
ವಿಶ್ವಕಪ್ ಮತ್ತೆ ಮರುಕಳಿಸಿದೆ. ಚಾಂಪಿಯನ್ ಪಟ್ಟದ ಕನಸು ಹೊತ್ತು 14 ತಂಡಗಳು ರಣಾಂಗಣಕ್ಕಿಳಿದಿವೆ. ಯಾರು ಗೆಲ್ಲುತ್ತಾರೆ, ಯಾರು ಮೊದಲ ಹಂತದಲ್ಲೇ ಮುಗ್ಗರಿಸುತ್ತಾರೆ ಎನ್ನುವುದು ಸದ್ಯದ ಕುತೂಹಲದ ವಿಚಾರ. ಈ ನಿಟ್ಟಿನಲ್ಲಿ ತಂಡಗಳ ವಿಶ್ಲೇಷಣೆ ಇಲ್ಲಿದೆ...
ಇಂಗ್ಲೆಂಡ್
ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್‍ನ ಹಾದಿ ಬೀದಿಗಳಲ್ಲಿ ವಿಶ್ವಕಪ್ ಗೆದ್ದ ಹರ್ಷದ ಕಲರವ ಅನುರಣಿಸಿಲ್ಲ. ನಾಲ್ಕು ಬಾರಿ ಫೈನಲ್ ಪ್ರವೇಶಿಸಿದ್ದರೂ ಚಾಂಪಿಯನ್ ಪಟ್ಟ ಕೈಗೆ ದಕ್ಕಿಲ್ಲ. ಹಾಗಾಗಿಯೇ , ಈ ತಂಡಕ್ಕೆ ಈ ಬಾರಿಯಾದರೂ ಕಪ್ ಗೆಲ್ಲುವ ಆಸೆ ಮೈದಳೆದಿದ್ದರೆ ಅದು ಸಹಜ. ಕಳೆದೊಂದು ವರ್ಷದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಆ್ಯಷಸ್ ಸರಣಿಯನ್ನು ಗೆದ್ದಿರುವ ಇಂಗ್ಲೆಂಡ್, ಆತ್ಮವಿಶ್ವಾಸ ಮತ್ತಷ್ಟು ಹೆಚ್ಚಿಸಿಕೊಂಡಿದೆ. ಬ್ಯಾಟಿಂಗ್ ಲೈನಪ್ ಚೆನ್ನಾಗಿದ್ದರೂ, ಚುರುಕಿಲ್ಲ. ಆಯನ್ ಮೊರ್ಗನ್, ಇಯಾನ್ ಬೆಲ್ ಅವರಂಥ ಬಲಿಷ್ಠ ಬ್ಯಾಟ್ಸ್‍ಮನ್‍ಗಳು ದೈತ್ಯಮಟ್ಟದಲ್ಲಿ ಪ್ರತಿಭಾಪ್ರದರ್ಶನ ಮಾಡುವ ಅವಶ್ಯಕತೆಯಿದೆ. ಆಸೀಸ್ ನೆಲದ ಪಿಚ್‍ಗಳ ಬಳಕೆ ಆಂಗ್ಲರಿಗೆ ಸರಿಯಾಗಿ ಗೊತ್ತಿರುವುದರಿಂದ ವೇಗಿಗಳಾದ ಫಿನ್, ಆ್ಯಂಡರ್ಸನ್, ಟ್ರೆಮ್ಲೆಟ್ ಹಾಗೂ ಸುವರ್ಟ್ ಬ್ರಾಡ್ ಅವರಂಥ ಅನುಭವಿಗಳು ಇದರ ಲಾಭ ತೆಗೆದುಕೊಳ್ಳಬಹುದು. ಲೀಗ್ ಹಂತದಲ್ಲಿ ತಾನಿರುವ `ಎ' ಗುಂಪಿನ ದುರ್ಬಲ ತಂಡಗಳಾದ ಬಾಂಗ್ಲಾದೇಶ, ಸ್ಕಾಟ್ಲೆಂಡ್ ವಿರುದ್ಧ ದೊಡ್ಡ ಗೆಲವು ಪಡೆದರೆ ಅದಕ್ಕೆ ಅನುಕೂಲ.
