ಹಣೆಬರಹ ಬದಲಿಸುವ ಫಿಟ್ನೆಸ್ ಪರೀಕ್ಷೆ

ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡದ..
ಅಭ್ಯಾಸ ನಿರತ ಆಟಗಾರರು (ಸಂಗ್ರಹ ಚಿತ್ರ)
ಅಭ್ಯಾಸ ನಿರತ ಆಟಗಾರರು (ಸಂಗ್ರಹ ಚಿತ್ರ)
Updated on

ಮೆಲ್ಬರ್ನ್: ವಿಶ್ವಕಪ್ ಟೂರ್ನಿಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿರುವ ಸಂದರ್ಭದಲ್ಲಿ ಹಾಲಿ ಚಾಂಪಿಯನ್ ಭಾರತ ತಂಡದ ಆಟಗಾರರ ಫಿಟ್ನೆಸ್ ಹಾಗೂ ಗಾಯದ ಸಮಸ್ಯೆಯಿಂದ ಬಳಲುತ್ತಿದೆ.

ಈಗ ಫೆ.7ರಂದು ತಂಡದ ಪ್ರಮುಖ ಆಟಗಾರರ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು, ಯಾರು ಪಾಸಾಗಿ ವಿಶ್ವಕಪ್ ತಂಡದಲ್ಲಿ ಉಳಿಯುತ್ತಾರೆ. ಯಾರು ಫೇಲ್ ಆಗಿ ಭಾರತಕ್ಕೆ ಮರಳುವರು ಎಂಬ ಸ್ಪಷ್ಟ ಚಿತ್ರಣ ದೊರೆಯಲಿದೆ. ಶನಿವಾರ ನಡೆಯಲಿರುವ ಫಿಟ್ನೆಸ್ ಪರೀಕ್ಷೆಯಲ್ಲಿ ಭಾರತದ ಆರಂಭಿಕ ಬ್ಯಾಟ್ಸ್‍ಮನ್ ರೋಹಿತ್ ಶರ್ಮಾ, ಆಲ್ರೌಂಡರ್ ರವೀಂದ್ರ ಜಡೇಜಾ, ತಂಡದ ಅನುಭವಿ ಹಾಗೂ ಪ್ರಮುಖ ಬೌಲರ್‍ಗಳಾದ ಇಶಾಂತ್ ಶರ್ಮಾ ಮತ್ತು ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ.

ಈಗ ಈ ನಾಲ್ವರು ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಬೇಕಿದ್ದು, ಆಸೀಸ್ ನೆಲದಲ್ಲಿ ವಿಶ್ವಕಪ್ ಆಡುವ ಕನಸು ಈಡೇರುವುದೇ ಅಥವಾ ಮುಚ್ಚು ನೂರಾಗುವುದೇ ಎಂಬುದನ್ನು
ಕಾದು ನೋಡಬೇಕು. ಈ ಫಿಟ್ನೆಸ್ ಪರೀಕ್ಷೆ ಈ ನಾಲ್ವರು ಆಟಗಾರರಿಗೆ ಅಗ್ನಿ ಪರೀಕ್ಷೆಯಾಗಿದ್ದರೆ, ತಂಡದಿಂದ ಹೊರಗುಳಿದಿದ್ದ ಕೆಲವು ಆಟಗಾರರಿಗೆ ಮತ್ತೆ ತಂಡದಲ್ಲಿ ಸ್ಥಾನ ಪಡೆಯುವ ಆಶಾ ಕಿರಣವಾಗಿ ಪರಿಣಮಿಸಿದೆ. ಈ ಆಟಗಾರರ ಜಾಗವನ್ನು ಯಾರು ತುಂಬುವರು ಎಂಬುದೇ ಕುತೂಹಲದ ಪ್ರಶ್ನೆಯಾಗಿದೆ.

ಒಂದುವೇಳೆ ಆರಂಭಿಕ ಬ್ಯಾಟ್ಸಮನ್ ರೋಹಿತ್ ಶರ್ಮಾ ಗಾಯಾಳುವಾಗುಳಿದರೆ, ಆರಂಭಿಕ ಸ್ಥಾನವನ್ನು ತುಂಬಲು ಮುರಳಿ ವಿಜಯ್ ಹಾಗೂ ಕರ್ನಾಟಕದ ರಾಬಿನ್ ಉತ್ತಪ್ಪ ನಡುವೆ ಮತ್ತೆ ಪೈಪೋಟಿ ಏರ್ಪಡಲಿದೆ. ಟೆಸ್ಟ್ ಸರಣಿಯಲ್ಲಿ ಮುರಳಿ ವಿಜಯ್ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅವರಿಗಿರುವ ಪ್ಲಸ್ ಪಾಯಿಂಟ್. ಇನ್ನು ಕಳೆದ ವರ್ಷ ಉತ್ತಮ ಪ್ರದರ್ಶನ ತೋರಿ, ಹೆಚ್ಚುವರಿ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯ ರಾಬಿನ್‍ಗೆ ಬೆಂಬಲವಾಗಿದೆ. ಧೋನಿ ಬೆಂಬಲ ಮುರಳಿ ವಿಜಯ್ ಕಡೆಗಿದೆ ಎಂಬ ಮಾತುಗಳು ಸಹ ಕೇಳಿ ಬಂದಿವೆ.

