
ನವದೆಹಲಿ: ಬಾಂಗ್ಲಾದೇಶದಲ್ಲಿನ ಸರಣಿ ಸೋಲಿನ ನಂತರ, ಜಿಂಬಾಂಬ್ವೆ ಪ್ರವಾಸ ಮಾಡುತ್ತಿರುವ ಟೀಂ ಇಂಡಿಯಾದಲ್ಲಿ ಹಿರಿಯ ಆಟಗಾರರಿಗೆ ವಿಶ್ವಾಂತಿ ನೀಡುವ ಸಾಧ್ಯತೆಗಳು ಹೆಚ್ಚಾಗಿವೆ.
ಸಂದೀಪ್ ಪಾಟೀಲ್ ನೇತೃತ್ವದ ಆಯ್ಕೆ ಸಮಿತಿ ಸಭೆ ನಡೆಸಿ ತಂಡ ಆಯ್ಕೆ ಮಾಡಲಿದ್ದು, ನಾಯಕ ಮಹೇಂದ್ರ ಸಿಂಗ್ ಧೋನಿ ಸೇರಿದಂತೆ ಇತರೆ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡುವ ಸಾಧ್ಯತೆಗಳಿವೆ. ಕಳೆದ 7 ತಿಂಗಳಿನಿಂದ ಭಾರತ ತಂಡ ಬಿಡುವಿಲ್ಲದೇ ವೇಳಾಪಟ್ಟಿಯಲ್ಲಿ ಸತತವಾಗಿ ಆಡುತ್ತಾ ಬಂದಿದೆ. ಅಲ್ಲದೇ ಇತ್ತೀಚೆಗಷ್ಟೇ ಬಾಂಗ್ಲಾ ಪ್ರವಾಸದಲ್ಲಿ ಭಾರತ ಸೋಲನುಭವಿಸಿತ್ತು.
ಜಿಂಬಾಂಬ್ವೆ ಪ್ರವಾಸದಲ್ಲಿ ಯುವ ಆಟಗಾರರಿಗೆ ಹೆಚ್ಚು ಆದ್ಯತೆ ನೀಡುವ ಸಾಧ್ಯತೆ ಇದೆ. ಮೂಲಗಳು ತಿಳಿಸಿರುವ ಪ್ರಕಾರ ನಾಯಕ ಮಹೇಂದ್ರ ಸಿಂಗ್ ಧೋನಿ, ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಮತ್ತು ಆರ್.ಅಶ್ವಿನ್ ವಿಶ್ವಾಂತಿ ಪಡೆಯುವ ಸಾಧ್ಯತೆ ಇದೆ.
ಹಿರಿಯ ಆಟಗಾರರ ಅಲಭ್ಯತೆಯಿಂದ ತೆರವಾಗಿರುವ ನಾಯಕತ್ವ ಸ್ಥಾನಕ್ಕೆ ರೋಹಿತ್ ಶರ್ಮಾ ಹಾಗೂ ಸುರೇಶ್ ರೈನಾ ಹೆಸರು ರೇಸ್ ನಲ್ಲಿದೆ. ಐಪಿಎಲ್ ನಲ್ಲಿ ಮುಂಬೈ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ ಹಿನ್ನೆಲೆಯಲ್ಲಿ ರೋಹಿತ್ ನಾಯಕರಾಗುವ ಸಾಧ್ಯತೆ ಹೆಚ್ಚಿದೆ. ಅಶ್ವಿನ್ ವಿಶ್ರಾಂತಿ ಪಡೆದರೆ, ಅಲ್ರೌಂಡರ್ ಪರ್ವೇಜ್ ರಸೂಲ್ ಅಥವಾ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಸ್ಥಾನ ಪಡೆಯುವ ಸಾಧ್ಯತೆ ಇದೆ. ಯುವಕರಿಗೆ ಆಯ್ಕೆದಾರರು ಮಣೆ ಹಾಕಿದರೆ ರಸೂಲ್ ಹಾದಿ ಸುಗಮವಾಗಲಿದೆ. ಇದೇ ವೇಳೆ ರಾಬಿನ್ ಉತ್ತಪ್ಪ ತಂಡದಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಕೆಲ ವಿವಾದಗಳಿಂದಾಗಿ ಈ ಟೂರ್ನಿ ನಡೆಯುವುದು ಅನುಮಾನವಾಗಿತ್ತು. ಈ ಎಲ್ಲಾ ಗೊಂದಲಗಳಿಗೆ ಶನಿವಾರವಷ್ಟೇ ಬಿಸಿಸಿಐ ತೆರೆ ಎಳೆದಿತ್ತು.
Advertisement