ಭಾರತ
ಆಸೀಸ್ ನೆಲದಲ್ಲಿ ಸತತ ಸೋಲಿನ ರುಚಿ ಕಂಡಿರುವ ಭಾರತ, ವಿಶ್ವಕಪ್‍ನಲ್ಲಿ ಹಾಲಿ ಚಾಂಪಿಯನ್ ಎಂಬ ಹೆಗ್ಗಳಿಕೆಯೊಂದಿಗೆ ಕಣಕ್ಕಿಳಿಯುತ್ತಿದೆ. ಆದರೆ ಈ ಬಾರಿಯೂ ಬ್ಲೂ
ಬಾಯ್ಸ್ ಗೆ ನಿಜಕ್ಕೂ ಕಪ್ ತಮ್ಮಲ್ಲೇ ಉಳಿಸಿಕೊಳ್ಳುವ ಛಾತಿ ಇದೆಯೇ ? ಎಂಬ ಸಂದೇಹ ಮೂಡುತ್ತದೆ. ಏಕೆಂದರೆ, ಬೌಲಿಂಗ್‍ನಲ್ಲಿ ತಂಡ ಕೆಲವೊಂದು ಲೋಪದೋಷಗಳಿಂದ ಕೂಡಿದೆ. ಬ್ಯಾಟಿಂಗ್ ಲೈನಪ್ ಉತ್ತಮವಾಗಿಯೇ ಇದೆ. ರೋಹಿತ್, ಶಿಖರ್ ಉತ್ತಮ ಆರಂಭಿಕರು. ಒಂದು ವೇಳೆ ಆರಂಭಿಕ ಆಟಗಾರರು ಒಮ್ಮೆ ಮುಗ್ಗರಿಸಿದರೂ, ಮೂರನೇ ಕ್ರಮಾಂಕದಲ್ಲಿ ಆಡಲಿರುವ ವಿರಾಟ್ ಕೊಹ್ಲಿ ಅವರ ಆಕ್ರಮಣಕಾರಿ ಆಟ, ಸುರೇಶ್ ರೈನಾರ ಲೀಲಾಜಾಲ, ಧೋನಿಯ ಸಮಚಿತ್ತತೆ ಹಾಗೂ ಜಡೇಜಾ ಅವರ ಪ್ರಭಾವಿ ಪ್ರದರ್ಶನಗಳು ಯಾವುದೇ ತಂಡದ ಬೌಲಿಂಗ್ ಶಕ್ತಿಯನ್ನು ನುಚ್ಚುನೂರು ಮಾಡಬಲ್ಲವು. ಆದರೆ, ತಂಡದ ಒಂದೇ ಒಂದು ಸಮಸ್ಯೆಯೆಂದರೆ ದರೆ, ಬೌಲಿಂಗ್ ವಿಭಾಗದಲ್ಲಿನ ಕೊರತೆ. ಇದರಿಂದಾಗುತ್ತಿರುವ ನೇರ ಪರಿಣಾಮ - ಸಿಕ್ಕಾಪಟ್ಟೆ ರನ್ ಸೋರಿಕೆ. ಇದನ್ನು ತಡೆಗಟ್ಟಿ ಬೌಲಿಂಗ್ ಅನ್ನು ಕೊಂಚ ಮೊನಚು ಮಾಡಿದರೆ ತಂಡದ ಕಪ್ ಉಳಿಸಿಕೊಳ್ಳುವ ಕನಸು ನನಸಾಗುವುದರಲ್ಲಿ ಸಂಶಯವಿಲ್ಲ.
