
ನವದೆಹಲಿ: ನಿರ್ಣಾಯಕ ಹಣಾಹಣಿಯಲ್ಲಿ ಪ್ರವೀಣ್ ರಾಣಾ ಅವರ ಆಕರ್ಷಕ ಪ್ರದರ್ಶನದ ನೆರವಿನಿಂದ ಪಂಜಾಬ್ ರಾಯಲ್ಸ್ ತಂಡ ಪ್ರೊ ರೆಸ್ಲಿಂಗ್ ಲೀಗ್ ಟೂರ್ನಿಯಲ್ಲಿ ದಿಲ್ಲಿ ವೀರ್ ತಂಡವನ್ನು ಮಣಿಸಿತು.
ಶುಕ್ರವಾರ ನಡೆದ ಪಂದ್ಯದಲ್ಲಿ ಪಂಜಾಬ್ ರಾಯಲ್ಸ್ ತಂಡ 4-3 ಅಂತರದಿಂದ ದಿಲ್ಲಿ ವೀರ್ ತಂಡವನ್ನು ಮಣಿಸಿತು. ಈ ಸೋಲಿನಿಂದ ದಿಲ್ಲಿ ವೀರ್ ತಂಡ ಸತತ ಮೂರನೇ ಬಾರಿಗೆ ಮುಖಭಂಗ ಅನುಭವಿಸಿದ್ದು, ತೀವ್ರ ನಿರಾಸೆ ಅನುಭವಿಸಿದೆ. ಪಂದ್ಯದಲ್ಲಿ ತೀವ್ರ ಪ್ರತಿರೋಧ ನೀಡಿದ ದಿಲ್ಲಿ ವೀರ್ ತಂಡ ಒಂದು ಹಂತದಲ್ಲಿ 3-3 ಅಂತರದ ಸಮಬಲ ಸಾಧಿಸಿತ್ತು. ಆದರೆ ಅಂತಿಮ ಹಾಗೂ ನಿರ್ಣಾಯಕವಾಗಿದ್ದ ಪುರುಷರ 74 ಕೆ.ಜಿ ವಿಭಾಗದ ಸೆಣಸಿನಲ್ಲಿ ರಾಯಲ್ಸ್ ನ ಪ್ರವೀಣ್, ದಿಲ್ಲಿಯ ದಿನೇಶ್ ಕುಮಾರ್ ವಿರುದ್ಧ 6-2 ಅಂತರದಲ್ಲಿ ಜಯ ಸಾಧಿಸಿದ ಪರಿಣಾಮ ದಿಲ್ಲಿ ಸೋಲನ್ನುಭವಿಸಬೇಕಾಯಿತು.
ಆರಂಭಿಕ ಪಂದ್ಯದಲ್ಲಿ ಮುಂಬೈ ಗರುಡಾಸ್ ವಿರುದ್ಧ ಸೋತಿದ್ದ ಪಂಜಾಬ್, ನಂತರ ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಮೊದಲ ಸುತ್ತಿನ ಸೆಣಸಿನಲ್ಲಿ ಪುರುಷರ 57 ಕೆ.ಜಿ ವಿಭಾಗದ ಕುಸ್ತಿಯಲ್ಲಿ ಪಂಜಾಬ್‍ನ ವ್ಲಾಡ್ಮಿರ್ ಖಿಂಚೆಗಶಿವಿಲಿ ತಮ್ಮ ಪ್ರತಿಸ್ಪರ್ಧಿ ಬೆಖ್ಬಯರ್ ಎರ್ಡನ್ ಬಟ್ ವಿರುದ್ಧ 4-3 ಅಂತರದ ಮುನ್ನಡೆ ಸಾಧಿಸಿದರು. ನಂತರ ಮಹಿಳೆಯರ 69 ಕೆ.ಜಿ ವಿಭಾಗದ ಪಂದ್ಯದಲ್ಲಿ ಪಂಜಾಬ್‍ನ ವಾಸಿಲಿಸಾ ಮರ್ಜಲಿಕ್ ತಾಂತ್ರಿಕ ಮುನ್ನಡೆಯೊಂದಿಗೆ 2-0 ಯಿಂದ ನಿಕ್ಕಿ ಅವರನ್ನು ಮಣಿಸಿದರು. ಪುರುಷರ 65 ಕೆ.ಜಿ ವಿಭಾಗದಲ್ಲಿ ಪಂಜಾಬ್‍ನ ರಾಜೇಶ್ ಅವರನ್ನು ತಾಂತ್ರಿಕ ಮುನ್ನಡೆಯೊಂದಿಗೆ ಮಣಿಸಿದ ದಿಲ್ಲಿಯ ನವ್ರುಜೊವ್ ಇಕ್ತಿಯಾರ್ ದಿಲ್ಲಿಗೆ ಆಸರೆಯಾದರು.
ನಂತರ ಮಹಿಳೆಯರ 58 ಕೆ.ಜಿ ವಿಭಾಗದಲ್ಲಿ ಯೆಸಿಲಿರ್ಮಕ್ ಎಲಿಫ್ ಪಂಜಾಬ್‍ನ ಗೀತಾ ಫೊಗತ್ ಅವರನ್ನು ಮಣಿಸಿ ತಂಡ 2-2ರ ಸಮಬಲ ಸಾಧಿಸುವಂತೆ ಮಾಡಿದರು. ಪುರುಷರ 125 ಕೆ.ಜಿ ವಿಭಾಗದಲ್ಲಿ ಪಂಜಾಬ್ ಪರ ಮಂಗೋಲಿಯಾದ ಜರ್ಗಲ್‍ಸೈಖಾನ್ ಚುಲುಂಬಟ್, ತಮ್ಮ ಪ್ರತಿಸ್ಪರ್ಧಿ ಕೃಷ್ಣ ಕುಮಾರ್ ಅವರನ್ನು 4-0ಯಿಂದ ಮಣಿಸಿ ಮೇಲುಗೈ ಸಾಧಿಸಿದರು. ಬಳಿಕ ಮಹಿಳೆಯರ 48 ಕೆ.ಜಿ ವಿಭಾಗದಲ್ಲಿ ದಿಲ್ಲಿಯ ವಿನೇಶ್ ಫೊಗತ್ ತಮ್ಮ ಪ್ರತಿಸ್ಪರ್ಧಿ ಯಾಣಾ ರಟ್ಟಿಗನ್ ಅವರನ್ನು 15-6 ಅಂತರದಲ್ಲಿ ಮಣಿಸಿದ್ದು ಮತ್ತೊಮ್ಮೆ ಸಮಬಲಕ್ಕೆ ಕಾರಣವಾಯಿತು.
Advertisement