ವಿಜಯ್ ಹಜಾರೆ ಟೋಫಿ: 2ನೇ ಗೆಲುವಿನ ನಿರೀಕ್ಷೆಯಲ್ಲಿ ಹಾಲಿ ಚಾಂಪಿಯನ್ಸ್

ಹರಿಯಾಣ ವಿರುದ್ಧದ ಗೆಲುವಿನ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆದಿರುವ ಹಾಲಿ ಚಾಂಪಿಯನ್ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿಯ ಬಿ ಗುಂಪಿನ...
ಕೆ.ಎಲ್ ರಾಹುಲ್
ಕೆ.ಎಲ್ ರಾಹುಲ್

ಬೆಂಗಳೂರು: ಹರಿಯಾಣ ವಿರುದ್ಧದ ಗೆಲುವಿನ ಮೂಲಕ ಆತ್ಮವಿಶ್ವಾಸವನ್ನು ಮರಳಿ ಪಡೆದಿರುವ ಹಾಲಿ ಚಾಂಪಿಯನ್ ಕರ್ನಾಟಕ, ವಿಜಯ್ ಹಜಾರೆ ಟ್ರೋಫಿಯ ಬಿ ಗುಂಪಿನ ತನ್ನ ಮೂರನೇ ಪಂದ್ಯದಲ್ಲಿ ಗುಜರಾತ್ ತಂಡವನ್ನು ಎದುರಿಸಲಿದೆ.

ಇಲ್ಲಿನ ಆಲೂರು-1 ಕ್ರೀಡಾಂಗಣದಲ್ಲಿ ಸೋಮವಾರ ನಡೆಯುವ ಪಂದ್ಯವನ್ನು ಗೆಲ್ಲುವ ಮೂಲಕ ಕರ್ನಾಟಕ ತಂಡ, ಕ್ವಾರ್ಟರ್ ಫೈನಲ್ ಹಾದಿಯನ್ನು ಸುಗಮಗೊಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

ಮೊದಲ ಪಂದ್ಯದಲ್ಲಿ ರೈಲ್ವೇಸ್ ವಿರುದ್ಧ ಕೂದಲೆಳೆಯ ಅಂತರದಲ್ಲಿ ಸೋತಿದ್ದ ಕರ್ನಾಟಕ, ಹರಿಯಾಣ ವಿರುದ್ಧದ ಭರ್ಜರಿ ಜಯದೊಂದಿಗೆ ಗೆಲುವಿನ ಲಯಕ್ಕೆ ಮರಳಿದೆ. ಅದೇ ಉತ್ಸಾಹದಲ್ಲಿ ವಿನಯ್ ಪಡೆ ಪಾರ್ಥೀವ್ ಪಟೇಲ್ ಸಾರಥ್ಯದ ಗುಜರಾತ್ ತಂಡವನ್ನು ಎದುರಿಸಿ ನಿಂತಿದೆ.

ಬ್ಯಾಟಿಂಗ್ ಸುಧಾರಣೆ ಅಗತ್ಯ

ಸತತ ಎರಡನೇ ಗೆಲುವಿನ ನಿರೀಕ್ಷೆಯಲ್ಲಿರುವ ರಾಜ್ಯ ತಂಡಕ್ಕೆ ತಲೆ ನೋವಾಗಿರುವುದು ಅಗ್ರ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ. ಆರಂಭಿಕರಾದ ಕೆ.ಎಲ್.ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಮೊದಲೆರೆಡು ಪಂದ್ಯಗಳಲ್ಲಿ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲರಾಗಿದ್ದಾರೆ. ಮಧ್ಯಮ ಕ್ರಮಾಂಕದಲ್ಲಿ ಮನೀಶ್ ಪಾಂಡೆ, ಕರುಣ್ ನಾಯರ್ ಮತ್ತು ಅನುಭವಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ ದೊಡ್ಡ ಮೊತ್ತ ಗಳಿಸುವಲ್ಲಿ ಎಡವುತ್ತಿದ್ದಾರೆ. ಈ ಮೂವರು ಪ್ರಮುಖ ಬ್ಯಾಟ್ಸ್‌ಮನ್‌ಗಳು ಆರಂಭಿಕ ಎರಡು ಪಂದ್ಯಗಳಲ್ಲಿ ಗಳಿಸಿರುವ ಒಟ್ಟು ರನ್ ಕೇವಲ 106. ಕರ್ನಾಟಕದ ಕ್ವಾರ್ಟರ್ ಫೈನಲ್ ಕನಸು ನನಸಾಗಬೇಕಾದರೆ ಮಧ್ಯಮ ಕ್ರಮಾಂಕದ ಆಟಗಾರರು ಜವಾಬ್ದಾರಿ ಪ್ರದರ್ಶಿಸಲೇಬೇಕಿದೆ.