ಆಸ್ಟ್ರೇಲಿಯಾ
ಈ ಬಾರಿಯ ವಿಶ್ವಕಪ್ ಗೆಲ್ಲಲು ಆಸ್ಟ್ರೇಲಿಯಾಕ್ಕೆ ವಿಪುಲವಾದ ಅವಕಾಶಗಳಿವೆ. ಇದಕ್ಕೆಪ್ರಮುಖ ಕಾರಣ, ತವರಿನಲ್ಲೇ ಆ ತಂಡ ಕದನಕ್ಕಿಳಿಯುತ್ತಿರುವುದು. ಅಲ್ಲದೆ, ತಂಡವೂ
ಸುಸ್ಥಿತಿಯಲ್ಲಿದೆ. ತವರಿನ ಅಭಿಮಾನಿಗಳ ಬೆಂಬಲವಿದೆ. ಇಲ್ಲಿನ ಪಿಚ್‍ಗಳ ಬಗ್ಗೆ ಅರಿವಿದೆ. ಅಲ್ಲದೇ, ಕಳೆದ ನವೆಂಬರ್‍ನಲ್ಲಿ ದಕ್ಷಿಣ ಆಫ್ರಿ ಕಾ ವಿರುದ್ಧ ಏಕದಿನ ಸರಣಿ,
ಭಾರತ ವಿರುದ್ಧ ಟೆಸ್ಟ್ ಸರಣಿ ಹಾಗೂ ತ್ರಿಕೋನ ಸರಣಿಯನ್ನೂ ಗೆದ್ದುಕೊಂಡು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದೆ. ಈ ದೃಷ್ಟಿಕೋನದಿಂದ ನೋಡಿದರೆ, ಈ ಬಾರಿಯ ವಿಶ್ವಕಪ್ ಗೆಲ್ಲುವ
ನೆಚ್ಚಿನ ತಂಡಗಳಲ್ಲಿ ಇದೂ ಒಂದು. ಈಗಾಗಲೇ ನಾಲ್ಕು ಬಾರಿ ಚಾಂಪಿಯನ್ ಆಗಿರುವ ತಂಡಕ್ಕೆ ಈ ಬಾರಿ ನಾಯಕ ಕ್ಲಾರ್ಕ್ ಅವರ ಪಿsಟ್ನೆಸ್‍ನದ್ದೇ ಚಿಂತೆ. ಅಭ್ಯಾಸ ಪಂದ್ಯದಲ್ಲಿ
ಆಡಿದ್ದರೂ, ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅವರು ಆಡುತ್ತಿಲ್ಲ.
ಆದರೂ ತಂಡ ಸಮತೋಲನ ಹೊಂದಿದೆ. ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ತಂಡದ ಪ್ರಮುಖ ಅಸ್ತ್ರ . ಇನ್ನು, ಜೇಮ್ಸ್ ಫಾಲ್ಕನರ್, ಜೋಶ್ ಹ್ಯಾಜೆಲ್‍ವುಡ್, ಪ್ಯಾಟ್ ಕುಮಿನ್ಸ್ ಅವರಂಥ ದೊಡ್ಡ ಬೌಲರ್‍ಗಳಿದ್ದರೆ, ಬ್ಯಾಟಿಂಗ್ ಲೈನಪ್‍ನಲ್ಲಿ, ಜಾರ್ಜ್ ಬೇಯ್ಲಿ, ಎರಾನ್ ಫಿಂಚ್ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್, ಗ್ಲೆನ್ ಮ್ಯಾಕ್ಸ್‍ವೆಲ್ ಹಾಗೂ ಮಿಚೆಲ್ ಜಾನ್ಸನ್ ಅವರಂಥ ಸಿಡಿಲ ಮರಿಗಳು ತಂಡದಲ್ಲಿರುವುದು ಅದರ ಬಲವನ್ನು ಹೆಚ್ಚಿಸಿವೆ. ಕ್ಲಾರ್ಕ್
ತಂಡಕ್ಕೆ ಮರಳಿದರೆ ಬೇಯ್ಲಿ ಸ್ಥಾನಕ್ಕೆ ಸಂಚಕಾರ ಬಂದೊದಗಬಹುದು.
