ಭಾರತಕ್ಕೆ ಸೋಲಿನ ಕಹಿ

ಪಂದ್ಯದ ಆರಂಭಿಕ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಬಿಟ್ಟುಕೊಟ್ಟ ಭಾರತ ತಂಡ 2018ರ ಫಿಫಾ ವಿಶ್ವಕಪ್ ಪ್ರಾಥಮಿಕ ಅರ್ಹತಾ .....
ಭಾರತ- ಓಮನ್ ತಂಡಗಳ ಸೆಣಸಾಟ
ಭಾರತ- ಓಮನ್ ತಂಡಗಳ ಸೆಣಸಾಟ

ಬೆಂಗಳೂರು: ಪಂದ್ಯದ ಆರಂಭಿಕ ನಿಮಿಷದಲ್ಲಿ ಎದುರಾಳಿ ತಂಡಕ್ಕೆ ಗೋಲು ದಾಖಲಿಸುವ ಅವಕಾಶ ಬಿಟ್ಟುಕೊಟ್ಟ ಭಾರತ ತಂಡ 2018ರ ಫಿಫಾ ವಿಶ್ವಕಪ್ ಪ್ರಾಥಮಿಕ ಅರ್ಹತಾ ಸುತ್ತಿನ ಪಂದ್ಯದಲ್ಲಿ ಓಮನ್ ವಿರುದ್ಧ ಸೋಲನುಭವಿಸಿದೆ.

ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಡಿ ಗುಂಪಿನ ಪಂದ್ಯದಲ್ಲಿ ಓಮನ್ ತಂಡ 2-1 ಗೋಲುಗಳ ಅಂತರದಲ್ಲಿ ಗೆಲುವು ದಾಖಲಿಸಿತು. ಮೈದಾನದಲ್ಲಿ  19, 315 ಸಾವಿರ ಪ್ರೇಕ್ಷಕರ ಬೆಂಬಲದೊಂದಿಗೆ  ಕಣಕ್ಕಿಳಿದ ಭಾರತ ತಂಡ ಉತ್ತಮ ಹೋರಾಟ ನೀಡಿತಾದರೂ ಪ್ರವಾಸಿ ತಂಡದ ಆಕ್ರಮಣದ ಮುಂದೆ ಎಡವಿತು.

ಆರಂಭದಲ್ಲೇ ಹಿನ್ನಡೆ: ಭಾರತ ತಂಡ ನಿರೀಕ್ಷಿತ ಮಟ್ಟದಲ್ಲಿ ಆರಂಭ ಪಡೆಯಲಿಲ್ಲ. ಆರಂಭಿಕ 20 ಸೆಕೆಂಡ್ ಗಳಲ್ಲಿ ಭಾರತ ತಂಡದ ರಕ್ಷಣಾತ್ಮಕ  ವಿಭಾಗವನ್ನು ಮೆಟ್ಟಿನಿಂತ ಓಮನ್ ಆಟಗಾರರು ಗೋಲು ದಾಖಲಿಸುವ ಶುಭಾರಂಭ ಮಾಡಿದರು. ಈ ಮೂಲಕ ಪ್ರವಾಸಿ ತಂಡ ಮೊದಲ ನಿಮಿಷದಲ್ಲೇ ಆತಿಥೇಯರ ಮೇಲೆ ಬಿಗಿ ಹಿಡಿತ ಸಾಧಿಸಿತು.
ಈ ವೇಳೆ ಒತ್ತಡಕ್ಕೆ ಸಿಲುಕಿದ ಭಾರತೀಯ ಆಟಗಾರರು ಪಂದ್ಯದಲ್ಲಿ ಮತ್ತೆ ನಿಯಂತ್ರಣ ಸಾಧಿಸುವ ಪ್ರಯತ್ನ ನಡೆಸಿದರು. ಈ ವೇಳೆ ಆಕ್ರಮಣಕಾರಿ ಆಟ ಮುಂದುವರಿಸಿದ ಓಮನ್ ತಂಡ ನಂತರದ ಹಂತದಲ್ಲಿ ಗೋಲು ದಾಖಲಿಸುವ ಪ್ರಯತ್ನ ಮುಂದುವರಿಸಿತು. ಆದರೆ ತಂಡದ ಗೋಲ್ ಕೀಪರ್ ಸುಬ್ರತಾ ಪಾಲ್ ಅತ್ಯುತ್ತಮ ರೀತಿಯಲ್ಲಿ ಎದುರಾಳಿ ತಂಡದ ಪ್ರಯತ್ನವನ್ನು ವಿಫಲಗೊಳಿಸಿದರು.