ಇನ್ನು ರವೀಂದ್ರ ಜಡೇಜಾ ಫಿಟ್ನೆಸ್ ಪರೀಕ್ಷೆಯಲ್ಲಿ ಫೇಲ್ ಆದಲ್ಲಿ, ಕಳೆದ ವಿಶ್ವಕಪ್ ಹಿರೋ ಯುವರಾಜ್ ಸಿಂಗ್‍ಗೆ ಟೀಂ ಇಂಡಿಯಾ ಬಾಗಿಲು ತೆರೆಯುವ ಸಾಧ್ಯತೆ ಹೆಚ್ಚಾಗಿದೆ. ಕಳೆದ
ಐಪಿಎಲ್ ಹಾಗೂ ಪ್ರಸಕ್ತ ರಣಜಿ ಟೂರ್ನಿಯಲ್ಲಿ ಗಮನ ಸೆಳೆದಿರುವ ಯುವರಾಜ್ ಸಿಂಗ್ ವಿದೇಶದಲ್ಲಿ ಉತ್ತಮ ದಾಖಲೆ ಹೊಂದಿರುವುದು ತಂಡದಲ್ಲಿ ಸ್ಥಾನ ಗಿಟ್ಟಿಸಲು ನೆರವಾಗಬಹುದು. ಈ ಇಬ್ಬರೂ ಆಟಗಾರರ ಸ್ಥಾನ ತುಂಬಲು ಟೀಂ ಇಂಡಿಯಾ ಬಳಿ ಅವಕಾಶವಿದೆ. ಆದರೆ ಪ್ರಮುಖ ಸಮಸ್ಯೆ ಇರುವುದು ಬೌಲಿಂಗ್‍ನಲ್ಲಿ. ಈಗಾಗಲೇ ಜಹೀರ್ ಖಾನ್‍ರನ್ನು ಸಂಪೂರ್ಣವಾಗಿ ಆಯ್ಕೆಗಾರರು ಕೈಬಿಟ್ಟಿದ್ದಾರೆ.

ಹಾಗಾಗಿ ತಂಡದಲ್ಲಿ ಪ್ರಮುಖ ಹಾಗೂ ಅನುಭವಿ ಬೌಲರ್ ಗಳು ಎಂದೇ ಬಿಂಬಿತವಾಗಿದ್ದ ಇಶಾಂತ್ ಮತ್ತು ಭುವಿ ಅನುಪಸ್ಥಿತಿ ಬೌಲಿಂಗ್ ವಿಭಾಗವನ್ನು ಮತ್ತಷ್ಟು ಶೋಚನೀಯ ಸ್ಥಿತಿಗೆ ಕೊಂಡೊಯ್ಯಬಹುದು. ಈ ಇಬ್ಬರ ಸ್ಥಾನಕ್ಕೆ ಮೋಹಿತ್ ಶರ್ಮಾ ಹಾಗೂ ಧವಳ್ ಕುಲಕರ್ಣಿ ಆಯ್ಕೆಯಾಗುವ ಸಾಧ್ಯತೆ ಇದೆಯಾದರೂ ತಂಡದಲ್ಲಿ ಅನುಭವ ಸಂಪೂರ್ಣ ಶೂನ್ಯವಾಗಲಿದೆ. ಈಗಾಗಲೇ ಶಮಿ ಹೊರತುಪಡಿಸಿ ಉಳಿದ ಬೌಲರ್‍ಗಳು ಆಸ್ಟ್ರೇಲಿಯಾ ನೆಲದಲ್ಲಿ ಲಯ ಕಂಡುಕೊಂಡಿಲ್ಲ. ಅಲ್ಲದೆ ಮೊದಲ ಬಾರಿಗೆ ಈ ನೆಲದಲ್ಲಿ ಆಡುತ್ತಿದ್ದಾರೆ.

ಹಾಗಾಗಿ ಅನುಭವದ ಕೊರತೆ ಭಾರತವನ್ನು ಕಾಡದೇ ಬಿಡುವುದಿಲ್ಲ. ಹಾಗಾಗಿ ಆಯ್ಕೆಗಾರರು ಯಾರಿಗೆ ಮಣೆ ಹಾಕುವರು ಎಂಬುದನ್ನು ಕಾದು ನೋಡಬೇಕು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com