ದಕ್ಷಿಣ ಆಫ್ರಿಕಾ
1992ರಿಂದ ಇಲ್ಲಿಯವರೆಗೆ ಉತ್ತಮ ತಂಡವಾಗಿ ವಿಶ್ವಕಪ್‍ಗಳಲ್ಲಿ ಪದಾರ್ಪಣೆ ಮಾಡಿದ್ದರೂ, ಕಪ್ ಗೆಲ್ಲುವಲ್ಲಿ ಮಾತ್ರ ದಕ್ಷಿಣ ಆಫ್ರಿಕಾ ವಿಫಲವಾಗಿದೆ. ಆಫ್ರಿಕನ್ನರಿಗೆ ಚೋಕರ್ಸ್
ಎಂದೇ ಹಣೆಪಟ್ಟಿ ಇದೆ. ಈ ಬಾರಿ ದುರಾದೃಷ್ಟವನ್ನು ಹೋಗಲಾಡಿಸಿ, ಅದು ಚಾಂಪಿಯನ್ ಆಗಿ ಹೊರಹೊಮ್ಮುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಆಫ್ರಿಕಾ ಸಹ ಒಂದು. ಈ ತಂಡಕ್ಕೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಗಳ ನೆಲ ಹೊಸತೇನಲ್ಲ. ಅಲ್ಲಿನ ಪಿಚ್‍ಗಳ ಪರಿಚಯವಿದೆ. ಎಲ್ಲಕ್ಕೂ ಮಿಗಿಲಾಗಿ ತಂಡದ
ಸಾಮರ್ಥ್ಯವೂ ಹೆಚ್ಚಿದೆ ಎನ್ನುವುದು ಗಮನಾರ್ಹ ಅಂಶ. ಶಕ್ತಿಶಾಲಿ ಬೌಲಿಂಗ್ ಪಡೆಯನ್ನು ಹೊಂದಿರುವ ಈ ತಂಡ, ಅಷ್ಟೇ ಶಕ್ತಿಶಾಲಿಯಾದ ಬ್ಯಾಟಿಂಗ್ ಲೈನಪ್
ಅನ್ನೂ ಹೊಂದಿದೆ. ಆರಂಭಿಕ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಸದೃಢವಾಗಿದೆ. ಎಬಿ ಡಿವಿಲಿಯರ್ಸ್, ಹಶೀಂ ಆಮ್ಲ , ಬೆಹರ್ದಿನ್, ಡಿ ಕಾಕ್, ಡುಮಿನಿ, ಡು
ಪ್ಲೆಸಿಸ್, ಮಾರ್ನ್ ಮಾರ್ಕೆಲ್, ಫಿಲ್ಯಾಂಡರ್, ಪಾರ್ನೆಲ್ ಮುಂತಾದ ಘಟಾನುಘಟಿಗಳ ಬಳಗವೇ ಆ ತಂಡಕ್ಕಿದೆ. ಇನ್ನು, ದಕ್ಷಿಣ ಆಫ್ರಿಕಾ ತಂಡ `ಬಿ' ಗುಂಪಿನಲ್ಲಿದೆ. ಭಾರತ, ಪಾಕಿಸ್ತಾನ, ವೆಸ್ಟ್ ಇಂಡೀಸ್ ತಂಡಗಳು ಹರಿಣಗಳಿಗೆ ಸವಾಲೊಡ್ಡಬಲ್ಲ ತಂಡಗಳು.
ಶ್ರೀಲಂಕಾ
ಈ ಬಾರಿಯ ವಿಶ್ವಕಪ್ ಟೂರ್ನಿಗೆ ಕಾಲಿಟ್ಟಿರುವ ದ್ವೀಪರಾಷ್ಟ್ರ ಶ್ರೀಲಂಕಾ, ಅನುಭವಿ ಹಾಗೂ ಯುವ ಆಟಗಾರರ ಸಮ್ಮಿಶ್ರಣ. ಮಹೇಲ ಜಯವರ್ದನೆ, ಕುಮಾರ ಸಂಗಕ್ಕಾರ, ತಿಲಕರತ್ನೆ ದಿಲ್ಶಾನ್ ಅವರಂಥ ಘಟಾನುಘಟಿಗಳು ತಂಡದಲ್ಲಿದ್ದಾರೆ. ಜಯವರ್ದನೆಗೆ ಇದು 5ನೇ ವಿಶ್ವಕಪ್ ಆದರೆ, ಸಂಗಕ್ಕಾರ ಅವರಿಗೆ ಇದು 4ನೇ ಪದಾರ್ಪಣೆ. ಇನ್ನು, ಇವರ ಜೊತೆಗೆ, ಲಾಹಿರು ತಿರಿಮಾನ್ನೆ, ದಿಮುತ್ ಕರುಣಾರತ್ನೆ, ದಿನೇಶ್ ಚಾಂಡಿಮಲ್ ಅವರು ಬ್ಯಾಟಿಂಗ್ ಲೈನಪ್‍ನ ಆಧಾರ ಸ್ತಂಭಗಳಾದರೆ, ತಿಸಾರಾ ಪೆರೇರಾ, ಜೀವನ್ ಮೆಂಡಿಸ್, ಲಸಿತ್ ಮಾಲಿಂಗ, ರಂಗನಾ ಹೆರಾತ್ ಅವರಂಥ ಬಲಿಷ್ಠ ಬೌಲರ್‍ಗಳು ದಾಳಿಯ ಪ್ರಮುಖ ಅಸ್ತ್ರಗಳಾಗಿದ್ದಾರೆ. ಅದರಲ್ಲೂ ಲಸಿತ್ ಮಾಲಿಂಗ ಅವರ ಅಪಾಯಕಾರಿ ರ್ಯಾರ್ಕರ್ ಗಳು ಎದುರಾಳಿ ತಂಡಗಳಿಗೆ ಮಾರಕ. ಕುಮಾರ ಸಂಗಕ್ಕಾರ ವಿಕೆಟ್ ಕೀಪಿಂಗ್‍ನಲ್ಲಿ 473 ವಿಕೆಟ್ ಉರುಳಿಸಿ ಹೊಸ ವಿಶ್ವದಾಖಲೆ ಬರೆದು ಉತ್ಸಾಹದಲ್ಲಿದ್ದಾರೆ. ಕಳೆದ ವರ್ಷ, ಭಾರತ ವಿರುದ್ಧದ ಏಕದಿನ ಸರಣಿಯಲ್ಲಿ 5-0ರ ಹೀನಾಯ ಸೋಲು
ಅನುಭವಿಸಿದ್ದರೂ, ಮತ್ತೆ ಪುಟಿದೆದ್ದ ಲಂಕಾ ಪಡೆ, ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿಯನ್ನು 5-2 ಅಂತರದಲ್ಲಿ ಗೆದ್ದಿದೆ. ಆದರೆ, ನ್ಯೂಜಿಲೆಂಡ್ ವಿರುದ್ಧದ ಸರಣಿಯನ್ನು 2-4 ಅಂತರದಲ್ಲಿ ಸೋತಿದೆ. 2014ರ ಏಷ್ಯಾ ಕಪ್ ಅನ್ನೂ ಗೆದ್ದಿರುವ ತಂಡದ ಆತ್ಮವಿಶ್ವಾಸ ಉತ್ತಮವಾಗಿಯೇ ಇದೆ. ಎ ಗುಂಪಿನಲ್ಲಿರುವ ಶ್ರೀಲಂಕಾಕ್ಕೆ ಅತಿ ದೊಡ್ಡ ಸವಾಲೆಂದರೆ, ಮಾ. 8ರಂದು ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧ ಪಂದ್ಯ. ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದಟಛಿದ ಪಂದ್ಯಗಳೂ ಸವಾಲಿನವು.
ವೆಸ್ಟ್ ಇಂಡೀಸ್
70ರ, 80ರ ದಶಕಗಳಿಗೆ ಹೋಲಿಸಿದರೆ ಈ ಬಾರಿಯ ವಿಶ್ವಕಪ್ ಟೂರ್ನಿಗೆ ಕಾಲಿಟ್ಟಿರುವ ವೆಸ್ಟ್ ಇಂಡೀಸ್ ತಂಡ ತುಂಬಾ ವಿಭಿನ್ನವಾಗಿದೆ. ಆದರೂ, ಶ್ರೀಲಂಕಾ ತಂಡದಲ್ಲಿರುವಂತೆ ಅನುಭವಿ ಹಾಗೂ ಯುವ ಆಟಗಾರರ ಮಿಶ್ರಣ ಇಲ್ಲಿದೆ. ಬ್ಯಾಟಿಂಗ್‍ನ ಬಹುದೊಡ್ಡ ಶಕ್ತಿ ಜಮೈಕಾದ ಕ್ರಿಸ್ ಗೇಯ್ಲ್ ಇದು ಅವರ ನಾಲ್ಕನೇ ವಿಶ್ವಕಪ್. ಇವರೊಂದಿಗೆ ಡ್ವೈನ್ ಸ್ಮಿತ್ ಅವರ ಉಪಸ್ಥಿತಿ ತಂಡಕ್ಕೆ ಮತ್ತಷ್ಟು ಬಲ ತಂದಿದೆ. ಮಾರ್ಲಾನ್ ಸ್ಯಾಮುಯೇಲ್ ಅವರಿರುವುದು ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಅನ್ನು