
ಬೆಂಗಳೂರು: ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯ ಫೈನಲ್ ಸುತ್ತಿಗೆ ಪ್ರವೇಶಿಸಲು ಗುಜರಾತ್ ಮತ್ತು ತಮಿಳುನಾಡು ತಂಡ ಪರಸ್ಪರ ಕಾದಾಟ ನಡೆಸಲಿದ್ದು, ಜಯ ಸಾಧಿಸುವ ವಿಶ್ವಾಸದಲ್ಲಿವೆ.
ಶನಿವಾರ ನಗರದ ಚಿನ್ನಸ್ವಾಮಿ ಅಂಗಣದಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಈ ತಂಡಗಳು ಸೆಣಸಲಿದ್ದು, ವಿಜೇತ ತಂಡ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಲಿದೆ.
ಗುಜರಾತ್ ತಂಡ ಟೂರ್ನಿಯುದ್ದಕ್ಕೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಗುಜರಾತ್ ತಂಡ ಪ್ರಬಲವೆನಿಸಿದರೂ, ಮತ್ತೊಂದೆಡೆ ತಮಿಳುನಾಡು ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಗುಜರಾತ್ ತಂಡ ಲೀಗ್ ಹಂತದಲ್ಲಿ ಬಿ ಗುಂಪಿನಲ್ಲಿ ಆಡಿದ 6 ಪಂದ್ಯಗಳ ಪಾಕಿ 5ರಲ್ಲಿ ಜಯ ಸಾಧಿಸಿ ಎರಡನೇ ಸ್ಥಾನ ಪಡೆದಿತ್ತು. ಇನ್ನು ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿದರ್ಭ ವಿರುದ್ಧ 2 ವಿಕೆಟ್ ಜಯ ಸಾಧಿಸಿತ್ತು. ಮತ್ತೊಂದೆಡೆ ತಮಿಳುನಾಡು ತಂಡ ಎ ಗುಂಪಿನಲ್ಲಿ ಆಡಿದ 6 ಪಂದ್ಯಗಳಲ್ಲಿ ಐದರಲ್ಲಿ ಗೆದ್ದು ಅಗ್ರಸ್ಥಾನ ಪಡೆದಿತ್ತು. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿರುದ್ಧದ ರೋಚಕ 1 ವಿಕೆಟ್ ಜಯ ತಂಡದಲ್ಲಿ ಆತ್ಮ ವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ.
ಗಂಭೀರ್ ಪಡೆಗೆ ಹಿ.ಪ್ರದೇಶ ಸವಾಲು: ಇನ್ನು ಆಲೂರಿನಲ್ಲಿರುವ ಕೆಎಸ್‍ಸಿಎ ಕ್ರೀಡಾಂಗಣದಲ್ಲಿ ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ದೆಹಲಿ ಮತ್ತು ಹಿಮಾಚಲ ಪ್ರದೇಶ ತಂಡಗಳು ಮುಖಾಮುಖಿಯಾಗಲಿವೆ. ಇದೇ ಮೊದಲ ಬಾರಿಗೆ ಸೆಮಿಫೈನಲ್ ಪ್ರವೇಶಿಸುವ ಮೂಲಕ ದಾಖಲೆ ಬರೆದಿರುವ ಹಿಮಾಚಲ ಪ್ರದೇಶ ಹೊಸ ಉತ್ಸಾಹದಲ್ಲಿದ್ದರೆ, ಗಂಭೀರ್ ನೇತೃತ್ವದ ಖ್ಯಾತನಾಮ ಆಟಗಾರರನ್ನು ಹೊಂದಿರುವ ದೆಹಲಿ ತಂಡ ಜಯದ ವಿಶ್ವಾಸದಲ್ಲಿದೆ.
Advertisement