ಸಿಡ್ನಿ: ಮಧ್ಯಮ ಹಾಗೂ ಕೆಳ ಕ್ರಮಾಂಕದ ಬ್ಯಾಟ್ಸ್ ಮನ್ ಗಳು ಜವಾಬ್ದಾರಿ ಮರೆತು ಆಡಿದ್ದು ಮುಳುವಾಯಿತು... ಇದು ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ, ಸೆಮಿಫೈನಲ್ ಪಂದ್ಯದಲ್ಲಿ ಸೋತಿದ್ದಕ್ಕೆ ನೀಡಿದ ಒನ್‍ಲೈನ್ ವಿಶ್ಲೇಷಣೆ.
ಪಂದ್ಯ ಮುಗಿದ ಮೇಲೆ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಗೆ ಹಾಜರಾಗಿದ್ದ ಧೋನಿ, ಎಂದಿನಂತೆ ಕೂಲ್ ಕ್ಯಾಪ್ಟನ್ ಆಗಿಯೇ ಕಾಣಿಸಿಕೊಂಡರು. ಆದರೂ, ತಮ್ಮ ನೋವನ್ನು ಮುಚ್ಚಿಡಲು ಅವರಿಂದ ಸಾಧ್ಯವಾಗಲೇ ಇಲ್ಲ.
ಮಾತುಕತೆ ವೇಳೆ, ಅವರ ಕಣ್ಣಾಲಿಗಳು ತೇವಗೊಂಡವು. ಕೆಲವೇ ತಿಂಗಳುಗಳ ಹಿಂದೆ ಆಸೀಸ್ ನೆಲದಲ್ಲಿ ಟೆಸ್ಟ್ ಸರಣಿ ಸೋತಿದ್ದಕ್ಕೆ ಟೆಸ್ಟ್ ತಂಡದ ನಾಯಕತ್ವ ಸ್ಥಾನದಿಂದ ನಿವೃತ್ತಿ ಘೋಷಿಸಿದ್ದನ್ನು ಪ್ರಸ್ತಾಪಿಸಿದ ಪತ್ರಕರ್ತರು, ಇದೀಗ ವಿಶ್ವಕಪ್ ಟೂರ್ನಿಯಿಂದ ಹೊರಬಂದಿದ್ದಕ್ಕೆ ನೈತಿಕ ಹೊಣೆ ಹೊತ್ತು ಏಕದಿನ ಮಾದರಿಯಿಂದಲೂ ನಿವೃತ್ತಿ ಘೋಷಿಸುವಿರಾ ಎಂದು ಚುಚ್ಚಿದರು.
ಇದಕ್ಕೆ ನಗುತ್ತಲೇ ಉತ್ತರಿಸಿದ ಧೋನಿ, ಮುಂದಿನ ವರ್ಷ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿ ಮುಗಿಯುವವರೆಗೂ ನಿವೃತ್ತಿ ಘೋಷಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಕೊಹ್ಲಿ ಕೆಟ್ಟ ಹೊಡೆತಕ್ಕೆ ಮುಂದಾದರು. ಅದು ಕ್ರೀಡೆಯಲ್ಲಿ ಸಹಜ. ಅವರನ್ನು ದೂಷಿಸುವುದು ಸರಿಯಲ್ಲ ಎಂದು ಕೊಹ್ಲಿಯನ್ನು ಸಮರ್ಥಿಸಿಕೊಂಡರು.
ಮಾದರಿ ನಾಯಕ
ಇದೇ ವಿಶ್ವಕಪ್‍ನಲ್ಲಿ ಪಂದ್ಯಗಳನ್ನು ಗೆದ್ದಾಗ ಯಾವುದೇ ಸುದ್ದಿಗೋಷ್ಠಿಗೆ ಬರದೇ ತಂಡದ ಇತರ ಸದಸ್ಯರನ್ನು ಪತ್ರಕರ್ತರತ್ತ ಕಳುಹಿಸಿದ್ದ ಧೋನಿ, ಪಂದ್ಯ ಸೋತಾಗ ಖುದ್ದು ತಾವೇ ಪತ್ರಕರ್ತರನ್ನು ಎದುರಿಸಿದ್ದು ಧೋನಿಯಲ್ಲಿರುವ ಒಬ್ಬ ಮಾದರಿ ನಾಯಕ'ನನ್ನು ಅನಾವರಣಗೊಳಿಸಿತ್ತು.
Advertisement