ಸದೃಢಗೊಳಿಸಿದೆ. ಗೇಯ್ಲ್ ಹಾಗೂ ಸ್ಮಿತ್ ಅವರು ಆರಂಭಿಕ ಬ್ಯಾಟ್ಸ್‍ಮನ್‍ಗಳಾಗಿದ್ದು, ಪ್ರತಿ ಪಂದ್ಯದಲ್ಲೂ ಅವರು ಉತ್ತಮ ಆರಂಭ ತಂದೊಡ್ಡಿದರೆ, ಎದುರಾಳಿಗಳಿಗೆ ವಿಂಡೀಸ್ ಸವಾಲಿನ ಮೊತ್ತ ಪೇರಿಸಬಲ್ಲದು. ಸಾಮಿ ನಂಬರ್ 8ರಲ್ಲಿ ಆಡು ವುದರಿಂದ ಎದುರಾಳಿ ಬೌಲರ್‍ಗಳು ಇನಿಂಗ್ಸ್‍ನ ಅಂತಿಮ ಹಂತದಲ್ಲಿ ನಿಟ್ಟಿಸಿರು ಬಿಡುವಂತಿಲ್ಲ. ಬೌಲಿಂಗ್‍ನಲ್ಲಿ ರಸೆಲ್, ರೋಚ್, ಟೇಲರ್, ಬೆನ್ ಉತ್ತಮ ಪ್ರದರ್ಶನ ನೀಡಬಲ್ಲರು.
ನ್ಯೂಜಿಲೆಂಡ್
ಆಸ್ಟ್ರೇಲಿಯಾ ತಂಡಕ್ಕಿರುವಂತೆ ನ್ಯೂಜಿಲೆಂಡ್ ತಂಡಕ್ಕೂ ಇರುವ ಒಂದು ಸ್ವಾಮ್ಯತೆಯುಳ್ಳ ಅಂಶವೆಂದರೆ, ಅದು ತವರಿನಲ್ಲಿ ವಿಶ್ವಕಪ್ ಕದನಕ್ಕಿಳಿದಿರುವುದು. ಆ ತಂಡದ
ಆತ್ಮವಿಶ್ವಾಸವನ್ನು ಹೆಚ್ಚಿಸುವುದರಲ್ಲಿ ಇದೂ ಒಂದು ಪ್ರಧಾನ ಅಂಶ. ಇದಲ್ಲದೆ, ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಬ್ಯಾಟಿಂಗ್ ಲೈನಪ್ ಉತ್ತಮವಾಗಿದೆ. ಬ್ರೆಂಡನ್ ಮೆಕಲಂ, ಕೇನ್ ವಿಲಿಯಮ್ಸನ್, ಗ್ರ್ಯಾಂಟ್ ಎಲಿಯಟ್, ರಾಸ್ ಟೇಲರ್, ಕೋರಿ ಆ್ಯಂಡರ್ಸನ್, ಲ್ಯೂಕ್ ರೊಂಚಿ, ವೆಟ್ಟೋರಿ ಬ್ಯಾಟಿಂಗ್‍ನ ಪ್ರಮುಖ ಅಸuಉಗಳು. ಇನ್ನು, ಬೌಲಿಂಗ್‍ನಲ್ಲಿ ಕೈಲ್ ಮಿಲ್ಸ್, ಟ್ರೆಂಟ್ ಬೌಲ್ಟ್, ಆ್ಯಡಮ್ ಮಿಲೇನ್, ಟಿಮ್ ಸೌಥೀ ಅವರಂಥ ಪ್ರತಿಭಾನ್ವಿತರಿದ್ದಾರೆ. ಪಿsೀಲ್ಡಿಂಗ್‍ನಲ್ಲೂ ಬ್ರೆಂಡನ್ ಮೆಕಲಂ, ಬೌಲ್ಟ್, ಗುಪ್ಟಿಲ್ , ಕೇನ್ ವಿಲಿಯಮ್ಸನ್ ಅವರಂಥ ಸ್ಟಾರ್‍ಗಳಿದ್ದಾರೆ. ಆದರೆ, ಪರಿಣಾಮಕಾರಿ ಸ್ಪಿನ್ ದಾಳಿ ತಂಡದಲ್ಲಿಲ್ಲ. ಇನ್ನು, ಗುಂಪಿನ ಲೆಕ್ಕಾಚಾರದಲ್ಲಿ ಹೇಳುವುದಾದರೆ, ಎ ಗುಂಪಿನಲ್ಲಿರುವ ಕಿವೀಸ್‍ಗೆ ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್ ತಂಡಗಳೇ ಪ್ರಮುಖ ಎದುರಾಳಿಗಳು. ಈ ಅಗ್ನಿಪರೀಕ್ಷೆ ಗಳನ್ನು ದಾಟಿದಲ್ಲಿ ತಂಡ ಮುಂದಿನ ಹಂತಕ್ಕೆ ಸುಲಭವಾಗಿ ಮುನ್ನುಗ್ಗಬಹುದು.
