ಪತ್ರಕರ್ತನ ಮೇಲೆ ವಿರಾಟ್ ಕೊಹ್ಲಿ ಕೂಗಾಟ, ನಂತರ ಕ್ಷಮೆಯಾಚನೆ

ಸದಾ ಮುಂಗೋಪಿಯೆಂದೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ತಮ್ಮ ಸಿಟ್ಟಿನಿಂದ ಮತ್ತೆ ಸುದ್ದಿಯಾಗಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ಪರ್ತ್: ಸದಾ ಮುಂಗೋಪಿಯೆಂದೇ ಹೆಸರುವಾಸಿಯಾಗಿರುವ ವಿರಾಟ್ ಕೊಹ್ಲಿ ತಮ್ಮ ಸಿಟ್ಟಿನಿಂದ ಮತ್ತೆ ಸುದ್ದಿಯಾಗಿದ್ದಾರೆ. ಮಂಗಳವಾರ ಟೀಂ ಇಂಡಿಯಾದ ಅಭ್ಯಾಸದ ನಂತರ ಆಸ್ಟ್ರೇಲಿಯಾ ದಿನಪತ್ರಿಕೆಯ ಪತ್ರಕರ್ತನಿಗೆ ಮಂಗಳಾರತಿ ಮಾಡಿ, ಆನಂತರ ಅವರ ಕ್ಷಮೆ ಕೇಳಿರುವ ಪ್ರಸಂಗ ನಡೆದಿದೆ.

ಶುಕ್ರವಾರ ನಡೆಯಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ವಿಶ್ವಕಪ್ ಪಂದ್ಯದ ಹಿನ್ನೆಲೆಯಲ್ಲಿ, ಟೀಂ ಇಂಡಿಯಾ ಅಭ್ಯಾಸ ನಡೆಸಿತು. ಅಭ್ಯಾಸದ ನಂತರ ಆಟಗಾರರು ಡ್ರೆಸ್ಸಿಂಗ್ ರೂಮ್ ಗೆ ತೆರಳುವಾಗ ಪತ್ರಕರ್ತರೊಂದಿಗೆ ಮುಖಾಮುಖಿಯಾದರು.

ಪತ್ರಕರ್ತರ ಗುಂಪನ್ನು ನೋಡಿದ ಕೂಡಲೇ ಕಿಡಿಕಾರಲಾರಂಭಿಸಿದ ಕೊಹ್ಲಿ, ಪತ್ರಕರ್ತರ ಹಿಂಡಿನಲ್ಲಿದ್ದ ಒಬ್ಬ ಪತ್ರಕರ್ತನ ವಿರುದ್ಧ ಹರಿಹಾಯ್ದರು. ತಮ್ಮ ಹಾಗೂ ನಟಿ ಅನುಷ್ಕಾ ಶರ್ಮಾ ಬಗ್ಗೆ ಇತ್ತೀಚೆಗೆ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದ್ದರ ಬಗ್ಗೆ ಆಕ್ಷೇಪವೆತ್ತಿದ ಕೊಹ್ಲಿ ಆ ವ್ಯಕ್ತಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರು.

ಆದರೆ, ವರದಿ ಪ್ರಕಟಿಸಿದ ಪತ್ರಕರ್ತ ಈತನಾಗಿರಲಿಲ್ಲ. ಇದನ್ನು ಅರಿಯದೇ ಕೊಹ್ಲಿ ಹರಿಹಾಯ್ದಿದ್ದರು. ಇದು, ತಂಡದ ವ್ಯವಸ್ಥಾಪಕ ರವಿಶಾಸ್ತ್ರಿಯವರ ಕಿವಿಗೆ ಬಿತ್ತು. ನಂತರ ಅವರು ವಿಚಾರಿಸಲಾಗಿ, ಸತ್ಯಾಂಶ ತಿಳಿದುಬಂತು. ತಕ್ಷಣ ಅವರು ಕೊಹ್ಲಿಯವರನ್ನು ಬೇಟಿಯಾಗಿ, ಅವರನ್ನು ಸಮಾಧಾನಪಡಿಸಿ ಪತ್ರಕರ್ತರ ಗುಂಪಿನಲ್ಲಿದ್ದ ವ್ಯಕ್ತಿಯನ್ನು ತಪ್ಪಾಗಿ ಅರ್ಥೈಸಿ ಬಯ್ದಿರುವುದಾಗಿ ತಿಳಿಸಿದರು.

ಅಲ್ಲದೇ, ಇಂಥ ಘಟನೆಗಳು ಭವಿಷ್ಯದಲ್ಲಿ ಟೀಂ ಇಂಡಿಯಾ ನಾಯಕನ ಪಟ್ಟ ಅಲಂಕರಿಸಬಹುದಾದ ಕೊಹ್ಲಿ ಬಗ್ಗೆ ಜನರಲ್ಲಿ ಕೆಟ್ಟ ಅಭಿಪ್ರಾಯ ಮೂಡುವ ಗಾಂಭೀರ್ಯತೆಯನ್ನೂ ವಿವರಿಸಿದರು. ಇದರಿಂದ ಎಚ್ಚೆತ್ತ ಕೊಹ್ಲಿ, ತನ್ನಿಂದ ವಾಗ್ದಂಡನೆಗೆ ಗುರಿಯಾದ ಪತ್ರಕರ್ತನನ್ನು ಡ್ರೆಸ್ಸಿಂಗ್ ರೂಮ್ ಗೆ ಕರೆಯಿಸಿಕೊಂಡು ಕ್ಷಮೆ ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com