ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್: ರಾಷ್ಟ್ರೀಯ ದಾಖಲೆ ಮುರಿದ ಲಲಿತಾ ಬಬರ್

ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿರುವ ಭಾರತದ ಮಧ್ಯಮ ಹಾಗೂ ದೂರ ಅಂತರದ ಓಟಗಾರ್ತಿ ಲಲಿತಾ ಬಬರ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ 3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ...
ಲಲಿತಾ ಬಬರ್ (ಸಂಗ್ರಹ ಚಿತ್ರ)
ಲಲಿತಾ ಬಬರ್ (ಸಂಗ್ರಹ ಚಿತ್ರ)

ಬೀಜಿಂಗ್: ಪ್ರಸಕ್ತ ಸಾಲಿನಲ್ಲಿ ಉತ್ತಮ ಪ್ರದರ್ಶನ ಮುಂದುವರೆಸಿರುವ ಭಾರತದ ಮಧ್ಯಮ ಹಾಗೂ ದೂರ ಅಂತರದ ಓಟಗಾರ್ತಿ ಲಲಿತಾ ಬಬರ್, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ  3,000 ಮೀ. ಸ್ಟೀಪಲ್ ಚೇಸ್ ಸ್ಪರ್ಧೆಯ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ.

ಸೋಮವಾರ ಇಲ್ಲಿನ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ನಡೆದ ಹೀಟ್ಸ್ ಸ್ಪರ್ಧೆಯಲ್ಲಿ ಭಾರತದ ಓಟಗಾರ್ತಿ ಲಲಿತಾ ಬಬರ್ 9:27.86 ನಿಮಿಷದಲ್ಲಿ ರೇಸ್ ಅನ್ನು ಮುಕ್ತಾಯಗೊಳಿಸುವ ಮೂಲಕ  ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದ್ದಾರೆ. ಅಲ್ಲದೆ ತಮ್ಮ ಈ ಹಿಂದಿನ ರಾಷ್ಟ್ರೀಯ ದಾಖಲೆ (9:34.13)ಯನ್ನೂ ಅವರು ಉತ್ತಮಗೊಳಿಸಿದರು. ಜೂನ್‍ನಲ್ಲಿ ಚೀನಾದ ವುಹಾನ್‍ನಲ್ಲಿ ನಡೆದಿದ್ದ ಏಷ್ಯನ್ ಚಾಂಪಿಯನ್‍ಶಿಪ್ ವೇಳೆ ಲಲಿತಾ ಈ ಸಾಧನೆ ಮಾಡಿದ್ದರು.

2014ರ ಇಂಚಾನ್ ಏಷ್ಯನ್ ಗೇಮ್ಸ್ನಲ್ಲಿ ಕಂಚಿನ ಪದಕ ಪಡೆದಿದ್ದ ಮಹಾರಾಷ್ಟ್ರದ ಲಲಿತಾ, ಬುಧವಾರ ನಡೆಯಲಿರುವ ಪ್ರಶಸ್ತಿ ಸುತ್ತಿನಲ್ಲಿ ಇತರೆ 14 ಮಹಿಳಾ ಸ್ಪರ್ಧಿಗಳೊಂದಿಗೆ ಸೆಣಸಲಿದ್ದಾರೆ. ಇನ್ನು ಟುನೀಶಿಯಾದ ವಿಶ್ವದ ಮೇರು ಓಟಗಾರ್ತಿ ಹಾಗೂ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಹಬೀಬಾ ಫಿರಿಬಿ, 9 ನಿಮಿಷ 24.38 ಸೆಕೆಂಡುಗಳಲ್ಲಿ ಕ್ರಮಿಸಿ ಅತ್ಯುತ್ತಮ ಕಾಲಾವಕಾಶದೊಂದಿಗೆ  ಫೈನಲ್‍ಗೆ ದಾಂಗುಡಿಯಿಟ್ಟರು. ಅಂತೆಯೇ ಕಳೆದೆರಡು ವಿಶ್ವ ಅಥ್ಲೆಟಿಕ್ ಆವೃತ್ತಿಗಳಲ್ಲಿ ಫೈನಲ್ ತಲುಪಿದ್ದ ಜರ್ಮನಿಯ ಗೆಸಾ ಫೆಲಿಸಿಟಾಸ್ ಕ್ರೌಸೆ 9 ನಿಮಿಷ 24.92 ಸೆಕೆಂಡುಗಳಲ್ಲಿ ಗುರಿ  ತಲುಪಿದ್ದು ಎರಡನೇ ಅತ್ಯುತ್ತಮ ಸಾಧನೆ ಎನಿಸಿತು. ಎಥಿಯೋಪಿಯಾದ ಹಿವೊಟ್ ಅಯಲೆವ್ 9 ನಿಮಿಷ 25.55 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಮೂರನೇ ಅತಿವೇಗದ ಸಾಧನೆ ಎನಿಸಿಕೊಂಡಿತು.

ಗಾಯಗೊಂಡ ಸ್ಪರ್ಧಿ

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ 3000 ಮೀ. ಸ್ಟೀಪಲ್ ಚೇಸ್‍ನ ಸ್ಪರ್ಧೆಯಲ್ಲಿ ಪನಾಮದ ಸ್ಪರ್ಧಿ ರೊಲಾಂಡಾ ಬೆಲ್ ಅವರು ತಲೆಗೆ ಪೆಟ್ಟು ತಿಂದು ಸ್ಪರ್ಧೆಯಿಂದ ಹೊರಗುಳಿದರು.  ಸೋಮವಾರದ ಸ್ಪರ್ಧೆಯ ವೇಳೆ ರೊಲಾಂಡ ತಮ್ಮ ಜಿಗಿತದ ಲೆಕ್ಕಾಚಾರದಲ್ಲಿ ತಪ್ಪಾಗಿದ್ದರಿಂದ ತಲೆ ಕೆಳಗಾಗಿ ನೀರಿನೊಳಗೆ ಬಿದ್ದರು. 3000 ಮೀ. ಸ್ಟೀಪಲ್ ಚೇಸ್‍ನಲ್ಲಿ ಸ್ಪರ್ಧಿ 28 ತಡೆ  ಗೋಡೆಯನ್ನು ಹಾರಬೇಕು ಈ ಮಧ್ಯೆ 7 ಬಾರಿ ನೀರಿನೊಳಗೆ ಜಿಗಿದು ಓಡಬೇಕು. ರೊಲಾಂಡ ಈ ಸ್ಪರ್ಧೆಯ ಹೀಟ್ಸ್ ವೇಳೆ ತಪ್ಪಾದ ಲೆಕ್ಕಾಚಾರದಿಂದ ಗಾಯಗೊಂಡರು. ಆ ಮೂಲಕ ಕಡೇಯ ಸ್ಥಾನ ಪಡೆದು ಹೊರ ಬಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com