ಎಬಿಡಿವಿಲಿಯರ್ಸ್
ಎಬಿಡಿವಿಲಿಯರ್ಸ್

ಎಬಿಡಿ ವಿಲಿಯರ್ಸ್ 2ನೇ ವೇಗದ ಶತಕ

Published on

ಸಿಡ್ನಿ: ಈ ಬಾರಿಯ ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ದಾಖಲೆಗಳ ಮೇಲೆ ದಾಖಲೆಗಳು ದಾಖಲಾಗುತ್ತಿವೆ. ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಸ್ಫೋಟಕ ಆಟಗಾರ ಎ.ಬಿ.ಡಿವಿಲಿಯರ್ಸ್‌ 2ನೇ ಅತಿ ವೇಗದ ಶತಕ ಸಿಡಿಸಿದ್ದಾರೆ.

ಡಿವಿಲಿಯರ್ಸ್ ಕೇವಲ 52 ಎಸೆತಗಳಲ್ಲಿ ಶತಕ ಸಿಡಿಸಿದ್ದಾರೆ. ಒಟ್ಟಾರೆ 66 ಎಸೆತಗಳಲ್ಲಿ 17 ಬೌಂಡರಿ, 8 ಸಿಕ್ಸರ್‌ಗಳ ನೆರವಿನಿಂದ ಅಜೇಯ 162 ರನ್‌ ಗಳಿಸಿ ಎದುರಾಳಿ ವೆಸ್ಟ್‌ ಇಂಡೀಸ್‌ ಬೌಲರ್‌ಗಳ ಬೆವರಿಳಿಸಿದರು. ಆಕ್ರಮಣಕಾರಿ ಆಟದ ಮೂಲಕ ತಂಡದ ಮೊತ್ತವನ್ನು 50 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 408ಕ್ಕೇರಿಸಿದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ಗೆ ಇಳಿದ ದಕ್ಷಿಣ ಆಫ್ರಿಕಾದ ಆರಂಭ ಅತಿ ಮಂದ ಗತಿಯಲ್ಲಿತ್ತು. ಏಕೆಂದರೆ ತಂಡದ ಮೊತ್ತ 18 ಆಗುವಷ್ಟರಲ್ಲೇ ಡಿ ಕಾಕ್‌ ಔಟಾಗಿದ್ದರಿಂದ ತಂಡ ಆರಂಭಿಕ ಆಘಾತ ಅನುಭವಿಸಿತ್ತು. ಆದರೆ ಬಳಿಕ ಬಂದ ಡು ಪ್ಲೆಸಿಸ್‌ 62 (70), ಹಶೀಂ ಆಮ್ಲಾ 65(88) ಎಚ್ಚರಿಕೆಯ ಆಟ ಆಡಿದರು. ಇದರಿಂದ ತಂಡ ನಿಧಾನವಾಗಿ ಚೇತರಿಸಿಕೊಂಡಿತು.

29ನೇ ಓವರ್‌ನಲ್ಲಿ ಡು ಪ್ಲೆಸಿಸ್‌, ಆಮ್ಲಾ ಪೆವಿಲಿಯನ್‌ ಪೆರೇಡ್‌ ನಡೆಸಿದಾಗ ಕ್ರೀಸ್‌ಗೆ ಆಗಮಿಸಿದ ಯುವ ಆಟಗಾರ ರೋಸ್ಕೋ ರಿಲ್ಲೆ ರಾಸಾವ್ ಹಾಗೂ ನಾಯಕ ಎ.ಬಿ.ಡಿವಿಲಿಯರ್ಸ್‌ ಆಟದ ಚಿತ್ರಣವನ್ನೇ ಬದಲಿಸಿದರು. ಇಬ್ಬರು ಆಟಗಾರರೂ ಏಕ ಪ್ರಕಾರ ವಿಂಡೀಸ್‌ ಬೌಲರ್‌ಗಳನ್ನು ಚೆಂಡಾಡಿದರು. ಇಬ್ಬರೂ 38 ಎಸೆತಗಳಲ್ಲಿ ತಲಾ 60 ರನ್‌ ಸಿಡಿಸಿ ಬಿರುಸಿನ ಆಟದಲ್ಲಿ ಪೈಪೋಟಿ ನಡೆಸಿದರು. ಆದರೆ 61 ರನ್‌ ಗಳಿಸಿದ ರಾಸಾವ್ ಔಟಾದ ಬಳಿಕ ಆಕ್ರಮಣದ ಆಟವನ್ನು ಇನ್ನೊಂದು ಸ್ತರಕ್ಕೆ ಒಯ್ದ ನಾಯಕ, ಮುಂದಿನ 28 ಎಸೆತಗಳಲ್ಲಿ 100 ರನ್‌ ಸಿಡಿಸಿದರು. ಅವರ ಭೀಕರ ಆಕ್ರಮಣಕ್ಕೆ ವಿಂಡೀಸ್‌ ಬೌಲರ್‌ಗಳು ಬೆವರಿಳಿಸಿಕೊಂಡರು.

ವೆಸ್ಟ್‌ ಇಂಡೀಸ್ ಪರ ವೇಗಿ ರಸೆಲ್‌, ಕ್ರಿಸ್‌ ಗೇಲ್‌ ತಲಾ 2 ವಿಕೆಟ್‌ ಪಡೆದರು. ಹೋಲ್ಡರ್‌ 1 ವಿಕೆಟ್‌ ಪಡೆದಿದ್ದಾರೆ.

X
Open in App

Advertisement

X
Kannada Prabha
www.kannadaprabha.com