ಚೇತರಿಕೆ ಕಂಡ ಚಾಂಪಿಯನ್ನರು

ಇರಾನಿ ಕಪ್ ಪಂದ್ಯದ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಕರ್ನಾಟಕ ಕುಸಿತದಿಂದ ಆಘಾತ ಅನುಭವಿಸಿದರೂ...
ಮನೀಷ್ ಪಾಂಡೆ ಆಟದ ಭಂಗಿ
ಮನೀಷ್ ಪಾಂಡೆ ಆಟದ ಭಂಗಿ
Updated on

ಬೆಂಗಳೂರು: ಇರಾನಿ ಕಪ್ ಪಂದ್ಯದ ಮೂರನೇ ದಿನದಾಟದ ಮೊದಲ ಅವಧಿಯಲ್ಲಿ ಕರ್ನಾಟಕ ಕುಸಿತದಿಂದ ಆಘಾತ ಅನುಭವಿಸಿದರೂ, ನಂತರ ಜವಾಬ್ದಾರಿಯುತ ಜತೆಯಾಟಗಳ ನೆರವಿನಿಂದ ಶೇಷ ಭಾರತಕ್ಕೆ ಸ್ಪರ್ಧಾತ್ಮಕ ಗುರಿ ನೀಡುವತ್ತ ಸಾಗಿದೆ.

ಚಿನ್ನಸ್ವಾಮಿ ಅಂಗಣದಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನವಾದ ಗುರುವಾರ ಕರ್ನಾಟಕ ತಂಡ ಮೇಲುಗೈ ಸಾಧಿಸಿದೆ. ಪಂದ್ಯದ 2ನೇ ದಿನವಾದ ಬುಧವಾರದ ಅಂತ್ಯದ ಮೊತ್ತ 39ರನ್‍ಗಳಿಂದ 3ನೇ ದಿನದಾಟ ಆರಂಭಿಸಿದ ಕರ್ನಾಟಕ, ಆಟ ನಿಂತಾಗ 93 ಓವರ್‍ಗಳಲ್ಲಿ 6 ವಿಕೆಟ್ ಕಳೆದುಕೊಂಡು 341 ರನ್ ದಾಖಲಿಸಿದೆ. ಮೊದಲ ಇನಿಂಗ್ಸ್‍ನಲ್ಲಿ 20 ರನಗಳ ಹಿನ್ನಡೆ ಅನುಭವಿಸಿದ್ದ ಕರ್ನಾಟಕ, ಶೇಷ ಭಾರತದ ವಿರುದ್ಧ 321 ರನ್‍ಗಳ ಮುನ್ನಡೆ ಪಡೆದಿದೆ. 4ನೇ ದಿನ ಸಾಧ್ಯವಾದಷ್ಟು ಹೆಚ್ಚು ರನ್ ಕಲೆ ಹಾಕಿ ಎದುರಾಳಿಗಳ ಮೇಲೆ ನಿಯಂತ್ರಣ ಸಾಧಿಸುವ ಚಿಂತನೆ ವಿನಯ್ ಪಡೆಯದ್ದಾಗಿದೆ.

