ವಿಶ್ವಕಪ್: ದಕ್ಷಿಣ ಆಫ್ರಿಕಾ ವಿರುದ್ಧ ಪಾಕಿಸ್ತಾನಕ್ಕೆ ಜಯ

ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿಮಿತ್ತ ಶನಿವಾರ ಆಕ್ಲೆಂಡ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 29 ರನ್ ಗಳ ಭರ್ಜರಿ ಜಯಗಳಿಸಿದೆ..
ವಿಕೆಟ್ ಬಿದ್ದ ಸಂಭ್ರಮದಲ್ಲಿ ಪಾಕಿಸ್ತಾನಿ ಆಟಗಾರರು
ವಿಕೆಟ್ ಬಿದ್ದ ಸಂಭ್ರಮದಲ್ಲಿ ಪಾಕಿಸ್ತಾನಿ ಆಟಗಾರರು

ಆಕ್ಲೆಂಡ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ನಿಮಿತ್ತ ಶನಿವಾರ ಆಕ್ಲೆಂಡ್ ನಲ್ಲಿ ನಡೆದ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 29 ರನ್ ಗಳ ಭರ್ಜರಿ ಜಯಗಳಿಸಿದೆ.

ಟಾಸ್ ಗೆದ್ದರೂ ಪಾಕಿಸ್ತಾನವನ್ನು ದಕ್ಷಿಣ ಆಫ್ರಿಕಾ ತಂಡ ನಾಯಕ ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಗೆ ಇಳಿಸಿದರು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಪಾಕಿಸ್ತಾನ ತಂಡ ದಕ್ಷಿಣ ಆಫ್ರಿಕಾದ ಮಾರಕ ಬೌಲಿಂಗ್ ಗೆ ಕೇವಲ 222 ರನ್ ಗಳಿಗೆ ಕುಸಿಯಿತು. ಆರಂಭಿಕ ಆಟಗಾರ ಸರ್ಫರಾಜ್ ಅಹ್ಮದ್ 49 ರನ್, ಯೂನಿಸ್ ಖಾನ್ 37 ರನ್ ಮತ್ತು ನಾಯಕ ಮಿಸ್ಬಾ ಉಲ್ ಹಕ್ (56 ರನ್) ಅವರನ್ನು ಹೊರತು ಪಡಿಸಿದರೆ ಉಳಿದ ಯಾವ ಬ್ಯಾಟ್ಸ್ ಮನ್ ಕೂಡ ಕ್ರೀಸ್ ನಲ್ಲಿ ಗಟ್ಟಿಯಾಗಿ ನಿಲ್ಲುವ ಧೈರ್ಯ ಮಾಡಲಿಲ್ಲ.

ಪಂದ್ಯದ ನಡುವೆ ಮಳೆರಾಯನ ಆಗಮನವಾದ್ದರಿಂದ 50 ಓವರ್ ಗಳ ಪಂದ್ಯವನ್ನು ಡಕ್ವರ್ತ್ ಲೂಯಿಸ್ ನಿಯಮದ ಅನ್ವಯ 47 ಓವರ್ ಗಳಿಗೆ ಸೀಮಿತಗೊಳಿಸಲಾಯಿತು. ಅಂತಿಮವಾಗಿ ಪಾಕಿಸ್ತಾನ 46.4 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 222 ರನ್ ಗಳನ್ನು ಕಲೆಹಾಕಿತು.

