128 ರನ್ ದಾಖಲಿಸಿದೆ. ಇನ್ನು 204 ರನ್‍ಗಳ ಹಿನ್ನಡೆಯಲ್ಲಿರುವ ಇಂಗ್ಲೆಂಡ್ ತಂಡ ಈ ಮೊತ್ತವನ್ನು ಗಳಿಸುವುದರ ಜತೆಗೆ ಆಸ್ಟ್ರೇಲಿಯಾ ತಂಡಕ್ಕೆ ಸವಾಲಿನ ಗುರಿ ನೀಡಬೇಕಿದೆ. ಒಂದು ವೇಳೆ ಉಳಿದಿರುವ 204 ರನ್ ಗಳಿಸದೇ ಇದ್ದಲ್ಲಿ ಇನಿಂಗ್ಸ್ ಸೋಲು ಅನುಭವಿಸಲಿದೆ.
ಸರಣಿಯನ್ನು ಈಗಾಗಲೇ ಗೆದ್ದುಕೊಂಡಿರುವ ಇಂಗ್ಲೆಂಡ್ ತಂಡ ಈ ಪಂದ್ಯದಲ್ಲಿ ಸೋತರೂ ಸರಣಿಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಇನ್ನು ಆಸ್ಟ್ರೇಲಿಯಾ ತಂಡದ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ನಾಯಕ ಮೈಕಲ್ ಕ್ಲಾರ್ಕ್‍ಗೆ ಗೆಲುವಿನ ಬೀಳ್ಕೊಡುಗೆ ನೀಡಲು ಕಾಂಗರೂ ಆಟಗಾರರು ಸಕಲ ಪ್ರಯತ್ನ ನಡೆಸುತ್ತಿದ್ದಾರೆ.
ಪಂದ್ಯದ ಎರಡನೇ ದಿನ 8 ವಿಕೆಟ್‍ಗೆ 107 ರನ್‍ಗಳಿಸಿದ್ದ ಆಂಗ್ಲರು ಮೂರನೇ ದಿನದಾಟದಲ್ಲಿ 41 ರನ್ ಕಲೆ ಹಾಕಿದರು. ನಂತರ ಎರಡನೇ ಇನಿಂಗ್ಸ್ ನಲ್ಲಿ ಇಂಗ್ಲೆಂಡ್ ಪರ ನಾಯಕ ಅಲಸ್ಟೇರ್ ಕುಕ್ (ಅಜೇಯ 52) ಅರ್ಧಶತಕ ದಾಖಲಿಸಿ ತಂಡದ ಹೋರಾಟಕ್ಕೆ ಪುಷ್ಠಿ ನೀಡುವ ಪ್ರಯತ್ನ ನಡೆಸಿದ್ದಾರೆ. ಇವರಿಗೆ ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೇರ್‍ಸ್ಟೋ ಅಜೇಯ 22 ಉತ್ತಮ ಸಾಥ್ ನೀಡುವ ಪ್ರಯತ್ನದಲ್ಲಿದ್ದಾರೆ.
ಆಸ್ಟ್ರೇಲಿಯಾ ಪರ ಮೊದಲ ಇನ್ನಿಂಗ್ಸ್ ನಲ್ಲಿ ಜಾನ್ಸನ್ ಹಾಗೂ ಮಾರ್ಷ್ ತಲಾ 3, ಲಿಯಾನ್ ಸಿಡ್ಲ್ ತಲಾ 2 ವಿಕೆಟ್ ಪಡೆದರು. ಎರಡನೇ ಇನಿಂಗ್ಸ್‍ನಲ್ಲಿ ಜಾನ್ಸನ್, ಸಿಡ್ಲ್ ಹಾಗೂ ಮಾರ್ಷ್ ತಲಾ 1 ವಿಕೆಟ್ ಪಡೆದಿದ್ದಾರೆ.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್ 481
ಇಂಗ್ಲೆಂಡ್ ಮೊದಲ ಇನಿಂಗ್ಸ್ 149
(ಅಲಿ 30, ವುಡ್ 24, ಜಾನ್ಸನ್ 21ಕ್ಕೆ3)
ಇಂಗ್ಲೆಂಡ್ ಎರಡನೇ ಇನಿಂಗ್ಸ್ 48.2
ಓವರ್‍ಗಳಲ್ಲಿ 3 ವಿಕೆಟ್‍ಗೆ 128 (ಕುಕ್
ಅಜೇಯ 52, ಬೇರ್‍ಸ್ಟೋ ಅಜೇಯ
22, ಸಿಡ್ಲ್ 8ಕ್ಕೆ1)
Advertisement