ಆರಂಭದಲ್ಲಿ ಆಘಾತ
ದಿನದಾಟ ಆರಂಭಿಸಿದ ರಾಜ್ಯ ಬ್ಯಾಟ್ಸ್ ಮನ್‍ಗಳು ಉತ್ತಮ ಆರಂಭ ಪಡೆಯಲಿಲ್ಲ. ಮೊದಲ ಅವಧಿಯಲ್ಲೇ 3 ವಿಕೆಟ್ ಕಳೆದುಕೊಂಡ ಆತಿಥೇಯರು, ಒತ್ತಡಕ್ಕೆ ಸಿಲುಕಿದರು. ಮಾಯಂಕ್ (28), ಅಭಿಷೇಕ್ (31) ಹಾಗೂ ಉತ್ತಪ್ಪ (6) ದೊಡ್ಡ ಇನಿಂಗ್ಸ್ ಆಡುವ ನಿರೀಕ್ಷೆಯನ್ನು ಹುಸಿಗೊಳಿಸಿದರು. ಅಗ್ರಕ್ರಮಾಂಕದ ಆಟಗಾರ ಆರ್.ಸಮರ್ಥ ರಕ್ಷಣಾತ್ಮಕ ಬ್ಯಾಟಿಂಗ್‍ನಿಂದ ತಂಡದ ಕುಸಿತಕ್ಕೆ ತಡೆಯಾಗಿ ನಿಂತರು. ತಾಳ್ಮೆಯ ಆಟ ಪ್ರದರ್ಶಿಸಿದ ಸಮರ್ಥ್ 10 ಬೌಂಡರಿಗಳ ನೆರವಿನಿಂದ 81 ರನ್ ಕಲೆಹಾಕಿದರು.

ಮಹತ್ವದ ಜತೆಯಾಟ
ಸಮರ್ಥ್ ವಿಕೆಟ್ ಕಳೆದುಕೊಂಡಾಗ ಕರ್ನಾಟಕ ಸುಸ್ಥಿತಿಗೆ ತಲುಪಿರಲಿಲ್ಲ. ತಂಡದ ಮೇಲೆ ಒತ್ತಡ ಹಾಗೇ ಇತ್ತು. ಆಗ ಜತೆಯಾದ ಕರುಣ್ ನಾಯರ್ ಹಾಗೂ ಮನೀಷ್ ಪಾಂಡೆ ತಂಡಕ್ಕೆ ಮಹತ್ವದ ಶತಕದ ಜತೆಯಾಟ ನೀಡಿದರು. ಈ ಜೋಡಿಯನ್ನು ಬೇರ್ಪಡಿಸಲು ಶೇಷ ಭಾರತದ ನಾಯಕ ಮನೋಜ್ ತಿವಾರಿ ಬೌಲಿಂಗ್ ಹಾಗೂ ಫೀಲ್ಡಿಂಗ್‍ನಲ್ಲಿ ಸಾಕಷ್ಟು ಪ್ರಯೋಗ ನಡೆಸಿದರೂ ಫಲ ಸಿಗಲಿಲ್ಲ. ಕರುಣ್-ಪಾಂಡೆ 5ನೇ ವಿಕೆಟ್‍ಗೆ 106 ರನ್ ದಾಖಲಿಸಿ ತಂಡವನ್ನು ಸುಸ್ಥಿತಿಗೆ ಕರೆದೊಯ್ಯುವ ಪ್ರಯತ್ನ ನಡೆಸಿದರು. 12 ಬೌಂಡರಿ ನೆರವಿನಿಂದ 80 ರನ್ ದಾಖಲಿಸಿದ್ದ ಕರುಣ್, ಪ್ರಗ್ಯಾನ್ ಓಜಾ ಎಸೆತದಲ್ಲಿ ಎಲ್‍ಬಿ ಬಲೆಗೆ ಬೀಳುವ ಮೂಲಕ ಈ ಜೋಡಿ ಬೇರ್ಪಟ್ಟಿತು.

