ಕ್ರಿಕೆಟಿಗರಿಗೆ ಆಸೀಸ್ ಪ್ರಧಾನಿ ಆತಿಥ್ಯ

ಹೊಸ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಟೋನಿ ಅಬಾಟ್...
ಆಸ್ಟ್ರೇಲಿಯಾ ಪ್ರಧಾನಮಂತ್ರಿ  ಟೋನಿ ಅಬಾಟ್ ಏರ್ಪಡಿಸಿದ್ದ ಈ ಚಹಾ ಕೂಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು
ಆಸ್ಟ್ರೇಲಿಯಾ ಪ್ರಧಾನಮಂತ್ರಿ ಟೋನಿ ಅಬಾಟ್ ಏರ್ಪಡಿಸಿದ್ದ ಈ ಚಹಾ ಕೂಟದಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಆಟಗಾರರು

ಸಿಡ್ನಿ: ಹೊಸ ವರ್ಷಾಚರಣೆಯ ಶುಭ ಸಂದರ್ಭದಲ್ಲಿ ಆಸ್ಟ್ರೇಲಿಯಾದ ಪ್ರಧಾನಮಂತ್ರಿ ಟೋನಿ ಅಬಾಟ್, ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರಿಗೆ ಗುರುವಾರ ಮಧ್ಯಾಹ್ನ ಚಹಾ ಕೂಟ ಏರ್ಪಡಿಸಿದ್ದರು.

ಕಿರಿಬಿಲ್ಲಿ ಹೌಸ್‌ನಲ್ಲಿರುವ ತಮ್ಮ ಎರಡನೇ ಅಧಿಕೃತ ಕಚೇರಿಯಲ್ಲಿ ಟೋನಿ ಅಬಾಟ್ ಏರ್ಪಡಿಸಿದ್ದ ಈ ಚಹಾ ಕೂಟದಲ್ಲಿ ಎರಡೂ ತಂಡಗಳ ಆಟಗಾರರು ಪಾಲ್ಗೊಂಡಿದ್ದರು. ಅಚ್ಚರಿ ಎಂದರೆ, ಎರಡು ದಿನಗಳ ಹಿಂದೆಯಷ್ಟೇ ಟೆಸ್ಟ್ ಕ್ರಿಕೆಟ್‌ಗೆ ದಿಢೀರನೆ ವಿದಾಯ ಹೇಳಿದ್ದ ಮಹೇಂದ್ರ ಸಿಂಗ್ ಧೋನಿ ಮಾತ್ರ ಈ ಚಹಾ ಕೂಟದಲ್ಲಿ ಭಾಗವಹಿಸಿದ್ದರೋ ಇಲ್ಲವೋ ಎಂಬುದು ಮಾತ್ರ ಸ್ಪಷ್ಟವಾಗಿ ತಿಳಿದುಬಂದಿಲ್ಲ.

ಏಕೆಂದರೆ, ಆಸ್ಟ್ರೇಲಿಯಾ ಪ್ರಧಾನಿಯವರ ಜೊತೆ ಭಾರತದ ಆಟಗಾರರು ತೆಗೆಸಿಕೊಂಡ ಛಾಯಾಚಿತ್ರದಲ್ಲಿ ಧೋನಿ ಇಲ್ಲ. ಚಹಾ ಕೂಟದಲ್ಲಿ ತೆಗೆಯಲಾದ ನಾಲ್ಕು ಚಿತ್ರಗಳುನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಹಾಕಿದೆ. ಇದರಲ್ಲಿ ಇಬ್ಬರೂ ನಾಯಕರಾದ ವಿರಾಟ್ ಕೊಹ್ಲಿ ಮತ್ತು ಸ್ಟೀವನ್ ಸ್ಮಿತ್ ಅವರು ಅಬಾಟ್ ಅವರೊಂದಿಗಿರುವ ಚಿತ್ರವೂ ಇದೆ.

ಮಿಕ್ಕಂತೆ ಭಾರತ ತಂಡದ ಆಟಗಾರರು ಅಬಾಟ್ ಅವರೊಂದಿಗೆ ಚಿತ್ರದಲ್ಲಿದ್ದಾರೆ. ಭಾರತ ತಂಡದ ಆಟಗಾರರು ನೀಲಿ ಬಣ್ಣದ ಸಾಮಾನ್ಯ ಉಡುಪು ಧರಿಸಿದ್ದರು.

