
ಆಕ್ಲೆಂಡ್: ವಿಶ್ವಕಪ್ ಪಂದ್ಯಾವಳಿಯಲ್ಲಿಂದು ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್ ನಡುವಿನ ಕದನದಲ್ಲಿ ಆಸ್ಟ್ರೇಲಿಯಾ ಪರಾಭವಗೊಂಡಿದೆ. ಪ್ರಸ್ತುತ ಟೂರ್ನಿಯನ್ನು ಗೆಲ್ಲುವ ಹಾಟ್ ಫೇವರಿಟ್‌ಗಳೆಂದೇ ಬಿಂಬಿತವಾಗಿರುವ ಅತಿಥೇಯ ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಪರಸ್ಪರ ಮುಖಾಮುಖಿಯಾಗಿದ್ದು, ಉಭಯ ಪಂದ್ಯಗಳ ನಡುವೆ ರೋಚಕಕಾರಿ ಪಂದ್ಯ ನಡೆದಿತ್ತು.
ಆಸ್ಟ್ರೇಲಿಯಾವನ್ನು ಮಾರಕ ಬೌಲಿಂಗ್ ಮೂಲಕ ಕಂಗಾಲು ಮಾಡಿದ ನ್ಯೂಜಿಲ್ಯಾಂಡ್ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುತ್ತೆ ಎಂದು ಮೊದಲಿಗೆ ಅನಿಸಿದ್ದರೂ, ಆಸಿಸ್ ಮಾರಕ ದಾಳಿಯ ಮುಂದೆ ನ್ಯೂಜಿಲ್ಯಾಂಡ್‌ಗೆ ಸುಲಭವಾಗಿ ಜಯ ಪ್ರಾಪ್ತವಾಗಲಿಲ್ಲ. ನ್ಯೂಜಿಲ್ಯಾಂಡ್‌ನ ವಿಲಿಯಂಸನ್ ಮಾತ್ರ ಏಕೈಕ ಹೋರಾಟಗಾರನಂತೆ ಬ್ಯಾಟಿಂಗ್ ಮಾಡಿದ್ದು, ಆಸಿಸ್ ವಿರುದ್ಧ 1 ವಿಕೆಟ್ ಗೆಲುವಿಗೆ ಕಾರಣರಾದರು.
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 3 ನೇ ಓವರ್‌ನಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತ್ತು. ಆಸ್ಟ್ರೇಲಿಯಾ ಪರ ಹ್ಯಾಡಿನ್ 43, ವಾರ್ನರ್ 34, ವಾಟ್ಸನ್ 23, ಫಿಂಚ್ 14, ಕ್ಲಾರ್ಕ್ 12 ರನ್ ಗಳಿಸಿದ್ದು ಇನ್ನುಳಿದವರು ಯಾರೂ 5 ರಿಂದ ಹೆಚ್ಚು ಗಳಿಸಲು ಸಾಧ್ಯವಾಗಲಿಲ್ಲ. ಪರಿಣಾಮ ಆಸಿಸ್ 32. 2 ಓವರ್‌ಗಳಲ್ಲಿ 151 ರನ್ ಗಳಿಸಿ ಆಲೌಟ್ ಆಯಿತು.
ನ್ಯೂಜಿಲ್ಯಾಂಡ್ ಪರ ಟಿಎ ಬೌಲ್ಟ್ 5 ವಿಕೆಟ್ ಪಡೆದರೆ ಸೌತೀ ಮತ್ತು ವೆಟ್ಟೋರಿ ತಲಾ 2 ಹಾಗೂ ಆ್ಯಂಡ್ರಸನ್ ಒಂದು ವಿಕೆಟ್ ಪಡೆದಿದ್ದಾರೆ.