ಕರುಣ್ ನಂತರ ಬಂದ ಶ್ರೇಯಸ್ ಗೋಪಾಲ್, ಖಾತೆ ತೆರೆಯುವ ಮುನ್ನವೇ ವಿಕೆಟ್ ಒಪ್ಪಿಸಿದರು. ಸತತವಾಗಿ 2 ವಿಕೆಟ್ ಕಳೆದುಕೊಂಡ ನಂತರ, ಕರ್ನಾಟಕದ ಪಾಳಯದಲ್ಲಿ ಮತ್ತೆ ಗೊಂದಲ ಮೂಡಿತು. ಆದರೆ 7ನೇ ವಿಕೆಟ್‍ಗೆ ಮನೀಷ್ ಪಾಂಡೆ ಜತೆಗೂಡಿದ ನಾಯಕ ವಿನಯï ಕುಮಾರ್, ಇನಿಂಗ್ಸ್ ಕಟ್ಟುವತ್ತ ಗಮನ ಹರಿಸಿದರು. ಈ ಜೋಡಿ ಮುರಿಯದ 7ನೇ ವಿಕೆಟ್‍ಗೆ 52 ರನ್ ಕಲೆ ಹಾಕುವ ಮೂಲಕ ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದಿರಿಸಿದೆ. ಮನೀಷ್ ಪಾಂಡೆ 73 ಹಾಗೂ ವಿನಯ್ ಕುಮಾರ್ 28 ರನ್ ಗಳಿಸಿ ಕ್ರೀಸ್‍ನಲ್ಲಿದ್ದಾರೆ. ವರವಾದ ಜೀವದಾನ: ಶೇಷ ಭಾರತದ ಬೌಲರ್‍ಗಳು ದಿನದಾಟದಲ್ಲಿ ಅನಗತ್ಯವಾಗಿ ಅಂಪೈರ್‍ಗಳಿಗೆ ಮನವಿ ಸಲ್ಲಿಸುತ್ತಿದ್ದರು. ಇದರ ಜತೆಗೆ ಅಂಪೈರ್ ಕೆಟ್ಟ ತೀರ್ಪು, ಮತ್ತೊಂದೆಡೆ ಕ್ಯಾಚ್ ಹಾಗೂ ರನೌಟ್ ಅವಕಾಶ ಕೈಚೆಲ್ಲಿದ್ದು ಕರ್ನಾಟಕ ಸ್ಪರ್ಧಾತ್ಮಕ ಮೊತ್ತದೆಡೆಗೆ ಸಾಗಲು ನೆರವಾಯಿತು.

77.6 ಓವರ್‍ನಲ್ಲಿ ಕರುಣ್‍ರನ್ನು ರನೌಟ್ ಮಾಡುವ ಸುಲಭ ಅವಕಾಶವನ್ನು ಪ್ರಗ್ಯಾನ್ ಓಜಾ ಉಪಯೋಗಿಸಿಕೊಳ್ಳಲಿಲ್ಲ. 80.1 ಓವರ್ ವೇಳೆ ಪ್ರಗ್ಯಾನ್ ಓಜಾ ಎಸೆತದಲ್ಲಿ 50 ರನ್ ದಾಖಲಿಸಿದ್ದ ಮನೀಷ್ ಪಾಂಡೆ ಬ್ಯಾಟ್ ಮತ್ತು ಪ್ಯಾಡ್‍ಗೆ ಬಡಿದ ಚೆಂಡು ಸಿಲ್ಲಿ ಪಾಯಿಂಟ್‍ನತ್ತ ಸಾಗಿತು. ಆಗ ಕ್ಷೇತ್ರರಕ್ಷಕ ಜೀವನ್ ಜೋತ್ ಸಿಂಗ್ ಅದನ್ನು ಕ್ಯಾಚ್ ಆಗಿ ಪರಿವರ್ತಿಸಿದ್ದರು. ಆದರೆ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿ ಜೀವದಾನ ನೀಡಿದರು. ಇನ್ನು 81.3ನೇ ಓವರ್‍ನಲ್ಲಿ ರಿಶಿ ಧವನ್ ಎಸೆತದಲ್ಲಿ 6ರನ್ ಗಳಿಸಿದ್ದ ವಿನಯ್, ಸ್ಲಿಪ್‍ಗೆ ಕ್ಯಾಚ್ ನೀಡಿದ್ದರು. 2ನೇ ಸ್ಲಿಪ್‍ನಲ್ಲಿದ್ದ ಉನ್ಮುಕ್ತ್ ಚಾಂದ್ ಈ ಅವಕಾಶ ಕೈಚೆಲ್ಲಿದರು. ಇದು ಶೇಷ ಭಾರತದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.