ಪಾಕಿಸ್ತಾನ ನೀಡಿದ 223ರನ್ ಗಳ ಸಾಧಾರಣ ಮೊತ್ತವನ್ನು ಬೆನ್ನುಹತ್ತಿದ ದಕ್ಷಿಣ ಆಫ್ರಿಕಾ ತಂಡ ಆರಂಭದಲ್ಲಿಯೇ ಆಘಾತ ಎದುರಿಸಿತು. ಇನ್ನಿಂಗ್ಸ್ ನ ಮೊದಲ ಓವರ್ ನಲ್ಲಿಯೇ ಆರಂಭಿಕ ಆಟಗಾರ ಡಿಕಾಕ್ ಮಹಮದ್ ಇರ್ಫಾನ್ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರನಡೆದರು. ಮತ್ತೊಂದು ತುದಿಯಲ್ಲಿ ಮತ್ತೋರ್ವ ಆರಂಭಿಕ ಆಟಗಾರ ಹಶೀಂ ಆಮ್ಲಾ ಮತ್ತು ಡುಪ್ಲೆಸಿಸ್ ಜೋಡಿ ತಂಡಕ್ಕೆ ಉತ್ತಮ ಆರಂಭವನ್ನು ನೀಡಿತು. ಭರ್ಜರಿ ಅರ್ಧಶತಕದ ಜೊತೆಯಾಟವಾಡಿದ ಈ ಜೋಡಿಯನ್ನು ರಾಹತ್ ಅಲಿ ಬೇರ್ಪಡಿಸಿದರು. 27 ರನ್ ಗಳಿಸಿ ಆಟವಾಡುತ್ತಿದ್ದ ಡುಪ್ಲೆಸಿಸ್ ಸರ್ಫರಾಜ್ ಅಹಮದ್ ಕ್ಯಾಚ್ ನೀಡಿ ಔಟ್ಆದರು.

ಡುಪ್ಲೆಸಿಸ್ ಔಟ್ ಆಗುತ್ತಿದ್ದಂತೆಯೇ ಅವರ ಹಿಂದೆಯೇ ಆಮ್ಲಾ ಕೂಡ ಪೆವಿಲಿಯನ್ ಸೇರಿಕೊಂಡರು. ಆ ಬಳಿಕ ಬಂದ ರಾಸ್ಸೋವ್ 6 ರನ್ ಗಳಿಸಿ ಔಟ್ ಆದರು. ಈ ಹಂತದಲ್ಲಿ ಪಂದ್ಯ ಎಲ್ಲೋ ದಕ್ಷಿಣ ಆಫ್ರಿಕಾ ತಂಡ ಕೈಯಿಂದ ಜಾರುತ್ತಿದೆ ಎಂದೆನಿಸಿತು. ಆದರೆ ನಾಯಕ ಎಬಿ ಡಿವಿಲಿಯರ್ಸ್ ದಕ್ಷಿಣ ಆಫ್ರಿಕಾದ ಜಯದ ಆಸೆಯನ್ನು ಚಿಗುರಿಸಿದರು. ಭರ್ಜರಿ ಆಟವಾಡಿದ ಎಬಿಡಿ ಕೇವಲ 58 ಎಸೆತಗಳಲ್ಲಿ 77 ರನ್ ಸಿಡಿಸಿದರು. ಆದರೆ ವಿಪರ್ಯಾಸವೆಂದರೆ ನಾಯಕ ಎಬಿಡಿ ತಂಡದ ಇತರೆ ಯಾವುದೇ ಆಟಗಾರರು ಸಾಥ್ ನೀಡಲಿಲ್ಲ. ಡಿಎ ಮಿಲ್ಲರ್ (0 ರನ್), ಜೆಪಿ ಡುಮಿನಿ (12 ರನ್), ಸ್ಟೇಯ್ನ್ (16 ರನ್), ಅಬಾಟ್ (12), ಮಾರ್ಕೆಲ್ (6 ರನ್), ಇಮ್ರಾನ್ ತಾಹಿರ್  (0 ರನ್) ಯಾರೂ ಕೂಡ ಎಬಿಡಿ ಸಾಥ್ ನೀಡಲೇ ಇಲ್ಲ. ಅಂತಿಮವಾಗಿ ದಕ್ಷಿಣ ಆಫ್ರಿಕಾ ತಂಡ 202 ರನ್ ಗಳಿಗೆ ಆಲ್ ಔಟ್ ಆಗುವ ಮೂಲಕ ಪಾಕಿಸ್ತಾನದ ವಿರುದ್ಧ 29 ರನ್ ಗಳ ಹೀನಾಯ ಸೋಲು ಅನುಭವಿಸಿತು.

ಪಾಕಿಸ್ತಾನದ ಸರ್ಫರಾಜ್ ಅಹಮದ್ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com