ಆಸ್ಟ್ರೇಲಿಯಾದ 152 ರನ್‌ಗಳ ಮೊತ್ತವನ್ನು ಬೆನ್ನತ್ತಿದ ನ್ಯೂಜಿಲ್ಯಾಂಡ್ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಕಂಡು ಬಂದರೂ 4 ನೇ ಓವರ್‌ನಲ್ಲಿ ಗುಪ್ಟಿಲ್ ವಿಕೆಟ್ ಕಳೆದುಕೊಳ್ಳುವ ಮೂಲಕ ಮುಗ್ಗರಿಸಿತು. ಮ್ಯಕೆಲಮ್ ಅರ್ಧ ಶತಕ ಬಾರಿಸಿ 8 ನೇ ಓವರ್‌ನಲ್ಲಿ ಔಟಾದಾಗ ನ್ಯೂಜಿಲ್ಯಾಂಡ್ ಸ್ಕೋರ್ 78 ಆಗಿತ್ತು. 9 ನೇ ಓವರ್‌ನಲ್ಲಿ ಟೈಲರ್ (1)ಮತ್ತು ಇಲಿಯಟ್ (0) ವಿಕೆಟ್ ಒಟ್ಟೊಟ್ಟಿಗೆ ಉರುಳಿದಾಗ ತಂಡಕ್ಕೆ ಆಧಾರವಾಗಿ ನಿಂತದ್ದು ವಿಲಿಯಂಸನ್. ವಿಲಿಯಂಸ್‌ಗೆ ಆ್ಯಂಡರ್‌ಸನ್ ಸಾಥ್ ನೀಡುವ ಮೂಲಕ ತಂಡದ ಸ್ಕೋರ್ ಹೆಚ್ಚಿಸಿದರು. 26 ರನ್ ಗಳಿಸಿದ ಆ್ಯಂಡ್ರಸನ್ ಮ್ಯಾಕ್ಸ್‌ವೆಲ್ ಬಾಲ್‌ಗೆ ಕ್ಯಾಚಿತ್ತು ಫೆವಿಲಿಯನ್‌ಗೆ ನಡೆದಾಗ ರೋಂಚಿ ಕ್ರೀಸ್‌ಗಿಳಿದಿದ್ದು, ಏಳು ಬಾಲ್‌ಗಳಲ್ಲಿ 6 ರನ್ ಗಳಿಸಿ ಔಟಾದರು.
ಕೊನೆಗೆ ವಿಲಿಯಂಸ್‌ಗೆ ಸಾಥ್ ನೀಡಿದ್ದು ವಿಟ್ಟೋರಿ. ಆದರೆ ವಿಟ್ಟೋರಿ ಕೂಡಾ 2 ರನ್ ಗಳಿಸಿ ಕ್ಯುಮಿನ್ಸ್‌ಗೆ ವಿಕೆಟ್ ಒಪ್ಪಿಸಿದರು. ತದನಂತರ ಬಂದ ಮಿಲ್ನೆ ಮತ್ತು ಸೌತೀ ಶೂನ್ಯ ಸಂಪಾದನೆ ಮಾಡಿ ಪೆವಿಲಿಯನ್‌ಗೆ ಮರಳಿದರು. ಇವರ ನಂತರ ಬೌಲ್ಟ್ ಕ್ರೀಸಿಗಿಳಿದಿದ್ದರೂ ರನ್ ಗಳಿಸಲು ಸಾಧ್ಯವಾಗಿಲಿಲ್ಲ. ಈ ಪಂದ್ಯದಲ್ಲಿ ವಿಲಿಯಂಸ್ ಮಾತ್ರ ಯುದ್ಧರಂಗದಲ್ಲುಳಿದ ಏಕೈಕ ಹೋರಾಟಗಾರನಂತೆ ಘರ್ಜಿಸಿ ಬ್ಯಾಟಿಂಗ್ ಮಾಡಿದ್ದು 45 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ.
ಆದಾಗ್ಯೂ, ಆಸ್ಟ್ರೇಲಿಯಾ ಬೌಲರ್‌ಗಳ ದಾಳಿಗೆ ತುತ್ತಾದ ನ್ಯೂಜಿಲ್ಯಾಂಡ್ ಪ್ರಯಾಸದಿಂದ 23.1 ಓವರ್‌ನಲ್ಲಿ 9 ವಿಕೆಟ್ ನಷ್ಟದಲ್ಲಿ 152 ರನ್ ಗಳಿಸುವ ಮೂಲಕ ಗೆಲವು ಸಾಧಿಸಿಕೊಂಡಿತು. ಈ ಮೂಲಕ ಆಸ್ಟ್ರೇಲಿಯಾ ವಿಶ್ವಕಪ್ ಪಂದ್ಯದಲ್ಲಿ ಮೊದಲ ಬಾರಿ ಸೋಲಿನ ಕಹಿಯುಂಡಿತು .
ಆಸ್ಟ್ರೇಲಿಯಾ ಪರ ಸ್ಟಾರ್ಕ್ 6 ವಿಕೆಟ್ ಗಳಿಸಿದರೆ ಕ್ಯುಮಿನ್ಸ್ -2 ಮತ್ತು ಮ್ಯಾಕ್ಸ್‌ವೆಲ್ ಒಂದು ವಿಕೆಟ್ ಗಳಿಸಿದ್ದಾರೆ.
Advertisement