
ಸಿಡ್ನಿ: ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಸಧ್ಯಕ್ಕೆ ತಾವು ಕ್ರಿಕೆಟ್ ನಿಂದ ನಿವೃತ್ತರಾಗುತ್ತಿಲ್ಲ ಎಂದು ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸೆಮಿಫೈನಲ್ ಪಂದ್ಯದ ಸೋಲಿನ ಬಳಿಕ ಸಿಡ್ನಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ವೇಳೆ ಧೋನಿ, ತಮ್ಮ ನಿವೃತ್ತಿ ಕುರಿತಂತೆ ಎದ್ದಿದ್ದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ಧೋನಿ, "ನನಗಿನ್ನೂ 33 ವರ್ಷ ವಯಸ್ಸು. ಈಗಲೂ ಆಡುತ್ತಿದ್ದೇನೆ, ಫಿಟ್ ಆಗಿದ್ದೇನೆ. ಮುಂದಿನ ವರ್ಷದ ಟಿ20 ವಿಶ್ವಕಪ್ ಆಡಲು ಬಯಸುತ್ತೇನೆ. 2019ರ ವಿಶ್ವಕಪ್'ನಲ್ಲಿ ಆಡಬೇಕೋ ಬೇಡವೋ ಎಂಬುದನ್ನ ಮುಂದಿನ ವರ್ಷ ನಿರ್ಧರಿಸುತ್ತೇನೆ.." ಎಂದು ಹೇಳಿದ್ದಾರೆ.
ಈ ಹಿಂದೆ 2015ರ ವಿಶ್ವಕಪ್ ಬಳಿಕ ಧೋನಿ ಏಕದಿನ ಕ್ರಿಕೆಟ್ ಗೆ ನಿವೃತ್ತಿ ಹೇಳುತ್ತಾರೆ ಎಂದು ಹೇಳಲಾಗುತ್ತಿತ್ತು. ಆದರೆ ಸ್ವತಃ ಧೋನಿ ಅವರೇ ತಮ್ಮ ನಿವೃತ್ತಿ ಕುರಿತಂತೆ ಸ್ಪಷ್ಟನೆ ನೀಡಿದ್ದು, ಇದೇ ಅವರ ಕೊನೆಯ ವಿಶ್ವಕಪ್ ಎಂಬುದು ಖಚಿತವಿಲ್ಲ. ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ವರೆಗಾದರೂ ಧೋನಿ ಟೀಮ್ ಇಂಡಿಯಾದಲ್ಲಿರುವುದು ಖಚಿತವಾಗಿದೆ. ಭಾರತ ಕ್ರಿಕೆಟ್ ಕಂಡ ಅತ್ಯಂತ ಯಶಸ್ವೀ ನಾಯಕರಲ್ಲಿ ಒಬ್ಬರಾಗಿರುವ ಮಹೇಂದ್ರ ಸಿಂಗ್ ಧೋನಿ ಕೂಲ್ ಕ್ಯಾಪ್ಟನ್ ಎಂದೇ ಪ್ರಸಿದ್ದಿ ಪಡೆದವರಾಗಿದ್ದು, ಎಂತಹುದೇ ಕಠಿಣ ಪರಿಸ್ಥಿತಿ ಎದುರಾದರೂ ಸಮಾಧಾನದಿಂದ ಎದುರಿಸುತ್ತಾರೆ. 2007ರ ಚೊಚ್ಚಲ ಟಿ20 ವಿಶ್ವಕಪ್'ನಲ್ಲಿ ಚಾಂಪಿಯನ್ ಆದ ಭಾರತ ತಂಡಕ್ಕೆ ಮಹೇಂದ್ರ ಸಿಂಗ್ ಧೋನಿಯೇ ನೇತೃತ್ವ ವಹಿಸಿದ್ದರು. ಎರಡನೇ ಬಾರಿ ಟಿ20 ವಿಶ್ವಕಪ್ ಎತ್ತಿಹಿಡಿಯಲು ಧೋನಿ ಕಾತರರಾಗಿರುವುದಂತೂ ಸ್ಪಷ್ಟ.
Advertisement