ಕೆಳ ಕ್ರಮಾಂಕದ ಮೇಲೆ ನಿರೀಕ್ಷೆ

ರೈಲ್ವೇಸ್ ಹಾಗೂ ಹರಿಯಾಣ ವಿರುದ್ಧದ ಪಂದ್ಯಗಳಲ್ಲಿ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಮಧ್ಯೆ ಮಿಂಚಿರುವ ಕೆಳ ಕ್ರಮಾಂಕದ ಆಟಗಾರರ ಮೇಲೆ ಹೆಚ್ಚಿನ ನಿರೀಕ್ಷೆಯಿಡಲಾಗಿದೆ. ನಾಯಕ ವಿನಯ್ ಕುಮಾರ್, ಆಲ್‌ರೌಂಡರ್ ಜೆ.ಸುಚಿತ್ ಹಾಗೂ ವೇಗಿ ಅಭಿಮನ್ಯು ಮಿಥುನ್ ಬೌಲಿಂಗ್ ಜತೆ ಬ್ಯಾಟಿಂಗ್‌ನಲ್ಲೂ ಮಿಂಚುತ್ತಿದ್ದಾರೆ. ಹರಿಯಾಣ ವಿರುದ್ಧದ ಪಂದ್ಯದ ಮೂಲಕ ಲಿಸ್ಟ್ ಎ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಾದಿಕ್ ಕಿರ್ಮಾನಿ, ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ. ರಾಜ್ಯ ತಂಡದ ಬೌಲಿಂಗ್ ವಿಭಾಗ ಬಲಿಷ್ಠವಾಗಿದ್ದು ನಾಯಕ ವಿನಯ್, ಮಿಥುನ್, ಎಸ್.ಅರವಿಂದ್, ಸ್ಟುವರ್ಟ್ ಬಿನ್ನಿ ಹಾಗೂ ಎಡಗೈ ಸ್ಪಿನ್ನರ್ ಜೆ.ಸುಚಿತ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.

ಇನ್ನು ಪ್ರವಾಸಿ ಗುಜರಾತ್ ತಂಡಕ್ಕೆ ನಾಯಕ ಪಾರ್ಥೀವ್ ಪಟೇಲ್, ಆಲ್‌ರೌಂಡರ್ ಅಕ್ಷರ್ ಪಟೇಲ್, ಯುವ ಮಧ್ಯಮ ವೇಗಿಗಳಾದ ರಶ್ ಕಲಾರಿಯಾ, ಜಸ್‌ಪ್ರೀತ್ ಬುಮ್ರಾ, ಉತ್ತರ ಪ್ರದೇಶದಿಂದ ವಲಸೆ ಬಂದಿರುವ ಅನುಭವಿ ಎಡಗೈ ಮಧ್ಯಮ ವೇಗಿ ಆರ್.ಪಿ.ಸಿಂಗ್ ಬಲ ತುಂಬಲಿರುವ ಪ್ರಮುಖ ಆಟಗಾರರಾಗಿದ್ದಾರೆ.

ತಂಡಗಳ ವಿವರ

ಕರ್ನಾಟಕ: ಆರ್.ವಿನಯ್ ಕುಮಾರ್ (ನಾಯಕ), ಕೆ.ಎಲ್.ರಾಹುಲ್, ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕರುಣ್ ನಾಯರ್, ಸ್ಟುವರ್ಟ್ ಬಿನ್ನಿ, ಶ್ರೇಯಸ್ ಗೋಪಾಲ್, ಜೆ.ಸುಚಿತ್, ಸಾದಿಕ್ ಕಿರ್ಮಾನಿ, ಆಭಿಮನ್ಯು ಮಿಥುನ್, ಎಸ್.ಅರವಿಂದ್, ಆರ್.ಸಮರ್ಥ್, ಡೇವಿಡ್ ಮಥಾಯಿಸ್, ಅಭಿಷೇಕ್ ರೆಡ್ಡಿ ಮತ್ತು ಪ್ರವೀಣ್ ದುಬೆ.

ಗುಜರಾತ್: ಪಾರ್ಥೀವ್ ಪಟೇಲ್ (ನಾಯಕ), ಮೆಹುಲ್ ಪಟೇಲ್, ಪ್ರಿಯಾಂಕ್ ಪಾಂಚಲ್, ರೋಹಿತ್ ದಹಿಯಾ, ಹಿಮಾಲಯ ಬರಾದ್, ರುಜುಲ್ ಭಟ್, ಜಸ್‌ಪ್ರೀತ್ ಬುಮ್ರಾ, ಚಿರಾಗ್ ಗಾಂಧಿ, ಮನ್‌ಪ್ರೀತ್ ಜುನೇಜ, ರಶ್ ಕಲಾರಿಯಾ, ಜೆಸಲ್ ಕಾರಿಯಾ, ಅಕ್ಷರ್ ಪಟೇಲ್, ಹಾರ್ದಿಕ್ ಪಟೇಲ್, ಸ್ಮಿತ್ ಪಟೇಲ್ ಮತ್ತು ಆರ್.ಪಿ.ಸಿಂಗ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com