
ನವದೆಹಲಿ: ಭಾರತದ ಪುರುಷರ ದೇಶೀಯ ಹಾಕಿ ತಂಡ ಕೋಚ್ ಪೌಲ್ ವಾನ್ ಆಸ್ ರನ್ನು ಹಾಕಿ ಇಂಡಿಯಾ ಸೋಮವಾರ ವಜಾಗೊಳಿಸಿದೆ.
ಭಾರತೀಯ ಹಾಕಿ ತಂಡದ ಪ್ರಧಾನ ಕೋಚ್ ಆಗಿರುವ ಪೌಲ್, ಕೋಚ್ ಸ್ಥಾನದಿಂದ ವಜಾಗೊಳಿಸಿರುವ ಸುದ್ದಿಯನ್ನು ದೃಢೀಕರಿಸಿದ್ದಾರೆ.
5 ತಿಂಗಳ ಹಿಂದೆಯಷ್ಟೇ ಪೌಲ್ ಹಾಕಿ ತಂಡದ ಪ್ರಧಾನ ಕೋಚ್ ಆಗಿ ನೇಮಕಗೊಂಡಿದ್ದರು. ಇದೀಗ ಪೌಲ್‌ರ ಅನುಪಸ್ಥಿತಿ 2016ರ ಒಲಿಂಪಿಕ್ಸ್ ತಯಾರಿಯನ್ನು ಭಾದಿಸಲಿದೆ ಎಂದು ಹಾಕಿ ಆಟಗಾರರು ಹೇಳಿದ್ದಾರೆ.
ಡಚ್ ಮೂಲದವರಾಗಿರುವ ಪೌಲ್ ಇತ್ತೀಚೆಗೆ ಬೆಲ್ಜಿಯಂನಲ್ಲಿ ನಡೆದ ವರ್ಲ್ಡ್ ಹಾಕಿ ಲೀಗ್ ಸೆಮಿಫೈನಲ್‌ನಲ್ಲಿ ಭಾರತೀಯ ತಂಡದ ಪ್ರದರ್ಶನದ ಬಗ್ಗೆ ವರದಿ ಸಲ್ಲಿಸಲು ವಿಫಲವಾಗಿರುವ ಕಾರಣ ಅವರನ್ನು ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಅದೇ ವೇಳೆ ವರ್ಲ್ಡ್ ಲೀಗ್ ಸೆಮಿಫೈನಲ್ಸ್ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಕ್ವಾರ್ಟರ್ ಫೈನಲ್ ಪಂದ್ಯ ನಡೆಯುತ್ತಿದ್ದ ವೇಳೆ ಪೌಲ್, ಹಾಕಿ ಇಂಡಿಯಾ ಅಧ್ಯಕ್ಷ ನರಿಂದರ್ ಭಾತ್ರಾ ಅವರೊಂದಿಗೆ ಜಗಳ ಮಾಡಿಕೊಂಡಿದ್ದರು. ಭಾತ್ರಾ ಅವರು ಪಂದ್ಯವಾಡುತ್ತಿದ್ದ ಆಟಗಾರರನ್ನು ಕಣಕ್ಕಿಳಿದು ಬೈದದ್ದಕ್ಕೆ ಪೌಲ್ ಅವರು ಮಧ್ಯಪ್ರವೇಶ ಮಾಡಿ ಕಣದಿಂದ ಹೊರಗೆ ಹೋಗುವಂತೆ ಭಾತ್ರಾ ಅವರಿಗೆ ಸೂಚಿಸಿದ್ದರು. ಈ ವೇಳೆ ಭಾತ್ರಾ ಮತ್ತು ಪೌಲ್ ನಡುವೆ ಮಾತಿನ ಚಕಮಕಿ ನಡೆದಿತ್ತು.
ಸಾರ್ವಜನಿಕವಾಗಿ ಪೌಲ್ ತಮ್ಮೊಂದಿಗೆ ಜಗಳವಾಡಿದ್ದಕ್ಕೆ ಭಾತ್ರಾ ಮುನಿಸಿಕೊಂಡಿದ್ದರು. ಪೌಲ್ ಅವರನ್ನು ವಜಾಗೊಳಿಸಲು ಭಾತ್ರಾ ಜತೆಗಿನ ಈ ಮುನಿಸು ಕಾರಣವಾಗಿರಬಹುದು ಎಂದು ಕೆಲವೊಂದು ಮಾಧ್ಯಮಗಳು ವರದಿ ಮಾಡಿವೆ.
ಏನತ್ಮಧ್ಯೆ, ಹಿರಿಯ ಅಧಿಕಾರಿಗಳ ನಡುವೆ ಏನೇ ಜಗಳ ಇರಲಿ, ಕೊನೆಯ ಕ್ಷಣದಲ್ಲಿ ಕೋಚ್‌ನ್ನು ಬದಲಾಯಿಸುವುದರಿಂದ ಒಲಿಂಪಿಕ್ಸ್ ಗೆ ತಯಾರಿ ನಡೆಸುವ ಆಟಗಾರರ ಪ್ರದರ್ಶನದ ಮೇಲೆ ಪ್ರಭಾವ ಬೀರುತ್ತದೆ ಎಂದು ಹಾಕಿ ತಂಡದ ಹಿರಿಯ ಸದಸ್ಯರೊಬ್ಬರು ಮಾಧ್ಯಮದವರಲ್ಲಿ ಹೇಳಿದ್ದಾರೆ.
Advertisement