ಗುಪ್ಟಿಲ್ ಆಟಕ್ಕೆ ಬಾಂಗ್ಲಾ ಗುಪ್ ಚುಪ್

ಆರಕ್ಕೆ ಆರೂ ಲೀಗ್ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ತನ್ನ ಗುಂಪಿನಲ್ಲಿ ಸೋಲಿನ ಕಹಿ ಅನುಭವಿಸದೇ, ಕ್ವಾರ್ಟರ್ ಫೈನಲ್‍ನಲ್ಲಿ ಒಂದು ಪ್ರಬಲ ತಂಡವಾಗಿ ..
ಮಾರ್ಟಿನ್ ಗುಪ್ಟಿಲ್
ಮಾರ್ಟಿನ್ ಗುಪ್ಟಿಲ್

ಹ್ಯಾಮಿಲ್ಟನ್: ಆರಕ್ಕೆ ಆರೂ ಲೀಗ್ ಪಂದ್ಯಗಳನ್ನು ಗೆದ್ದುಕೊಳ್ಳುವ ಮೂಲಕ ತನ್ನ ಗುಂಪಿನಲ್ಲಿ ಸೋಲಿನ ಕಹಿ ಅನುಭವಿಸದೇ, ಕ್ವಾರ್ಟರ್ ಫೈನಲ್‍ನಲ್ಲಿ ಒಂದು ಪ್ರಬಲ ತಂಡವಾಗಿ ನ್ಯೂಜಿಲೆಂಡ್ ನಿಂತಿದೆ. ಸೆಡ್ಡಾನ್ ಪಾರ್ಕ್‍ನಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಗೆಲ್ಲಲು ಬಾಂಗ್ಲಾದೇಶ ಒಡ್ಡಿದ್ದ 289 ರನ್‍ಗಳ ಸ್ಪರ್ಧಾತ್ಮಕ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿದ ನ್ಯೂಜಿಲೆಂಡ್ ಇನ್ನೂ 7 ಎಸೆತಗಳು ಉಳಿದಿರುವಂತೆಯೇ  7 ವಿಕೆಟ್ ನಷ್ಟಕ್ಕೆ 290 ರನ್‍ಗಳಿಸಿ 3 ವಿಕೆಟ್‍ಗಳಿಂದ ಜಯದ ನಗೆ ಬೀರಿತು. ಆರಂಭಿಕ ಮಾರ್ಟಿನ್ ಗುಪ್ಟಿಲ್ ಶತಕ
ಸಿಡಿಸಿ ನ್ಯೂಜಿಲೆಂಡ್ ತಂಡಕ್ಕೆ ನಿರೀಕ್ಷಿತ ಗೆಲವು ತಂದುಕೊಟ್ಟರು. ಒಂದು ಹಂತದಲ್ಲಿ ನ್ಯೂಜಿಲೆಂಡ್ ಮೇಲೂ ಸೋಲಿನ ಆತಂಕದ ಛಾಯೆ  ಮೂಡಿತ್ತು. ಕೊನೆಯ 5 ಓವರುಗಳಲ್ಲಿ ನ್ಯೂಜಿಲೆಂಡ್‍ಗೆ ಗೆಲ್ಲಲು 40 ರನ್‍ಗಳು ಬೇಕಿತ್ತು. ವೆಟೋರಿ ಮತ್ತು ಸೌಥೀ ವೇಗವಾಗಿ ರನ್‍ಗಳಿಸಿ ಗೆಲವು ಖಾತ್ರಿಪಡಿಸಿದರು. ಬಾಂಗ್ಲಾದೇಶ ಪರ ನಾಯಕ ಶಕೀಬ್ ಅಲ್ ಹಸನ್ ಅತ್ಯುತ್ತಮ ದಾಳಿ ನಡೆಸಿ 4 ವಿಕೆಟ್ ಪಡೆದರು. ಗಂಟಲು ನೋವಿನಿಂದ ಬಳಲುತ್ತಿದ್ದ ಕಾರಣ ನಾಯಕ ಮಶ್ರಫ್  ಮೊರ್ತಜಾ ಪಂದ್ಯದಿಂದ ಹೊರಗುಳಿದಿದ್ದರು. ಅವರ ಬದಲು ಶಕೀಬ್ ಅಲ್ ಹಸನ್ ತಂಡವನ್ನು ಮುನ್ನಡೆಸಿದರು.
