ಕರ್ನಾಟಕದ ಸತ್ವಪರೀಕ್ಷೆ ಶುರು

ಮೇಲಿನ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ (78) ಮತ್ತು ಕೆಳ ಕ್ರಮಾಂಕದಲ್ಲಿ ಶ್ರೀಕಾಂತ್ ಮುಂಢೆ (81) ತೋರಿದ ಮನೋಜ್ಞ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಕರ್ನಾಟಕ ವಿರುದ್ಧದ ರಣಜಿ ಪಂದ್ಯದಲ್ಲಿ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಪುಣೆ: ಮೇಲಿನ ಕ್ರಮಾಂಕದಲ್ಲಿ ರಾಹುಲ್ ತ್ರಿಪಾಠಿ (78) ಮತ್ತು ಕೆಳ ಕ್ರಮಾಂಕದಲ್ಲಿ ಶ್ರೀಕಾಂತ್ ಮುಂಢೆ (81) ತೋರಿದ ಮನೋಜ್ಞ ಬ್ಯಾಟಿಂಗ್ ನೆರವಿನಿಂದ ಪ್ರವಾಸಿ ಕರ್ನಾಟಕ ವಿರುದ್ಧದ ರಣಜಿ  ಪಂದ್ಯದಲ್ಲಿ ಸಾಕಷ್ಟು ಹಿಡಿತ ಸಾಧಿಸಿರುವ ಮಹಾರಾಷ್ಟ್ರ, ವಿನಯ್ ಕುಮಾರ್ ಪಡೆಯ ಗೆಲುವಿಗೆ 293 ರನ್ ಗುರಿ ನೀಡಿದೆ.

ಈ ಸವಾಲಿನ ಗುರಿಯನ್ನು ಬೆನ್ನಟ್ಟಿರುವ ಕರ್ನಾಟಕ, ಆರಂಭಿಕ ಆರ್. ಸಮರ್ಥ್ (7) ಅವರನ್ನು ಬಲುಬೇಗ ಕಳೆದುಕೊಂಡರೂ, ಆನಂತರ ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ಪಂದ್ಯದ ಮೂರನೇ  ದಿನದಾಟದ ಅಂತ್ಯಕ್ಕೆ 15 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್ ಗಳಿಸಿರುವ ಅದು, ಜಯದ ಗುರಿ ಮುಟ್ಟಲು ಇನ್ನೂ 232 ರನ್ ಕಲೆಹಾಕಬೇಕಿದೆ. ವೇಗಿಗಳ ಜತೆಗೆ ಸ್ಪಿನ್ನರ್‍ಗಳಿಗೂ ಒಂದಷ್ಟು  ನೆರವು ನೀಡುತ್ತಿರುವ ಇಲ್ಲಿನ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ಸದ್ಯ ವಿನಯ್ ಪಡೆಯ ಬ್ಯಾಟಿಂಗ್ ಸತ್ವಪರೀಕ್ಷೆ ಶುರುವಾದಂತಾಗಿದೆ. ಆಟ ನಿಂತಾಗ ಮಯಾಂಕ್ ಅಗರ್ವಾಲ್  ಮತ್ತು ರಾಬಿನ್ ಉತ್ತಪ್ಪ ಕ್ರಮವಾಗಿ 23 ಹಾಗೂ 25 ರನ್ ಗಳಿಸಿ ಕ್ರೀಸ್‍ನಲ್ಲಿದ್ದರು. ಶುಕ್ರವಾರ ಆಟದ ಕೊನೆಯ ದಿನವಾಗಿದ್ದು, ಕರ್ನಾಟಕ ಗೆಲುವು ಸಾಧಿಸಿ ಕ್ವಾರ್ಟರ್ ಫೈನಲ್‍ನತ್ತ ರಾಜನಡೆ  ಇಡಬೇಕಿದೆ.

