
ನವದೆಹಲಿ: ಏಷ್ಯನ್ ಚಾಂಪಿಯನ್ ಶಾಟ್‍ಪುಟ್‍ಪಟು ಇಂದರ್ ಜೀತ್ ಪ್ರಸಕ್ತ ಏಷ್ಯನ್ ಗ್ರ್ಯಾನ್ ಪ್ರೀ ಸೀರೀಸ್‍ನಲ್ಲಿ ಮತ್ತೊಂದು ಚಿನ್ನದ ಪದಕ ದಾಖಲಿಸಿದ್ದಾರೆ. ಇನ್ನು ಕರ್ನಾಟಕದ ಓಟಗಾರ್ತಿ ಎಂ.ಆರ್ ಪೂವಮ್ಮ 400 ಮೀ. ಓಟದಲ್ಲಿ ಕಂಚಿನ ಪದಕ ಪಡೆದರು.
ಗುರುವಾರ ಮುಕ್ತಾಯಗೊಂಡ ಕ್ರೀಡಾಕೂಟದಲ್ಲಿ ಭಾರತ ಒಟ್ಟು 3 ಚಿನ್ನ, 2 ಬೆಳ್ಳಿ ಹಾಗೂ 5 ಕಂಚು ಸೇರಿದಂತೆ ಒಟ್ಟು 10 ಪದಕಗಳನ್ನು ಸಂಪಾದಿಸಿದೆ. ಕೂಟದ ಆರಂಭಿಕ ದಿನ ಚಿನ್ನದ ಪದಕ ಗೆದ್ದಿದ್ದ ಇಂದರ್ ಜೀತ್, ಅಂತಿಮ ದಿನ 19.85 ಮೀ. ದೂರ ಎಸೆಯುವ ಮೂಲಕ
ಎರಡನೇ ಸ್ವರ್ಣವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಇಂದರ್ ಜೀತ್ ಜತೆಗೆ ಪುರುಷರ 800 ಮೀ. ಓಟದಲ್ಲಿ ಭಾರತದ ಭರವಸೆಯ ಓಟಗಾರ ಜಿನ್ಸನ್ ಜಾನ್ಸನ್ ಸಹ ಚಿನ್ನದ ಪದಕ ಸಂಪಾದಿಸಿದ್ದಾರೆ. 1:49.85 ನಿಮಿಷದಲ್ಲಿ ಗುರಿ ತಲುಪಿದ ಜಾನ್ಸನ್, ಅಗ್ರಸ್ಥಾನ ಪಡೆದರು. ಪುರುಷರ 400 ಮೀ. ಓಟದಲ್ಲಿ ಆರೋಕ್ಯ ರಾಜೀವ್ ತಮ್ಮ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿ ಕಂಚಿನ ಪದಕ ಸಂಪಾಸಿದ್ದಾರೆ.
ಮಹಿಳೆಯರ 400 ಮೀಟರ್ ಓಟದಲ್ಲಿ ಪೂವಮ್ಮ 52.72 ಸೆಕೆಂಡ್‍ಗಳಲ್ಲಿ ಗುರಿ ಮುಟ್ಟಿ, ಮೂರನೇ ಸ್ಥಾನ ಪಡೆದರು. ಲಾಂಗ್ ಜಂಪ್ ಪಟು ಅಂಕಿತ್ ಶರ್ಮಾ 7.80 ಉದ್ದ ಜಿಗಿಯುವ ಮೂಲಕ ಬೆಳ್ಳಿ ಪದಕ ಸಂಪಾದಿಸಿದರು. ಮಹಿಳೆಯರ 800 ಮೀ. ಓಟದಲ್ಲಿ ಎಂ.ಗೋಮತಿ 2:06:25 ನಿಮಿಷದಲ್ಲಿ ಗುರಿ ಮುಟ್ಟುವ ಮೂಲರ ಎರಡನೇ ಸ್ಥಾನ ಪಡೆದು ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಮಹಿಳೆಯರ 100 ಮೀ. ಹರ್ಡಲ್ಸ್‍ನಲ್ಲಿ ಗಾಯಿತ್ರಿ ಗೋವಿಂದರಾಜ್ 13.66 ಸೆಕೆಂಡ್ ಗಳಲ್ಲಿ ಗುರಿ ತಲುಪಿ ಕಂಚಿನ ಪದಕ ಪಡೆದರು.
ಮಹಿಳೆಯರ 100 ಮೀ. ಓಟದಲ್ಲಿ 11.72 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದ ಸ್ರಬಾನಿ ನಂದಾ ಮೂರನೇ ಸ್ಥಾನ ಪಡೆದು ಕಂಚಿನ ಪದಕ ಪಡೆದರು. ಇದು ಪ್ರಸಕ್ತ ಕೂಟದಲ್ಲಿ ಎರಡನೇ ಕಂಚಿನ ಪದಕವಾಗಿದೆ. ಇನ್ನು ಅರ್ಚನಾ 12.04 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿ 6ನೇ ಸ್ಥಾನ ಪಡೆದರು.
ಪುರುಷರ ಹಾಗೂ ಮಹಿಳೆಯರ 4/100 ಮಿ. ರಿಲೇನಲ್ಲಿ ಭಾರತ ತಂಡ ತಲಾ ಒಂದೊಂದು ಕಂಚಿನ ಪದಕ ಪಡೆದವು. ಪುರುಷರ ತಂಡ 39.60 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರೆ, ಮಹಿಳೆಯರ ತಂಡ 45.33 ಸೆಕೆಂಡ್ ಗಳಲ್ಲಿ ಗುರಿ ಮುಟ್ಟಿದರು.
Advertisement