ಭಾರತದಲ್ಲಿ ಬಾಕ್ಸಿಂಗ್ ವೃತ್ತಿಜೀವನಕ್ಕೆ ವಿಜೇಂದರ್ ಗುಡ್ ಬೈ: ಇಂಗ್ಲೆಂಡ್ ಪ್ರತಿನಿಧಿಸುವ ಸಾಧ್ಯತೆ

ಬಾಕ್ಸರ್ ವಿಜೇಂದರ್ ಸಿಂಗ್ ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಇಂಗ್ಲೆಂಡ್ ದೇಶವನ್ನು ಪ್ರತಿನಿಧಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.
ಬಾಕ್ಸರ್ ವಿಜೇಂದರ್ ಸಿಂಗ್
ಬಾಕ್ಸರ್ ವಿಜೇಂದರ್ ಸಿಂಗ್

ನವದೆಹಲಿ: ಒಲಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಶೀಘ್ರವೇ ಭಾರತವನ್ನು ತೊರೆಯಲಿದ್ದು, ಇನ್ನು ಮುಂದೆ ಅಂತಾರಾಷ್ಟ್ರೀಯ ಪಂದ್ಯಾವಳಿಗಳಲ್ಲಿ ಇಂಗ್ಲೆಂಡ್ ದೇಶವನ್ನು ಪ್ರತಿನಿಧಿಸಬಹುದು ಎಂದು ಡೈಲಿ ಮೇಲ್ ವರದಿ ಮಾಡಿದೆ.

ಜೂ.29 ರಂದು ಸುದ್ದಿಗೋಷ್ಠಿ ನಡೆಸಲಿರುವ ಅವರು ತಮ್ಮ ಮುಂದಿನ ವೃತ್ತಿಜೀವನದ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ರೋಚಕ ಮಾಹಿತಿಯೊಂದು ಹೊರಬೀಳುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಕೆಲವಾರು ತಿಂಗಳುಗಳಿಂದೀಚೆಗೆ ಲಂಡನ್ ನಲ್ಲೇ ವಾಸ್ತವ್ಯ ಹೂಡಿರುವ ಅವರು ಸದ್ಯಕ್ಕೆ ಅಲ್ಲಿನ ಖ್ಯಾತ ಸಂಸ್ಥೆಯಾದ ಕ್ವೀನ್ಸ್ ಬೆರ್ರಿ ಪ್ರೊಮೋಷನ್ಸ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಲ್ಲೇ ತಮ್ಮ ತರಬೇತಿಯನ್ನು ಮುಂದುವರೆಸುವ ಮೂಲಕ ಭಾರತದಲ್ಲಿನ ತಮ್ಮ ವೃತ್ತಿಜೀವನಕ್ಕೆ ಇತಿಶ್ರೀ ಹಾಡಿ, ಇಂಗ್ಲೆಂಡ್ ನಲ್ಲಿ ತಮ್ಮ ಹೊಸ ಭವಿಷ್ಯ ಅರಸುವತ್ತ ದೃಷ್ಟಿ ಹಾಯಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಅಲ್ಲಿ ನಡೆಯುವ ಬಾಕ್ಸಿಂಗ್ ಪ್ರೊ ಲೀಗ್ ನಲ್ಲಿ ಪಾಲ್ಗೊಳ್ಳುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.

ವಿಜೇಂದರ್ ಸಿಂಗ್ ಗೆ ಫ್ರಾನ್ಸಿಸ್ ವಾರೆನ್ ಎಂಬ ಕ್ರೀಡಾ ಪ್ರವರ್ತಕ ನೆರವು ನೀಡುತ್ತಿದ್ದಾರೆ. ಕ್ವೀನ್ಸ್ ಬೆರ್ರಿ ಸಂಸ್ಥೆಗೆ ಅವರು ಮಾಲೀಕರು ಹೌದು.

ಶಿಬಿರಕ್ಕೆ ಅನುಮಾನ: ಮುಂದಿನ ತಿಂಗಳು ನಡೆಯಲಿರುವ ಏಷ್ಯನ್ ಚಾಂಪಿಯನ್ ಶಿಪ್ ನಲ್ಲಿ ಪಾಲ್ಗೊಳ್ಳಲು ತೆರಳಲಿರುವ ಭಾರತೀಯ ಬಾಕ್ಸರ್ ಗಳಿಗಾಗಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ, ಕೆಲದಿನಗಳ ಹಿಂದೆ ರಾಷ್ಟ್ರೀಯ ಬಾಕ್ಸಿಂಗ್ ತರಬೇತುದಾರ ಗುರುಬಕ್ಷ್ ಸಿಂಗ್ ಅವರಿಗೆ ಪತ್ರ ಬರೆದಿದ್ದ ವಿಜೇಂದರ್ ಸಿಂಗ್, ತಾವು ಶಿಬಿರಕ್ಕೆ ಜು.13 ರಂದು ಹಾಜರಾಗುವುದಾಗಿ ತಿಳಿಸಿದ್ದರು. ತಾವು ಲಂಡನ್ ನಲ್ಲಿರುವ ಕ್ವೀನ್ಸ್ ಬೆರ್ರಿ ಸಂಸ್ಥೆಯಲ್ಲಿ ವಿಶೇಷ ತರಬೇತಿಗಾಗಿ ತೆರಳುತ್ತಿದ್ದು, ತರಬೇತಿ ಮುಗಿದ ಕೂಡಲೆ ಶಿಬಿರವನ್ನು ಸೇರಿಕೊಳ್ಳುವುದಾಗಿ ತಿಳಿಸಿದ್ದರು. ಆದರೆ ಲಂಡನ್ ಗೆ ತೆರಳಿದ ನಂತರ ಅಲ್ಲಿನ ಅನುಕೂಲತೆಗಳಿಗೆ ಮಾರುಹೋದ ಅವರು ಈಗ ಮನಸ್ಸು ಬದಲಾಯಿಸಿದ್ದಾರೆ ಎನ್ನಲಾಗಿದೆ. ಹಾಗಾಗಿ ಭಾರತದಲ್ಲಿ ನಡೆಯಲಿರುವ ತರಬೇತಿ ಶಿಬಿರಕ್ಕೆ ಅವರು ಹಾಜರಾಗುವುದು ಬಹುತೇಕ ಅನುಮಾನ ಎನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com