ಕಾಡಿದ ತ್ರಿಪಾಠಿ, ಮುಂಢೆ: ಇನ್ನು ಪಂದ್ಯದ ಎರಡನೇ ದಿನದಂದು 70 ರನ್‍ಗೆ 4 ವಿಕೆಟ್  ಕಳೆದುಕೊಂಡದ್ದ ಮಹಾರಾಷ್ಟ್ರ ರಾಹುಲ್ ತ್ರಿಪಾಠಿ ಮತ್ತು ಶ್ರೀಕಾಂತ್ ಮುಂಢೆ ಗಳಿಸಿದ ಅರ್ಧಶತಕದ  ನೆರವಿನಿಂದ ಸ್ಪರ್ಧಾತ್ಮಕ ಮೊತ್ತಕ್ಕೆ ಆಲೌಟ್ ಆಯಿತು. ಆದಷ್ಟು ಬೇಗನೆ ಆತಿಥೇಯರ ಎರಡನೇ ಇನ್ನಿಂಗ್ಸ್‍ಗೆ ಕೊನೆ ಹಾಡಿ ಗೆಲುವಿನ ಗುರಿಯನ್ನು  ಸುಲಭವಾಗಿಸಿಕೊಳ್ಳುವ ಗುರಿ ಹೊತ್ತಿದ್ದ  ಕರ್ನಾಟಕ, ದಿನದಾಟದ ಆರಂಭದಲ್ಲೇ ಸರಿ ದಾರಿ ಇಟ್ಟಂತೆ ಭಾಸವಾಯಿತು. 10 ರನ್ ಗಳಿಸಿ ಔಟಾಗದೆ ಉಳಿದಿದ್ದ ನಾಯಕ ಕೇದಾರ್ ಜಾಧವ್ ಕೇವಲ 1 ರನ್ ಗಳಿಸಿದ್ದಾಗಅವರನ್ನು ವಿನಯ್  ಎಲ್‍ಬಿ ಬಲೆಗೆ ಕೆಡವಿ ಮೊದಲ ಯಶ ತಂದಿತ್ತರು. ಬಳಿಕ ಬಂದ ಮೋರೆ (26) ಜತೆಗೂಡಿದ ತ್ರಿಪಾಠಿ ಕರ್ನಾಟಕ ಬೌಲರ್‍ಗಳನ್ನು ಎಚ್ಚರಿಕೆಯಿಂದಲೇ ನಿಭಾಯಿಸುತ್ತಾ ನಡೆದರು.

ಈ ಜೋಡಿಯನ್ನು ಶರತ್ ಬೇರ್ಪಡಿಸಿ ಮತ್ತೆ ಮಹಾರಾಷ್ಟ್ರಕ್ಕೆ ಹೊಡೆತ ನೀಡಿದರೂ, ತದನಂತರ ಬಂದ ವೇಗಿ ಶ್ರೀಕಾಂತ್ ಮುಂಢೆ ಆಕರ್ಷಕ ಬ್ಯಾಟಿಂಗ್‍ನಿಂದ ತ್ರಿಪಾಠಿಗೆ ಭರ್ಜರಿ ಸಾಥ್  ನೀಡಿದ್ದು, ಆತಿಥೇಯರ ಮುನ್ನಡೆಗೆ ಕಾರಣವಾಯಿತು. ಮಧ್ಯಾಹ್ನದ ಭೋಜನ ವಿರಾಮಕ್ಕೆ ಈ ಜೋಡಿ ಅಭೇದ್ಯ ಕೋಟೆಯಾಗಿ ನಿಂತಿದ್ದರ ಪರಿಣಾಮ ಮಹಾರಾಷ್ಟ್ರ 60 ಓವರ್ ಗಳಲ್ಲಿ 6 ವಿಕೆಟ್  ಗೆ 167 ರನ್ ಕಲೆ ಹಾಕಿ  ಸುಸ್ಥಿತಿ ಕಾಯ್ದುಕೊಂಡಿತು. ಭೋಜನ ವಿರಾಮದ ನಂತರವೂ ಈ ಜೋಡಿ ಇನ್ನಷ್ಟು ಅಪಾಯಕಾರಿಯಾಗಿ ಬೆಳೆಯಿತು. 7ನೇ ವಿಕೆಟ್‍ಗೆ ಅಮೋಘ 96 ರನ್ ಕಲೆಹಾಕಿದ  ತ್ರಿಪಾಠಿ ಮತ್ತು ಮುಂಢೆ ಗೆಲುವಿನ ಗುರಿಯನ್ನು ಸಾಧ್ಯವಾದಷ್ಟೂ ಕ್ಲಿಷ್ಟವಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಂತಿಮವಾಗಿ ಈ ಜೋಡಿಯನ್ನು ವೇಗಿ ಅರವಿಂದ್ ಬೇರ್ಪಡಿಸಿದರು.  ಶತಕದತ್ತ ಚಿತ್ತ ಹರಿಸಿದ್ದ ತ್ರಿಪಾಠಿ ಅರವಿಂದ್ ಬೌಲಿಂಗ್ ನಲ್ಲಿ ಮನೀಶ್ ಪಾಂಡೆಗೆ ಕ್ಯಾಚಿತ್ತು ಕ್ರೀಸ್ ತೊರೆದರೆ, ಮುಂಢೆಯನ್ನು ಶ್ರೇಯಸ್ ಗೋಪಾಲ್ ಬೌಲ್ಡ್ ಮಾಡಿದರು.