ಪಾಕಿಸ್ತಾನ
ಈ ಬಾರಿಯ ವಿಶ್ವಕಪ್‍ಗೆ ಕಾಲಿಟ್ಟಿರುವ ಪಾಕಿಸ್ತಾನ ತಂಡದ ಬ್ಯಾಟಿಂಗ್ ಲೈನಪ್ ಉತ್ತಮವಾಗಿದೆ. ಅಹ್ಮದ್ ಶೆಹಜಾದ್, ಮಿಸ್ಬಾ ಉಲ್ ಹಕ್ ಹಾಗೂ ಯೂನಿಸ್ ಖಾನ್ ಅವರು ತಂಡದ ಬ್ಯಾಟಿಂಗ್ ಲೈನ್‍ನ ಬೆನ್ನುಲುಬು. ಇನ್ನು, ಇವರೊಂದಿಗೆ ಆಲ್ರೌಂಡರ್ ಶಾಹಿದ್ ಅಫ್ರಿದಿಯವರ ಉಪಸ್ಥಿತಿಯೂ ತಂಡಕ್ಕಿರುವುದು ಅದರ ಶಕ್ತಿಗಳಲ್ಲೊಂದು.
ಬೌಲಿಂಗ್‍ನಲ್ಲಿ ಮಹಮ್ಮದ್ ಇರ್ಫಾ ನ್ ಹಾಗೂ ವಹಾಬ್ ರಿಯಾಜ್ ಅವರೇ ಪ್ರಮುಖ ಅಸuಉಗಳು. ಆದರೆ, ಕಳೆದ ವರ್ಷದಲ್ಲಿ ತಂಡ ಅಷ್ಟಾಗಿ ಫಾರ್ಮ್ ನಲ್ಲಿರಲಿಲ್ಲ. 2014ರಲ್ಲಿ ಆಡಿರುವ ಒಟ್ಟು 18 ಏಕದಿನ ಪಂದ್ಯಗಳಲ್ಲಿ ಕೇವಲ 6 ಪಂದ್ಯಗಳನ್ನು ಮಾತ್ರ ಪಾಕಿಸ್ತಾನ ಗೆದ್ದುಕೊಂಡಿದೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ 2-3 ಅಂತರದಿಂದ ಸೋತಿದ್ದ ಅದು, ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ 1-3 ಅಂತರದ ಹೀನಾಯ ಸೋಲು ದಾಖಲಿಸಿದೆ. ಟೂರ್ನಿಯನ್ನು ಗೆಲ್ಲುವ ಫೇವರಿಟ್ ತಂಡ ಎಂದೆನಿಸಿಕೊಳ್ಳದಿದ್ದರೂ, ತಕ್ಕಮಟ್ಟಿಗೆ ಹೋರಾಟ ಮಾಡುವಂಥ ತಂಡವೆನ್ನಲಡ್ಡಿಯಿಲ್ಲ. ಸಂಕಷ್ಟದಲ್ಲಿದ್ದಾಗಲೇ ಪುಟಿದೇಳುವ ಸಾಮರ್ಥ್ಯ ಈ ತಂಡಕ್ಕಿರುವುದೇ ಒಂದು ದೊಡ್ಡ ಪ್ಲಸ್‍ಪಾಯಿಂಟ್. ಇನ್ನು, ಬಿ ಗುಂಪಿನಲ್ಲಿ ತಂಡಕ್ಕೆ ದಕ್ಷಿಣ ಆಫ್ರಿಕಾ , ವೆಸ್ಟ್ ಇಂಡೀಸ್, ಭಾರತ ಪ್ರಬಲ ಎದುರಾಳಿಗಳು.