ಅತಿಥೇಯ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಇದೇ ಜನವರಿ 6ರಿಂದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆರಂಭವಾಗಲಿರುವ ನಾಲ್ಕನೇ ಹಾಗೂ ಅಂತಿಮ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಮೊದಲೆರಡೂ ಪಂದ್ಯಗಳನ್ನು ಗೆದ್ದಿರುವ ಆಸ್ಟ್ರೇಲಿಯಾ 2-0 ಮುನ್ನಡೆಯೊಂದಿಗೆ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ. ಮೆಲ್ಬೋರ್ನ್‌ನಲ್ಲಿ ನಡೆದ ಮೂರನೇ ಟೆಸ್ಟ್ ಡ್ರಾದಲ್ಲಿ ಕೊನೆಗೊಂಡಿತ್ತು.

ಅಂತಿಮ ಟೆಸ್ಟ್‌ನಲ್ಲಿ ತಂಡ ಮುನ್ನಡೆಸಲಿರುವ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ ಕಳೆದ ಬುಧವಾರ ಸಿಡ್ನಿಗೆ ಆಗಮಿಸಿದೆ. ನಾಲ್ಕನೇ ಟೆಸ್ಟ್ ಆರಂಭಕ್ಕೆ ಇನ್ನೂ ನಾಲ್ಕು ದಿನಗಳು ಇರುವುದರಿಂದ ಟೀಂ ಇಂಡಿಯಾ ಆಟಗಾರರಿಗೆ ಉತ್ತಮ ರೀತಿಯ ತಯಾರಿ ದೃಷ್ಟಿಯಿಂದ ಹೆಚ್ಚಿನ ಸಮಯ ಸಿಕ್ಕಂತಾಗಿದೆ.

ಅಂತಿಮ ಪಂದ್ಯಕ್ಕೂ ಮುನ್ನ ಧೋನಿ ಹಿಂತಿರುಗುವರೇ?

ಏಕದಿನ ತ್ರಿಕೋನ ಸರಣಿ ಆರಂಭವಾಗಲು ಇನ್ನೂ 16 ದಿನಗಳು ಉಳಿದಿವೆ. ಹಾಗಾಗಿ, ಮಹೇಂದ್ರ ಸಿಂಗ್ ಧೋನಿ ನಾಲ್ಕನೇ ಟೆಸ್ಟ್ ಆರಂಭವಾಗುವ ಮುನ್ನವೇ ಕೆಲ ದಿನಗಳ ವಿಶ್ರಾಂತಿಗಾಗಿ ಭಾರತಕ್ಕೆ ಹಿಂತಿರುಗುವ ಸಾಧ್ಯತೆಯಿದೆ. ಆದರೆ, ಬಿಸಿಸಿಐ ಈ ವಿಷಯವನ್ನು ಖಚಿತಪಡಿಸಿಲ್ಲ. ಧೋನಿ, ತವರಿಗೆ ಹಿಂತಿರುಗಲಿದ್ದಾರೆಯೇ ಅಥವಾ ತಂಡದ ಜೊತೆಗೆಯೇ ಇರಲಿದ್ದಾರೆ ಎಂಬ ಬಗ್ಗೆ ಮಂಡಳಿ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ. ಆದರೆ, ಆಸ್ಟ್ರೇಲಿಯಾದ ಕೆಲ ಮಾಧ್ಯಮಗಳಲ್ಲಿ ಧೋನಿ, ಭಾರತಕ್ಕೆ ಹಿಂತಿರುಗಲಿದ್ದಾರೆ ಎಂಬುದಾಗಿ ವರದಿಗಳು ಬಂದಿವೆ. ಭಾರತ, ಆಸ್ಟ್ರೇಲಿಯಾ ಅಲ್ಲದೆ, ಇಂಗ್ಲೆಂಡ್ ತಂಡಗಳ ಒಳಗೊಂಡಂತೆ ತ್ರಿಕೋನ ಏಕದಿನ ಸರಣಿ ಜನವರಿ 18ರಿಂದ ಆರಂಭವಾಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com