ಭಾರತ ಹಾಕಿ ತಂಡ
ಕ್ರೀಡೆ
ಜಯದ ಒತ್ತಡದಲ್ಲಿ ಸರ್ದಾರ್ ಪಡೆ
ವಿಶ್ವ ಹಾಕಿ ಲೀಗ್ ಟೂರ್ನಿಯಲ್ಲಿ ಗೆಲುವಿನ ಮರೀಚಿಕೆಯ ಬೆನ್ನು ಹತ್ತಿರುವ ಸರ್ದಾರ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ಪಡೆಗೆ, ಗುರುವಾರ ನಡೆಯಲಿರುವ...
ರಾಯ್ಪುರ: ವಿಶ್ವ ಹಾಕಿ ಲೀಗ್ ಟೂರ್ನಿಯಲ್ಲಿ ಗೆಲುವಿನ ಮರೀಚಿಕೆಯ ಬೆನ್ನು ಹತ್ತಿರುವ ಸರ್ದಾರ್ ಸಿಂಗ್ ನೇತೃತ್ವದ ಭಾರತೀಯ ಹಾಕಿ ಪಡೆಗೆ, ಗುರುವಾರ ನಡೆಯಲಿರುವ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅಪಾಯಕಾರಿ ಬ್ರಿಟನ್ ಎದುರಾಗುತ್ತಿದೆ.
ಲೀಗ್ ಹಂತದಲ್ಲಿ ಭಾರತ ಆಡಿದ ಮೂರು ಪಂದ್ಯಗಳಲ್ಲಿ ಒಂದರಲ್ಲೂ ಗೆಲುವು ಕಂಡಿಲ್ಲ. ಎರಡು ಸೋಲು ಹಾಗೂ ಒಂದು ಡ್ರಾ ಸಾಧಿಸಿದ ಪರಿಣಾಮ ತಾನಿರುವ 'ಬಿ' ಗುಂಪಿನಲ್ಲಿ ಅಂತಿಮ ಸ್ಥಾನ ಪಡೆಯಿತು. ಹಾಗಿದ್ದರೂ, ಅದು ಕ್ವಾರ್ಟರ್ ಫೈನಲ್ ತಲುಪಿದೆ. ಇದಕ್ಕೆ, ಪಂದ್ಯಾವಳಿಯ ಮಾದರಿಯೇ ಕಾರಣ. ಈ ಮಾದರಿಯು, ಟೂರ್ನಿಯಲ್ಲಿ ಭಾಗವಹಿಸಿರುವ ಎಲ್ಲಾ ಎಂಟು ತಂಡಗಳಿಗೂ ಕ್ವಾರ್ಟರ್ ಫೈನಲ್ ಹಂತಕ್ಕೆ ತಲುಪುವ ಅವಕಾಶ ನೀಡಿದೆ. ಇದೀಗ ಈ ಅವಕಾಶವನ್ನು ಉಪಯೋಗಿಸಿಕೊಳ್ಳದೆ ಹೋದರೆ, ಸರ್ದಾರ್ ಪಡೆಯ ಪದಕದ ಕನಸು ನುಚ್ಚುನೂರಾಗಲಿದೆ.
ಮೇಳೈಸಿದ ಲೋಪ ದೋಷಗಳು: ಈವರೆಗೆ ಆಡಿರುವ ಮೂರೂ ಪಂದ್ಯಗಳಲ್ಲಿ ಲೋಪ ದೋಷಗಳಿಂದಲೇ ಭಾರತ ಮುಗ್ಗರಿಸಿದೆ. ರಕ್ಷಣಾ ವಿಭಾಗದಲ್ಲಿನ ಕೊರತೆಗಳು ಎದ್ದು ಕಾಣುತ್ತಿವೆ. ಇದರ ಜತೆಗೇ, ಭರವಸೆಯ ಆಟಗಾರರಾದ ಆಕಾಶ್‍ದೀಪ್ ಸಿಂಗ್, ರಮಣ್-ದೀಪ್ ಸಿಂಗ್, ಎಸ್.ವಿ. ಸುನಿಲ್, ತಲ್ವಿಂದರ್ ಸಿಂಗ್, ಮೊಹಮ್ಮದ್ ಅಮೀರ್ ಅವರಿಂದ ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ಹೊರಹೊಮ್ಮಿಲ್ಲ. ತಂಡದ ವೈಫಲ್ಯಕ್ಕೆ ಇದೂ ಒಂದು ಪ್ರಮುಖ ಕಾರಣ. ಇದೇ ಲೋಪ ದೋಷಗಳು ಬ್ರಿಟನ್ ವಿರುದ್ಧದ ಪಂದ್ಯದಲ್ಲೂ ಪುನರಾವರ್ತನೆಯಾದಲ್ಲಿ ಭಾರತಕ್ಕೆ ಸೋಲು ಕಟ್ಟಿಟ್ಟ ಬುತ್ತಿ.
ಆತ್ಮವಿಶ್ವಾಸದಲ್ಲಿ ಆಂಗ್ಲರು ಅತ್ತ, 'ಎ' ಗುಂಪಿನ ಅಗ್ರಸ್ಥಾನದಲ್ಲಿರುವ ಬ್ರಿಟನ್, ಎರಡು ಭರ್ಜರಿ ಗೆಲುವುಗಳೊಂದಿಗೆ ತನ್ನ ಆತ್ಮವಿಶ್ವಾಸವನ್ನು ಮತ್ತೆ ಹೆಚ್ಚಿಸಿಕೊಂಡಿದೆ. ಅದರಲ್ಲಿ, ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾವನ್ನು ಬಗ್ಗುಬಡಿದಿದ್ದೂ ಅದರ ಆತ್ಮವಿಶ್ವಾಸ ಹೆಚ್ಚಿಸಿದೆ. ಹಾಗಾಗಿ, ಭಾರತ ವಿರುದ್ಧವೂ ಅದು ಆತ್ಮವಿಶ್ವಾಸದಲ್ಲೇ ಕಣಕ್ಕಿಳಿಯು ವುದು ಖಾತ್ರಿಯಾಗಿದೆ.
ಸೆಮಿಫೈನಲ್‍ಗೆ ಆಸೀಸ್, ಹಾಲೆಂಡ್
ಬುಧವಾರ ಆರಂಭಗೊಂಡ ವಿಶ್ವ ಹಾಕಿ ಲೀಗ್ ಕ್ವಾರ್ಟರ್ ಫೈನಲ್ ಸುತ್ತಿನ ಮೊದಲೆರಡು ಪಂದ್ಯಗಳಲ್ಲಿ ಹಾಲೆಂಡ್ ಹಾಗೂ ಆಸ್ಟ್ರೇಲಿಯಾ ಜಯ ಸಾಧಿಸಿವೆ. ಕೆನಡಾ ವಿರುದ್ದ ಹಾಲೆಂಡ್ 6-0 ಗೋಲುಗಳ ಅಂತರದಲ್ಲಿ, ಜರ್ಮನಿ ವಿರುದ್ಧ ಆಸ್ಟ್ರೇಲಿಯಾ 3-1 ಅಂತರದಲ್ಲಿ ಜಯಿಸಿ, ಉಪಾಂತ್ಯಕ್ಕೆ ಕಾಲಿಟ್ಟವು. ಡಿ. 4ರಂದು ನಡೆಯುವ ಮೊದಲ ಸೆಮೀಸ್‍ನಲ್ಲಿ ಆಸ್ಟ್ರೇಲಿಯಾ ಹಾಗೂ ಹಾಲೆಂಡ್ ಸೆಣಸಲಿವೆ.

