ಬದುಕಿ ಬರಲಿಲ್ಲ ಬಿಯಾಂಚಿ; ಕಂಬನಿ ಮಿಡಿದ ಫಾರ್ಮುಲಾ ಲೋಕ

ವಿಶ್ವ ಕ್ರೀಡಾಲೋಕದಲ್ಲಿ ಬೆಳಗಬೇಕಿದ್ದ ಜ್ಯೋತಿಯೊಂದು ಆರಿಹೋಗಿದೆ. ಕಳೆದ ವರ್ಷ ಜಪಾನ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಅಪಘಾತಕ್ಕೀಡಾಗಿ ಕಳೆದ ಒಂಭತ್ತು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಫ್ರಾನ್ಸ್ ನ ಉದಯೋನ್ಮುಖ ಹಾಗೂ ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ...
ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ
ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ

ನೈಸ್ (ಫ್ರಾನ್ಸ್): ವಿಶ್ವ ಕ್ರೀಡಾಲೋಕದಲ್ಲಿ ಬೆಳಗಬೇಕಿದ್ದ ಜ್ಯೋತಿಯೊಂದು ಆರಿಹೋಗಿದೆ. ಕಳೆದ ವರ್ಷ ಜಪಾನ್ ಗ್ರ್ಯಾನ್ ಪ್ರೀ ರೇಸ್ನಲ್ಲಿ ಅಪಘಾತಕ್ಕೀಡಾಗಿ ಕಳೆದ ಒಂಭತ್ತು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಫ್ರಾನ್ಸ್ ನ ಉದಯೋನ್ಮುಖ ಹಾಗೂ ಯುವ ಫಾರ್ಮುಲಾ ಒನ್ ಚಾಲಕ ಜೂಲ್ಸ್ ಬಿಯಾಂಚಿ ಇಹಲೋಕ ತ್ಯಜಿಸಿದ್ದಾರೆ.

ಕಳೆದ ವರ್ಷ ಅಕ್ಟೋಬರ್ 5ರಂದು ನಡೆದಿದ್ದ ರೇಸ್ನಲ್ಲಿ 25 ವರ್ಷದ ಬಿಯಾಂಚಿ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿತ್ತು. ತಲೆಗೆ ತೀವ್ರವಾದ ಪೆಟ್ಟು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದ ಅವರನ್ನು, ರೇಸ್ ನಡೆದ ಸ್ಥಳವಾದ ಸುಜೂಕಾದ ಹತ್ತಿರದಲ್ಲಿರುವ ಖಾಸಗಿ ಆಸ್ಪತ್ರೆಯೊಂದರದಲ್ಲಿ ದಾಖಲಿಸಲಾಗಿತ್ತು. ಆನಂತರ, ಅವರನ್ನು ಅವರ ಹುಟ್ಟೂರಾದ ಫ್ರಾನ್ಸ್ ನ  ನೈಸ್‍ನಲ್ಲಿರುವ ಆಸ್ಪತ್ರೆಗೆ ಸೇರಿಸಲಾಗಿತ್ತು.

ಮನೆಗೆ ಸಮೀಪದಲ್ಲೇ ಇದ್ದ ಆಸ್ಪತ್ರೆಯಲ್ಲಿ ಅವರಿಗೆ ಶುಶ್ರೂಷೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಶುಕ್ರವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆಂದು ಫಸ್ಟ್ ಪೋಸ್ಟ್ ವರದಿ ಮಾಡಿದೆ. ಬಿಯಾಂಚಿ ಅವರ ನಿಧನಕ್ಕೆ ಫಾರ್ಮುಲಾ ಒನ್ ಒಕ್ಕೂಟದ ಮುಖ್ಯಸ್ಥ ಬೆರ್ನಿ ಎಕ್ಲೆಸ್ಟೋನ್ ಸೇರಿದಂತೆ ಫಾರ್ಮುಲಾ ಒನ್ ಲೋಕವೇ ಶೋಕ ವ್ಯಕ್ತಪಡಿಸಿದೆ.

