ಪುಷ್ಪ ಗುಪ್ತಾ
ಪುಷ್ಪ ಗುಪ್ತಾ

ಶೂಟರ್ ಪುಷ್ಪಾ ಬಾಳಲ್ಲಿ ಮತ್ತೆ ಚಿಗುರಿದ ಕನಸು

ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 8 ಪದಕಗಳನ್ನು ಜಯಿಸಿದ್ದ ಪುಷ್ಪ ಗುಪ್ತಾಗೆ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ನ್ಯೂಡಲ್ಸ್ ಮಾರಾಟ ಮಾಡಬೇಕಾದ ಪರಿಸ್ಥಿತಿ...
Published on
ಭಾರತದಲ್ಲಿ ಕ್ರಿಕೆಟ್ ಆಟವನ್ನು ಬಿಟ್ಟರೆ ಮತ್ಯಾವ ಕ್ರೀಡೆಗೂ ಹೆಚ್ಚಿನ ಪ್ರೋತ್ಸಾಹ ಸಿಗುವುದಿಲ್ಲ ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದಾರೆ ನ್ಯಾಷನಲ್ ಲೆವೆಲ್ ಶೂಟರ್ ಗುಜರಾತ್ ನ ಪುಷ್ಪಾ ಗುಪ್ತಾ.
21 ವರ್ಷದ ಪುಪ್ಪಾ 2013ರಲ್ಲಿ ಕಾಲೇಜು ಸೇರಿದ್ದು  ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದಾರೆ. ಆರ್ಥಿಕ ಸಂಕಷ್ಟ ಶೂಟರ್ ಆಗುವ ಪುಷ್ಪಾರ ಕನಸನ್ನು ನುಚ್ಚುನೂರು ಮಾಡಿದೆ.
ಮಹಿಳಾ ಸಬಲೀಕರಣ, ಉದ್ಯೋಗದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡುತ್ತಾರೆ ಅಂತಹ ಮೋದಿ ಅವರ ರಾಜ್ಯದಲ್ಲೇ ಪುಷ್ಪಾ ಗುಪ್ತಾ ಅವರು ತಮ್ಮ ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ನ್ಯೂಡಲ್ಸ್ ಮಾರಾಟ ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ. ರಾಜ್ಯಮಟ್ಟದ ಸ್ಪರ್ಧೆಗಳಲ್ಲಿ 8 ಪದಕಗಳನ್ನು ಜಯಿಸಿದ್ದ ಪುಷ್ಪ ಗುಪ್ತಾ, ರಾಷ್ಟ್ರೀಯ ಚಾಂಪಿಯನ್ ಆಗಬೇಕೆಂಬ ಕನಸನ್ನು ಬೆನ್ನಟ್ಟಿದ್ದು, ಆದರೆ ಆರ್ಥಿಕ ಮುಗ್ಗಟ್ಟಿನಿಂದ ದುಬಾರಿ ಕ್ರೀಡೆಯಾದ ಶೂಟಿಂಗ್ ನಿಂದ ಹಿಂದೆ ಸರಿದಿದ್ದಾರೆ. 
ಬಿ.ಕಾಂನಲ್ಲಿ ವ್ಯಾಸಾಂಗ ಮಾಡುತ್ತಿರುವ ನಾನು ಶೂಟಿಂಗ್ ನಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಹೀಗಾಗಿ ಶೂಟಿಂಗ್ ನಲ್ಲಿ ಗುಜರಾತ್ ನ್ನು ಪ್ರತಿನಿಧಿಸಿದ್ದೇ. ಈ ಮಧ್ಯೆ ನಾನು ಎನ್ ಸಿಸಿಗೆ ಸೇರಿಕೊಂಡೇ ಇದರಿಂದ ಆರ್ಥಿಕವಾಗಿ ಹೆಚ್ಚು ಸಹಾಯವಾಗಿತ್ತು. ಎನ್​ಸಿಸಿ ಕೋರ್ಸ್ ಮುಗಿದು ಮಿಲಿಟರಿ ಆರ್ಗನೈಸೇಶನ್  ನಿಂದ ದೊರಕುತ್ತಿದ್ದ ಆರ್ಥಿಕ ನೆರವು ನಿಂತು ಹೋಗಿಯಿತು. ಎನ್ ಸಿಸಿಯಿಂದ ನೆರವು ನಿಂತು ಹೋದ ಮೇಲೆ ಕ್ರೀಡೆಯನ್ನು ಮುಂದುವರಿಸುವುದು ಬೇಡ ಎಂದು ತಂದೆ ನನಗೆ ಹೇಳಿದರು. ಬಳಿಕ ಹೊಟ್ಟೆಪಾಡಿಗಾಗಿ ನ್ಯೂಡಲ್ಸ್ ಆರ್ಡರ್ ತಗೊಳ್ಳುವ ಉದ್ಯೋಗ ಆರಂಭಿಸಿದೆ ಎಂದು ಪುಷ್ಪಾ ವಿವರಿಸಿದ್ದಾಳೆ.