ಸ್ಪಿನ್ನರ್‍ಗಳಿಗೆ ಪಿಚ್ ನೆರವು
ಆಟ ಸಾಗಿದಂತೆ ಚಿನ್ನಸ್ವಾಮಿ ಪಿಚ್, ಸ್ಪಿನ್ನರ್‍ಗಳಿಗೆ ನೆರವು ನೀಡಲಾರಂಬಿsಸಿದೆ. ಪ್ರಗ್ಯಾನ್ ಓಜಾ ಹಾಗೂ ಜಯಂತ್ ಯಾದವ್ ಎಸೆತದಲ್ಲಿ ಚೆಂಡು ಹೆಚ್ಚು ತಿರುವು ಪಡೆದಿದ್ದು ಕಂಡು ಬಂದಿತು. ಕರ್ನಾಟಕ ತಂಡ 4ನೇ ದಿನ ಸಾಧ್ಯವಾದಷ್ಟು ಹೆಚ್ಚು ರನ್ ಕಲೆ ಹಾಕಿ ಬಿಗಿ ಹಿಡಿತ ಸಾಧಿಸುವ ಚಿಂತನೆ ನಡೆಸಿದೆ. ಕರ್ನಾಟಕ ನಾಲ್ಕನೇ ದಿನದಾಟದಲ್ಲಿ ಅರ್ಧದಷ್ಟು ಬ್ಯಾಟಿಂಗ್ ನಡೆಸಿ 350ರಿಂದ 400ರಷ್ಟು ಗುರಿ ನೀಡಿದರೆ, ಎದುರಾಳಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಲಿದೆ.

ಅರ್ಧಶತಕದ ಸ್ಕೋರ್ ವಿವರ
ಕರ್ನಾಟಕ ಮೊದಲ ಇನಿಂಗ್ಸ್ 244
ಶೇಷ ಭಾರತ ಮೊದಲ ಇನಿಂಗ್ಸ್ 264
ಕರ್ನಾಟಕ ಎರಡನೇ ಇನಿಂಗ್ಸ್ 6 ವಿಕೆಟ್‍ಗೆ 341

(ಎರಡನೇ ದಿನದಾಟ 39ರಿಂದ ಮುಂದುವರಿದಿದೆ)
ಸಮರ್ಥ್ ಬಿ ಶಾರ್ದುಲ್ 81, ಮಾಯಾಂಕ್ ಸಿ
ಕೇದಾರ್ ಬಿ ವರುಣ್ 28, ಅಭಿಷೇಕ್ ಎಲ್‍ಬಿ ಬಿ
ಪ್ರಗ್ಯಾನ್ 31, ಉತ್ತಪ್ಪ ಬಿ ವರುಣ್ 6, ಕರುಣ್ ಎಲ್‍ಬಿ
ಬಿ ಪ್ರಗ್ಯಾನ್ 80, ಮನೀಷ್ ಬ್ಯಾಟಿಂಗ್ 73, ಶ್ರೇಯಸ್
ಸಿ ನಮನ್ ಬಿ ರಿಶಿ 0, ವಿನಯï ಬ್ಯಾಟಿಂಗ್ 28.

ಇತರೆ: (ಬೈ 5, ಲೆಗ್ ಬೈ 2, ವೈಡ್ 7) 14.

ವಿಕೆಟ್ ಪತನ: 1--54, 2--105, 3--121, 4--182,
5--288, 6--289.

ಬೌಲಿಂಗ್ ವಿವರ: ರಿಶಿ ಧವನ್ 21-1-74-1, ವರುಣ್
20-2-85-2, ಶಾರ್ದುಲ್ 21-4-60-1, ಪ್ರಗ್ಯಾನ್
26-3-93-2, ಜಯಂತ್ 4-0-16-0, ಮನೋಜ್
1-0-6-0.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com