ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಜಯಭೇರಿ

ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.
ಆಮ್ಲಾ ವಿಕೆಟ್ ಪಡೆದ ನ್ಯೂಜಿಲೆಂಡ್ ತಂಡದ ಆಟಗಾರರ ಸಂಭ್ರಮ (ಸಂಗ್ರಹ ಚಿತ್ರ)
ಆಮ್ಲಾ ವಿಕೆಟ್ ಪಡೆದ ನ್ಯೂಜಿಲೆಂಡ್ ತಂಡದ ಆಟಗಾರರ ಸಂಭ್ರಮ (ಸಂಗ್ರಹ ಚಿತ್ರ)

ವೆಲ್ಲಿಂಗ್‌ಟನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ತಂಡ 8 ವಿಕೆಟ್‌ಗಳ ಭರ್ಜರಿ ಜಯ ದಾಖಲಿಸಿದೆ.

ಇಂಗ್ಲೆಂಡ್ ನೀಡಿದ್ದ 123ರನ್ ಗಳ ಸಾಧಾರಣ ಮೊತ್ತವನ್ನು ನ್ಯೂಜಿಲೆಂಡ್ ತಂಡ 2 ವಿಕೆಟ್ ಕಳೆದುಕೊಂಡು ಕೇವಲ 12.3 ಓವರ್‌ಗಳಲ್ಲಿ ಗುರಿ ಮುಟ್ಟಿತು. ತಂಡದ ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಅವರ ಭರ್ಜರಿ ಅರ್ಧಶತಕ ಮತ್ತು ಟೀಮ್ ಸೌಥಿ ಅವರ ಮಾರಕ ಬೌಲಿಂಗ್ ಇಂಗ್ಲೆಂಡ್ ಪಾಲಿಗೆ ಎರವಾಯಿತು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ಕೇವಲ 123 ರನ್ ಗಳಿಸಿ 33.2 ಓವರ್ ಗಳಲ್ಲಿಯೇ ತನ್ನ ಇನ್ನಿಂಗ್ಸ್‌ಗೆ ತೆರೆ ಎಳೆದುಕೊಂಡಿತು. ನ್ಯೂಜಿಲೆಂಡ್ ತಂಡದ ಟೀಮ್ ಸೌಥಿ ಅವರ ಮಾರಕ ಬೌಲಿಂಗ್‌ಗೆ ನಲುಗಿ ಹೋದ ಇಂಗ್ಲೆಂಡ್ ತಂಡದ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಮಧ್ಯಮ ಕ್ರಮಾಂಕದ ಆಟಗಾರ ಜೆ ರೂಟ್ (46ರನ್) ಅವರನ್ನು ಹೊರತು ಪಡಿಸಿ ಇಂಗ್ಲೆಂಡ್ ತಂಡದ ಬೇರಾವುದೇ ಆಟಗಾರ ನ್ಯೂಜಿಲೆಂಡ್ ಬೌಲರ್‌ಗಳಿಗೆ ಪ್ರತಿರೋಧ ತೋರುವ ಧೈರ್ಯ ಮಾಡಲೇ ಇಲ್ಲ. ಅಂತಿಮವಾಗಿ ಇಂಗ್ಲೆಂಡ್ ತಂಡ 123 ರನ್‌ಗಳಿಗೆ ಆಲ್ ಔಟ್ ಆಯಿತು.

ಈ ಸಾಧಾರಣ ಮೊತ್ತವನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ತಂಡಕ್ಕೆ ಬ್ರೆಂಡನ್ ಮೆಕಲಮ್ ಭರ್ಜರಿ ಓಪನಿಂಗ್ ನೀಡಿದರು. ಕ್ರೀಸ್‌ಗೆ ಆಗಮಿಸುತ್ತಿದ್ದಂತೆಯೇ ಇಂಗ್ಲೆಂಡ್ ಬೌಲರ್‌ಗಳನ್ನು ಮನಸೋ ಇಚ್ಛೆ ದಂಡಿಸಿದ ಮೆಕಲಮ್ ನೋಡ ನೋಡುತ್ತಿದ್ದಂತೆಯೇ ಅರ್ಧಶತಕ ಸಿಡಿಸಿದರು.

ಕೇವಲ 18 ಎಸೆತಗಳನ್ನು ಎದುರಿಸಿದ್ದ ಮೆಕಲಮ್ ಬೌಂಡರಿ ಮತ್ತು ಆಕರ್ಷಕ ಸಿಕ್ಸರ್‌ಗಳೊಂದಿಗೆ ಅರ್ಧಶತಕ ಸಿಡಿಸಿ ಸಂಭ್ರಮಿಸಿದರು. ಅರ್ಧ ಶತಕ ಸಿಡಿಸಿದ ಬಳಿಕವೂ ತಣ್ಣಗಾಗದ ಮೆಕಲಮ್ ಮತ್ತೆ ತಮ್ಮ ಬ್ಯಾಟಿಂಗ್ ಅಬ್ಬರವನ್ನು ಮುಂದುವರೆಸಿದ್ದರು. ಈ ಹಂತದಲ್ಲಿ ದಾಳಿಗಿಳಿದ ಇಂಗ್ಲೆಂಡ್‌ನ ವೋಕ್ಸ್ ಅವರು ಮೆಕಲಮ್ ಅವರನ್ನು ಕ್ಲೀನ್ ಬೋಲ್ಡ್ ಮಾಡಿದರು. ಅಂತಿಮವಾಗಿ ಮೆಕಲಮ್ ಕೇವಲ 25 ಎಸೆತಗಳಲ್ಲಿ 77 ರನ್ ಸಿಡಿಸಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಅವರ ಈ ಮೊತ್ತದಲ್ಲಿ ಒಟ್ಟು 8 ಬೌಂಡರಿ ಮತ್ತು 7 ಸಿಕ್ಸರ್ ಗಳಿದ್ದವು.

ಅಂತಿಮವಾಗಿ ನ್ಯೂಜಿಲೆಂಡ್ 2 ವಿಕೆಟ್ ಕಳೆದುಕೊಂಡು 125ರನ್ ಗಳಿಸುವ ಮೂಲಕ ಇಂಗ್ಲೆಂಡ್ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸಿತು. ಮಾರಕ ಬೌಲಿಂಗ್ ಮೂಲಕ ಇಂಗ್ಸೆಂಡ್ ಬ್ಯಾಟಿಂಗ್ ಬೆನ್ನೆಲುಬು ಮುರಿದ ನ್ಯೂಜಿಲೆಂಡ್ ತಂಡದ ಟೀಮ್ ಸೌಥಿ ಅರ್ಹವಾಗಿಯೇ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com