ಕುಟುಂಬವನ್ನು ಸಾಕಿ, ಸಲಹುವ ಜವಾಬ್ದಾರಿ ನನ್ನ ಮೇಲಿತ್ತು. ಹೀಗಾಗಿ ವಡೋದರದಲ್ಲಿ ರಸ್ತೆ ಬದಿಯಲ್ಲಿ ನೂಡಲ್ಸ್ ಮಾರಾಟ ಮಾಡಲು ಮುಂದಾದೆ. ಗಾಡಿಗೆ ಹೊಳೆಯುವ ಪದಕ ಹಾಕಿಕೊಂಡು ಮಾರಾಟಕ್ಕೆ ನಿಲ್ಲುವುದರಿಂದ ಗ್ರಾಹಕರ ದೃಷ್ಟಿ ಇದರ ಮೇಲೆ ಬೀಳುತ್ತಿದ್ದು, ಗ್ರಾಹಕರು ಕುತೂಹಲದಿಂದ ಧಾವಿಸುತ್ತಾರೆ ಇದರಿಂದ ವ್ಯಾಪಾರ ನಡೆಯುತ್ತಿತ್ತು ಎಂದು ಪುಷ್ಪಾ ಹೇಳಿಕೊಂಡಿದ್ದಾರೆ.
ಪುಷ್ಪಾ ಶ್ರಮಕ್ಕೆ ಸಿಕ್ತು ಪ್ರತಿಫಲ
ಜೀವನ ನಿರ್ವಹಣೆಗಾಗಿ ರಸ್ತೆ ಬದಿಯಲ್ಲಿ ನ್ಯೂಡಲ್ಸ್ ವ್ಯಾಪಾರ ಮಾಡುವ ವಿಚಾರ ಕೆಲ ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಪುಷ್ಪಾರ ಸ್ಥಿತಿಯನ್ನು ಕಂಡ ಗುಜರಾತ್ ರಾಜ್ಯ ರಸಗೊಬ್ಬರ ನಿಗಮ(ಜಿಎಸ್ ಎಫ್ ಸಿ) ಆಕೆಗೆ ನಿಗಮದಲ್ಲಿ ಉದ್ಯೋಗ ನೀಡಲು ಮುಂದಾಗಿದೆ. ಜತೆಗೆ ಶೂಟಿಂಗ್​ನಲ್ಲಿ ಮುಂದುವರಿಯಲು ಅಗತ್ಯ ಆರ್ಥಿಕ ನೆರವು ನೀಡುವುದಾಗಿ ಜಿಎಸ್ಎಫ್ ಸಿ ಅಧ್ಯಕ್ಷರು ಹೇಳಿರುವುದು ಪುಷ್ಪಾ ಅವರ ಜೀವನದಲ್ಲಿ ಹೊಸ ಆಶಾಕಿರಣವನ್ನು ಮೂಡಿಸಿದೆ. ಇದೇ ರೀತಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ತಮ್ಮ ಜೀವನವನ್ನು ಸಣ್ಣಪುಟ್ಟ ಕೆಲಸಗಳಿಗೆ ಸೀಮಿತಗೊಳಿಸಿಕೊಳ್ಳುವ ಕ್ರೀಡಾಳುಗಳಿಗೆ ಆರ್ಥಿಕ ನೆರವು ಸಿಕ್ಕರೆ ದೇಶಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪದಕಗಳು ಸಿಗುವುದು ದೂರವೇನಿಲ್ಲ.
- ವಿಶ್ವನಾಥ್. ಎಸ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com