ಛೆಟ್ರಿ ಆಸರೆ: ಆರಂಭದಲ್ಲೇ ಒತ್ತಡಕ್ಕೆ ಸಿಲುಕಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದು ಪ್ರಮುಖ ಆಟಗಾರ ಸುನೀಲ್ ಛೆಟ್ರಿ. ಪಂದ್ಯದ 26 ನೇ ಮಿಮಿಷದಲ್ಲಿ ರಿನೋ ಆಂಟೋ ಅವರಿಂದ ಅತ್ಯುತ್ತಮ ಪಾಸ್ ಪಡೆದ ಛೆಟ್ರಿ ಎದುರಾಳಿ ತಂಡದ ಆಟಗಾರರನ್ನು ತಮ್ಮ ಚುರುಕಿನ ಪ್ರದರ್ಶನದಿಂದ ಕಟ್ಟಿ ಹಾಕಿದರು. ಈ ವೇಳೆ ಚೆಂಡನ್ನು ಗೋಲಿನತ್ತ ಕಳುಹಿಸಿದರು. ಚೆಂಡು ಎದುರಾಳಿ ಗೋಲ್ ಕೀಪರ್ ಆಲ್ ಹಬ್ಸಿ ಕೈಗೆ ಸಿಗದಂತೆ ಗೋಲು ಪೆಟ್ಟಿಗೆಯ ಬಲ ಕಂಬಕ್ಕೆ ಬಡಿದು ಒಳಗೆ ಸೇರಿಸುವ ಮೂಲಕ ಭಾರತಕ್ಕೆ ಮೊದಲ ಗೋಲು ದಾಖಲಾಯಿತು. ಈ ಮೂಲಕ ಭಾರತ ಪಂದ್ಯದಲ್ಲಿ ಸಮಬಲ ಸಾಧಿಸಿತು.
ಈ ಹಿಂದೆ ಓಮನ್ ವಿರುದ್ಧ ಭಾರತ 9 ಗೋಲು ದಾಖಲಿಸಿದ್ದು ಅದರಲ್ಲಿ 7 ಗೋಲು ಸುನೀಲ್ ಛೆಟ್ರಿ ದಾಖಲಿಸಿದ್ದರು. ಈ ಪಂದ್ಯದಲ್ಲೂ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ತಂಡಕ್ಕೆ ಆಸರೆಯಾದರು.
ಮುಳುವಾದ ಪೆನಾಲ್ಟಿ: ಪಂದ್ಯದಲ್ಲಿ ಉಭಯ ತಂಡಗಳು ಸಮಬಲ ಸಾಧಿಸಿ ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿದ್ದವು. 40 ನೇ ನಿಮಿಷದಲ್ಲಿ ಭಾರತದ ಆಟಗಾರರು ಫೌಲ್ ಮಾಡಿದ ಹಿನ್ನೆಲೆಯಲ್ಲಿ ಓಮನ್ ಗೆ ಪೆನಾಲ್ಟಿ ಅವಕಾಶ ಸಿಕ್ಕಿತು. ಈ ವೇಳೆ ಆಲ್ ಹೋಸನಿ ಗೋಲು ದಾಖಲಿಸಿ ತಂಡ ಮತ್ತೆ ಮುನ್ನಡೆ ಸಾಧಿಸುವಂತೆ ಮಾಡಿದರು. ಈ ಮೂಲಕ ಪಂದ್ಯದ ಮೊದಲಾರ್ಧದಲ್ಲಿ 2-1ರ ಮೇಲುಗೈ ಸಾಧಿಸಿತ್ತು,
ಪಂದ್ಯದ ದ್ವೀತಿಯಾರ್ಧದಲ್ಲಿ 68ನೇ ನಿಮಿಷದಲ್ಲಿ ಯುಗೆನ್ಸನ್ ಗೋಲು ದಾಖಲಿಸಿದರಾದರೂ ರಾಬಿನ್ ಸಿಂಗ್  ಆಫ್ ಸೈಡ್ ಇದ್ದ ಕಾರಣ ಭಾರತಕ್ಕೆ ಗೋಲು ಸಿಗಲಿಲ್ಲ. ಇದಾದ ನಂತರವೂ ಭಾರತ ಅಂತಿಮ ಕ್ಷಣದವರೆಗೂ ಹೊರಾಟ ನಡೆಸಿತಾದರೂ ಮತ್ತೆ ಗೋಲು ದಾಖಲಿಸಲು ಸಾಧ್ಯವಾಗಲಿಲ್ಲ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com