ದೈತ್ಯ ಸಂಹಾರಿಗಳು
ಬಾಂಗ್ಲಾದೇಶ, ಸ್ಕಾಟ್ಲೆಂಡ್, ಐರ್ಲೆಂಡ್, ಯುಎಇ, ಜಿಂಬಾಬ್ವೆಗಳನ್ನೂ ನಿರ್ಲಕ್ಷಿಸುವಂತಿಲ್ಲ ಎನ್ನುವುದಕ್ಕೆ ಈ ಹಿಂದಿನ ವಿಶ್ವಕಪ್ ಟೂರ್ನಿಯ ಕೆಲ ಪಂದ್ಯಗಳ ಫಲಿತಾಂಶವೇ ಸಾಕ್ಷಿ. ಬಾಂಗ್ಲಾದೇಶ: 1999ರ ಆವೃತ್ತಿಯಲ್ಲಿ ಪಾಕಿಸ್ತಾನ ವನ್ನು 62 ರನ್‍ಗಳಿಂದ ಸೋಲಿಸಿತ್ತು. 2007ರ ಆವೃತ್ತಿಯಲ್ಲಿ ಭಾರತ ತಂಡವನ್ನು 5 ವಿಕೆಟ್‍ಗಳಿಂದ ಮಣಿಸಿತ್ತು. ಅಂಕಪಟ್ಟಿಯಲ್ಲಿ ಭಾರತವನ್ನು ಹಿಂದಿಕ್ಕಿ 4 ಅಂಕಗಳಿಂದ ಸೂಪರ್ ಸಿಕ್ಸ್ ಹಂತ ಪ್ರವೇಶಿಸಿತ್ತು. 2011ರಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿತ್ತಲ್ಲದೆ, ಕ್ವಾರ್ಟರ್ ಫೈನಲ್‍ವರೆಗೂ ಸಾಗಿತ್ತು.
ಜಿಂಬಾಬ್ವೆ: 1999, 2003ನೇ ಆವೃತ್ತಿಯಲ್ಲಿ ಸೂಪರ್ ಸಿಕ್ಸ್ ಹಂತಕ್ಕೆ ಕಾಲಿಟ್ಟಿತ್ತು. 1999ರಲ್ಲಿ ಭಾರತ, ದಕ್ಷಿಣ ಆಫ್ರಿಕಾ ತಂಡಗಳನ್ನು ಸದೆಬಡಿದಿತ್ತು. 2003ರಲ್ಲಿ ನಮೀಬಿಯಾ ಹಾಲೆಂಡ್ ವಿರುದ್ಧ 300 ಪ್ಲಸ್ ಮೊತ್ತ ಪೇರಿಸಿತ್ತು. ಐರ್ಲೆಂಡ್: 2007ನೇ ಆವೃತ್ತಿಯಲ್ಲಿ, ಜಿಂಬಾಬ್ವೆ ವಿರುದ್ಧ ಟೈ ಸಾಧಿಸಿ, ಪಾಕಿಸ್ತಾನವನ್ನು ಮಣಿಸಿತ್ತು. 2011ರಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 3 ವಿಕೆಟ್ ಜಯ ಸಾಧಿಸಿತ್ತು.
ಸ್ಕಾಟ್ಲೆಂಡ್, ಯುಎಇ, ಆಫ್ಘಾನಿಸ್ತಾನ ತಂಡಗಳು ಅಂಬೆಗಾಲಿಡುತ್ತಿರುವ ತಂಡಗಳೆಂದು ಪರಿಗಣಿಸ ಲಾಗುತ್ತಿದೆಯಾದರೂ, ಇವೂ ಸಹ ಉತ್ತಮ ಪ್ರದರ್ಶನ ನೀಡಿ ಪ್ರಮುಖ ತಂಡಗಳಿಗೆ ಮಣ್ಣು ಮುಕ್ಕಿಸುವ ಸಾಮರ್ಥ್ಯವುಳ್ಳವು. ಹಾಗಾಗಿ ಇವುಗಳನ್ನು ದೈತ್ಯ ಸಂಹಾರಿಗಳು ಎನ್ನಬಹುದು.
Advertisement