ಮಹಮದುಲ್ಲಾ ದಾಖಲೆ ಶತಕ ಇದಕ್ಕೂ ಮುನ್ನ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಬಾಂಗ್ಲಾದೇಶ 50 ಓವರುಗಳಲ್ಲಿ 7 ವಿಕೆಟ್ ನಷ್ಟಕ್ಕೆ
288 ರನ್‍ಗಳಿಸಿತು. ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಮಹಮದುಲ್ಲಾ ಶತಕ ಗಳಿಸಿ ಗಮನ ಸೆಳೆದರು. ಇದು ಮಹಮದುಲ್ಲಾಗೆ ಈ ವಿಶ್ವಕಪ್‍ನಲ್ಲಿ ಸತತ ಎರಡನೇ ಶತಕವಾಗಿದೆ. ಆ ಮೂಲಕ ವಿಶ್ವಕಪ್‍ನಲ್ಲಿ ಸತತ ಎರಡು ಶತಕ ಸಂಪಾದಿಸಿದ ಬಾಂಗ್ಲಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅಡಿಲೇಡ್‍ನಲ್ಲಿ ನಡೆದ ಕಳೆದ ಪಂದ್ಯದಲ್ಲಿ ಅವರು ಇಂಗ್ಲೆಂಡ್  ವಿರುದ್ಧ  ಶತಕ ಸಿಡಿಸಿದ್ದರು. ಮಹಮದುಲ್ಲಾ ಕೇವಲ 1 ರನ್‍ಗಳಿಸಿದಾಗ ಜೀವದಾನ ಪಡೆದರು. ಸೌಥೀ ಬೌಲಿಂಗ್‍ನಲ್ಲಿ ನೀಡಿದ್ದ ಕ್ಯಾಚ್ ಅನ್ನು ಎರಡನೇ ಸ್ಲಿಪ್‍ನಲ್ಲಿದ್ದ ಆ್ಯಂಡರ್ಸನ್, ನೆಲಕ್ಕೆ ಹಾಕಿದ್ದರು. ಈ ಜೀವದಾನದ ಲಾಭ ಪಡೆದ ಬಾಂಗ್ಲಾ ದಾಂಡಿಗ ಅಂತಿಮವಾಗಿ ಉತ್ತಮ ಸಾಧನೆಯನ್ನೇ ಮಾಡಿದರು. ಕೊನೆಯ 10 ಓವರುಗಳಲ್ಲಿ ಅಬ್ಬರಿಸಿದ ಬಾಂಗ್ಲಾದೇಶ ಬ್ಯಾಟ್ಸ್‍ಮನ್‍ಗಳು 104 ರನ್ ಸಿಡಿಸಿ ಉತ್ತಮ ಮೊತ್ತ ಪೇರಿಸುವಲ್ಲಿ ಯಶಸ್ವಿಯಾದರು. ಆದರೆ, ಬೌಲರ್‍ಗಳು ಎದುರಾಳಿ ದಾಂಡಿಗರನ್ನು ಕಟ್ಟಿಹಾಕುವಲ್ಲಿ ವಿಫಲರಾಗಿದ್ದರಿಂದ ಅಂತಿಮವಾಗಿ ಬಾಂಗ್ಲಾ ಗೌರವಯುತ ಸೋಲಿನೊಂದಿಗೆ ಲೀಗ್ ಹಂತ ಪೂರೈಸಿ, ಮುನ್ನಡೆಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com