ಹೀಗಾಗಿತ್ತು ಅಪಘಾತ
ಜಪಾನ್ ಜಿಪಿ ನಡೆಯುವುದಕ್ಕೆ ಕೆಲವೇ ಗಂಟೆಗಳ ಮುನ್ನ ಅಲ್ಲಿ ಮಳೆ ಸುರಿದಿತ್ತು. ಹಾಗಾಗಿ ರೇಸ್ ನಡೆಯಬೇಕಿದ್ದ ಟ್ರ್ಯಾಕ್ ಒದ್ದೆಯಾಗಿತ್ತು. ಅಲ್ಲದೆ, ಕಾರ್ಮೋಡಗಳು ದಟ್ಟೈಸಿದ್ದರಿಂದ ಮಬ್ಬುಗತ್ತಲೆಯಂಥ ವಾತಾವರಣ ಸೃಷ್ಟಿಯಾಗಿತ್ತು. ರೇಸ್ ಆರಂಭವಾದ ಕೆಲ ನಿಮಿಷಗಳ ನಂತರ, ಅವರಿಗಿಂತ ಮುಂದೆ ಸಾಗುತ್ತಿದ್ದ ಆ್ಯಡ್ರಿಯನ್ ಸುಟಿಲ್ ಓಡಿಸುತ್ತಿದ್ದ ಸೌಬೆರ್ ತಂಡದ ಕಾರು ಅಪಘಾತಕ್ಕೀಡಾಯಿತು.

ಮಿಂಚಿನ ವೇಗದಲ್ಲಿದ್ದ ಬಿಯಾಂಚಿ, ಧುತ್ತೆಂದು ಸಂಭವಿಸಿದ ಈ ಅಪಘಾತದಿಂದ ವಿಚಲಿತರಾದರಲ್ಲದೆ, ತಾನು ಓಡಿಸುತ್ತಿದ್ದ ಮರಸ್ಸಿಯಾ ತಂಡದ ಕಾರು ರಸ್ತೆ ಮಧ್ಯೆದಲ್ಲೇ ನಿಂತಿದ್ದ ಸುಟಿಲ್ ಅವರ ಕಾರಿಗೆ ಗುದ್ದುವುದನ್ನು ತಪ್ಪಿಸಿಲು ಪಕ್ಕಕ್ಕೆ ತಿರುಗಿಸಿಕೊಂಡರು. ಆದರೆ, ರಸ್ತೆ ಒದ್ದೆಯಾಗಿದ್ದರಿಂದ ಅವರ ನಿಯಂತ್ರಣ ಕಳೆದುಕೊಂಡ ಕಾರು, ಟ್ರ್ಯಾಕ್ ಪಕ್ಕದಲ್ಲೇ ನಿಂತಿದ್ದ ರಿಕವರಿ ಟ್ರಾಕ್ಟರ್‍ಗೆ ಬಲವಾಗಿ ಬಂದು ಅಪ್ಪಳಿಸಿತು. ಸಂಪೂರ್ಣವಾಗಿ ಜಜ್ಜಿ ಹೋಗಿದ್ದ ಕಾರಿನಲ್ಲಿ ಪ್ರಜ್ಞೆ ಶೂನ್ಯರಾಗಿ ಬಿದ್ದಿದ್ದ ಬಿಯಾಂಚಿ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ಶುಮಾಕರ್ ಸಹ ಚೇತರಿಸಿಕೊಂಡಿಲ್ಲ
2013ರ ಡಿಸೆಂಬರ್ 29ರಂದು ಲೌಸೆನ್ನೆಯಲ್ಲಿ ಸ್ಕೀಯಿಂಗ್ ಕ್ರೀಡೆಯಲ್ಲಿ ಪಾಲ್ಗೊಂಡಿದ್ದ ಖ್ಯಾತ ಎಫ್1 ಆಟಗಾರ ಹಾಗೂ ವಿಶ್ವದ ಮಾಜಿ ಚಾಂಪಿಯನ್ ಜರ್ಮನಿಯ ಮೈಕಲ್ ಶೂಮಾಕರ್ ಸಹ ಅಪಘಾತಕ್ಕೀಡಾಗಿದ್ದರು. ಆಗಿನಿಂದ ಈಗಿನವರೆಗೂ ಅವರು ಕೋಮಾ ಸ್ಥಿತಿಯಲ್ಲಿದ್ದಾರೆ. ಕಳೆದ ವರ್ಷ ಸೆಪ್ಟಂಬರ್ನಲ್ಲಿ ಅವರನ್ನು ಆಸ್ಪತ್ರೆಯಿಂದ ಮನೆಗೆ ತರಲಾಗಿತ್ತು ಹಾಗೂ ಅಲ್ಲೇ ಚಿಕಿತ್ಸೆಯನ್ನು ಮುಂದುವರಿಸಲಾಗಿತ್ತು. ಆದರೆ, ನವೆಂಬರ್‍ನಲ್ಲಿ ಅವರು ಪಾಶ್ರ್ವವಾಯುವಿಗೆ ಒಳಗಾಗಿದ್ದು, ಈಗಲೂ ಅದೇ ಸ್ಥಿತಿಯಲ್ಲಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com