ಈ ಇಬ್ಬರ ನಿರ್ಗಮನದೊಂದಿಗೆ ಮಹಾರಾಷ್ಟ್ರದ ಇನ್ನಿಂಗ್ಸ್‍ಗೂ ತೆರೆಬಿದ್ದಂತಾಯಿತು. ಕರ್ನಾಟಕ ಪರ ವಿನಯ್ ಕುಮಾರ್ 71ಕ್ಕೆ 4 ವಿಕೆಟ್ ಪಡೆದರೆ, ಎಸ್. ಅರವಿಂದ್ 59ಕ್ಕೆ 3, ಶ್ರೇಯಸ್  ಗೋಪಾಲ್ 26ಕ್ಕೆ 2 ಹಾಗೂ ಎಚ್. ಎಸ್. ಶರತ್ 36ಕ್ಕೆ 1 ವಿಕೆಟ್ ಗಳಿಸಿದರು.

ಸ್ಕೋರ್ ವಿವರ
ಮಹಾರಾಷ್ಟ್ರ ಮೊದಲ ಇನ್ನಿಂಗ್ಸ್: 212
ಕರ್ನಾಟಕ ಮೊದಲ ಇನ್ನಿಂಗ್ಸ್: 180
ಮಹಾರಾಷ್ಟ್ರ ಎರಡನೇ ಇನ್ನಿಂಗ್ಸ್

93 ಓವರ್‍ಗಳಲ್ಲಿ 260ಕ್ಕೆ ಆಲೌಟ್
(ಬುಧವಾರ 4 ವಿಕೆಟ್‍ಗೆ 70)

ರಾಹುಲ್ ಸಿ ಮನೀಶ್ ಬಿ ಅರವಿಂದ್ 78
ಕೇದಾರ್ ಜಾಧವ್ ಎಲ್‍ಬಿ ಬಿ ವಿನಯ್ 11
ವಿಶಾಂತ್ ಮೋರೆ ಸಿ ಗೌತಮ್ ಬಿ ಶರತ್ 26
ಶ್ರೀಕಾಂತ್ ಮುಂಡೆ ಬಿ ಶ್ರೇಯಸ್ 81
ಭರತ್‍ಕುಮಾರ್ ಸೋಲಂಕಿ ಬಿ ಶ್ರೇಯಸ್ 01
ಧುಮಲ್ ಸಿ ಮಯಾಂಕ್ ಬಿ ವಿನಯ್ 05
ಅನುಪಮ್ ಸಂಕ್ಲೇಚಾ ಅಜೇಯ 03
ಇತರೆ: (ಬೈ-16, ಲೆಬೈ-4, ನೋಬಾಲ್-12,
ವೈಡ್-2) 34
ವಿಕೆಟ್‍ಪತನ: 5-73 (ಜಾಧವ್), 6-113 (ಮೋರೆ),
7-209 (ತ್ರಿಪಾಠಿ), 8-237 (ಸೋಲಂಕಿ), 9-252
(ಮುಂಡೆ), 10-260 (ಧುಮಲ್)
ಬೌಲಿಂಗ್ ವಿವರ: ವಿನಯ್ ಕುಮಾರ್ 27-5-71-4,
ಅಭಿಮನ್ಯು ಮಿಥುನ್ 18-4-48-0, ಎಸ್. ಅರವಿಂದ್
24-4-59-3, ಎಚ್.ಎಸ್. ಶರತ್ 13-3-36-1,
ಶ್ರೇಯಸ್ ಗೋಪಾಲ್ 10-3-26-2, ಕರುಣ್
ನಾಯರ್ 1-1-0-0
ಕರ್ನಾಟಕ ಎರಡನೇ ಇನ್ನಿಂಗ್ಸ್
15 ಓವರ್‍ಗಳಲ್ಲಿ 1 ವಿಕೆಟ್‍ಗೆ 61
ಸಮರ್ಥ್ ಬಿ ಎನ್.ಆರ್. ಧುಮಲ್ 07
ಮಯಾಂಕ್ ಅಗರ್ವಾಲ್ ಬ್ಯಾಟಿಂಗ್ 23
ರಾಬಿನ್ ಉತ್ತಪ್ಪ ಬ್ಯಾಟಿಂಗ್ 25
ಇತರೆ: (ಲೆಬೈ-1, ವೈಡ್-5) 06
ವಿಕೆಟ್‍ಪತನ: 1-22 (ಸಮರ್ಥ್)
ಬೌಲಿಂಗ್ ವಿವರ: ಅನುಪಮ್ ಸಂಕ್ಲೇಚಾ 3-0-13-0,
ಎನ್.ಆರ್. ಧುಮಲ್ 6-1-34-1, ರಾಹುಲ್ ತ್ರಿಪಾಠಿ
2-1-5-0, ಸ್ವಪ್ನಿಲ್ ಗುಗಾಲೆ 4-2-8-0

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com