
ಚೆನ್ನೈ: ಐಪಿಎಲ್ ಫಿಕ್ಸಿಂಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿಗೆ ಮಣಿದಿರುವ ಬಿಸಿಸಿಐ, ಮಾ.2ರಂದು ಮಂಡಳಿಯ ವಾರ್ಷಿಕ ಮಹಾಸಭೆ ಜತೆಗೆ ಸಾಂಸ್ಥಿಕ ಚುನಾವಣೆ ನಡೆಸಲು ನಿರ್ಧರಿಸಿದೆ.
ಚೆನ್ನೈನಲ್ಲಿ ಭಾನುವಾರ ನಡೆದ ಬಿಸಿಸಿಐ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ತಮಿಳುನಾಡು ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಆಗಿರುವ ಎನ್. ಶ್ರೀನಿವಾಸ್ ಸಬೆಗೆ ಹಾಜರಾಗಿದ್ದರು. ಕಳೆದ ತಿಂಗಳು 22ರಂದು ಸುಪ್ರೀಂ ಕೋರ್ಟ್ ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡಿದ್ದ ಸಂದರ್ಭದಲ್ಲಿ 6 ವಾರಗಳೊಳಗಾಗಿ ಸಂಸ್ಥೆಯ ಪದಾಧಿಕಾರಿಗಳ ಚುನಾವಣೆ ನಡೆಸುವಂತೆ ಗಡುವು ನೀಡಿತ್ತು.
ಈ ಮೂಲಕ ಎನ್. ಶ್ರೀನಿವಾಸನ್ ಅವರನ್ನು ಮತ್ತೆ ಅಧ್ಯಕ್ಷ ಗಾದಿಗೆ ತಂದುಕೂರಿಸುವ ಸಲುವಾಗಿ ತನ್ನ ವಾರ್ಷಿಕ ಮಹಾಸಭೆಯನ್ನು ನಡೆಸದೇ ಸುಮಾರು 4 ತಿಂಗಳಿಗೂ ಹೆಚ್ಚು ಕಾಲ ಮುಂದೂಡುತ್ತಾ ಬಂದಿದ್ದ ಬಿಸಿಸಿಐಗೆ ಸವೋಚ್ಛ ನ್ಯಾಯಾಲಯ ಬಿಸಿ ಮುಟ್ಟಿಸಿತ್ತು.
ಪಿಂಚಣಿ ಏರಿಕೆ: ಇದೇ ಸಭೆಯಲ್ಲಿ ಮಾಜಿ ಆಟಗಾರರಿಗೆ ನೀಡಲಾಗುವು ಮಾಸಿಕ ಪಿಂಚಣಿಯಲ್ಲಿ ಶೇ.50ರಷ್ಟು ಏರಿಕೆ ಮಾಡಲು ನಿರ್ಧರಿಸಲಾಯಿತು. ಎಲ್ಲಾ ಮಾಜಿ ಆಟಗಾರರಿಗೂ ರು.50 ಸಾವಿರದವರೆಗೆ ಶೇ.50ರಷ್ಟು ಮಾಸಿಕ ಪಿಂಚಣಿಯನ್ನು ಇದೇ ವರ್ಷ ಜನವರಿಯಿಂದ ಏರಿಸಲು ನಿರ್ಧರಿಸಲಾಗಿದೆ.
Advertisement