

ಮೀರ್ ಪುರ : ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡಿದ ಭಾರತ ತಂಡ ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗೆಲುವು ದಾಖಲಿಸಿದೆ. ಅಲ್ಲದೇ ಕ್ಲೀನ್ ಸ್ವೀಪ್ ಸೋಲಿನಿಂದ ಪಾರಾಗಿ ಮಾನ ಕಾಪಾಡಿಕೊಂಡಿದೆ.
ಶೇರ್- ಎ- ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ 77 ರನ್ ಗಳ ಗೆಲುವು ದಾಖಲಿಸಿತು. ಈ ಪಂದ್ಯದಲ್ಲಿ ಸೋತರೂ ಆತಿಥೇಯರು 2 -1 ಅಂತರದಲ್ಲಿ ಮೂರು ಏಕದಿನ ಪಂದ್ಯಗಳ ಸರಣಿ ಗೆದ್ದುಕೊಂಡಿದ್ದಾರೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಭಾರತ ತಂಡ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 317 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಬಾಂಗ್ಲಾ ದೇಶ 47 ಓವರ್ ಗಳಲ್ಲಿ 240 ರನ್ ಗಳಿಗೆ ಆಲ್ ಔಟ್ ಆಯಿತು. ಕಳೆದೆರಡು ಪಂದ್ಯಗಳಲ್ಲಿ ಸತತ ಸೋಲಿನಿಂದ ಕಂಗೆಟ್ಟಿದ್ದ ಭಾರತ ಕ್ಲೀನ್ ಸ್ವೀಪ್ ಮುಖಭಂಗಕ್ಕೆ ಗುರಿಯಾಗುವ ದುಗುಡದಲ್ಲಿದ್ದಿತಾದ್ದರಿಂದ ಎಚ್ಚೆರಿಕೆಯಿಂದಲೇ ಇನ್ನಿಂಗ್ಸ್ ಕಟ್ಟಲು ಮುಂದಾಯಿತು.
ಭಾರತ 39 ರನ್ ಗಳ ಅಲ್ಪಮೊತ್ತಕ್ಕೆ ಆರಂಭಿಕ ಆಟಗಾರ ರೋಹಿತ್ ಶರ್ಮಾ ಅವರನ್ನು ಕಳೆದುಕೊಂಡಿತು. ಆದರೆ ಶಿಖರ್ ಧವನ್ ಹಾಗೂ ಉಪನಾಯಕ ವಿರಾಟ್ ಕೊಹ್ಲಿ ಈ ಆರಂಭಿಕ ಆಘಾತದಿಂದ ತಂಡವನ್ನು ಪಾರು ಮಾಡುವಲ್ಲಿ ತುಸು ಶ್ರಮಿಸಿದರು. 2 ನೇ ವಿಕೆಟ್ ಗೆ 75 ರನ್ ಸೇರಿಸಿದ ಈ ಜೋಡಿ, ಉತ್ತಮ ಜೊತೆಯಾಟದ ಮೂಲಕ ತಂಡದ ಮೊತ್ತ 100 ರನ್ ಗಡಿದಾಟಲು ನೆರವಾಯಿತು.
ಕೊಹ್ಲಿ ನಿರ್ಗಮನದ ನಂತರ ಧವನ್ ಗೆ ಜೊತೆಯಾಗಿದ್ದು ನಾಯಕ ಮಹೇಂದ್ರ ಸಿಂಗ್ ಧೋನಿ. ಈ ಜೋಡಿ ಉಪಯುಕ್ತ 44 ರನ್ ಕಲೆಹಾಕಿತು. ಉತ್ತಮವಾಗಿ ಆಡುತ್ತಿದ್ದ ಶಿಖರ್ ಧವನ್ ವಿಕೆಟ್ ಒಪ್ಪಿಸಿ ಹೊರನಡೆದರು.
4 ನೇ ವಿಕೆಟ್ ಗೆ ರಾಯುಡು-ಧೋನಿ ಜೋಡಿ 93 ರನ್ ಗಳ ಜೊತೆಯಾಟವಾಡಿ ಇನಿಂಗ್ಸ್ ಗೆ ಶಕ್ತಿ ತುಂಬಿತು. ರಾಯುಡು ಅಂಪೈರ್ ಕೊಟ್ಟ ತೀರ್ಪಿಗೆ ಬಲಿಯಾದರೆ, ನಂತರ ಧೋನಿ ಔಟ್ ಆದರು. ಆ ನಂತರ ಬಿನ್ನಿ ಹಾಗೂ ಅಕ್ಷರ ಪಟೇಲ್ ಜೋಡಿ ತಂಡದ ಮೊತ್ತವನ್ನು 317 ರನ್ ಗಳಿಗೆ ಮುಟ್ಟಿಸಿದರು.
Advertisement